ತೆಲಂಗಾಣದಲ್ಲಿ ಅಧಿಕಾರದ ಸನಿಹಕ್ಕೆ ಟಿಆರ್‌ಎಸ್: ನೀವು ತಿಳಿಯಬೇಕಾದ 10 ಅಂಶಗಳು

7
ವಿಫಲವಾಯ್ತೆ ಮಹಾಕೂಟಮಿ ಪ್ರಯೋಗ?

ತೆಲಂಗಾಣದಲ್ಲಿ ಅಧಿಕಾರದ ಸನಿಹಕ್ಕೆ ಟಿಆರ್‌ಎಸ್: ನೀವು ತಿಳಿಯಬೇಕಾದ 10 ಅಂಶಗಳು

Published:
Updated:

ಹೈದರಾಬಾದ್: ಅವಧಿಗೆ ಮೊದಲೇ ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸುವ ನಿರ್ಧಾರ ಪ್ರಕಟಿಸಿದಾಗ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ರಾವ್ (ಕೆಸಿಆರ್) ಅವರ ನಡೆಯ ಬಗ್ಗೆ ದೇಶದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಡಿ.11ರಂದು ಅವರ ನಡೆ ಫಲ ಕೊಡುವುದು ಖಚಿತ ಎನಿಸಿದೆ. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅಧಿಕಾರಕ್ಕೆ ಸನಿಹಕ್ಕೆ ಬಂದಿದೆ.

ತೆಲಂಗಾಣದಲ್ಲಿ ಈ ಬಾರಿ ಟಿಆರ್‌ಎಸ್ ಮತ್ತು ಕಾಂಗ್ರೆಸ್ ನೇತೃತ್ವದ ‘ಪ್ರಜಾಕೂಟಮಿ’ ನಡುವೆ ದ್ವಿಪಕ್ಷೀಯ ಹೋರಾಟ ಇತ್ತು. ಪ್ರಜಾಕೂಟಮಿಯಲ್ಲಿ ಕಾಂಗ್ರೆಸ್ ಜೊತೆಗೆ ತೆಲುಗು ದೇಶಂ, ತೆಲಂಗಾಣ ಜನ ಸಮಿತಿ ಮತ್ತು ಸಿಪಿಐ ಕೈಜೋಡಿಸಿತ್ತು. ಟಿಡಿಪಿ ಜೊತೆಗೆ ನಂಟು ಮುರಿದ ಹಿನ್ನೆಲೆಯಲ್ಲಿ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸಿತ್ತು.

ತೆಲಂಗಾಣದ ಚುನಾವಣೆಗೆ ಸಂಬಂಧಿಸಿದ ಕುತೂಹಲಕಾರಿ ಹತ್ತು ಅಂಶಗಳು ಇಲ್ಲಿವೆ.

1) ತೆಲಂಗಾಣದ ಒಟ್ಟು 119 ಕ್ಷೇತ್ರಗಳಿಗೆ ಡಿ.7ರಂದು ಮತದಾನ ನಡೆದಿತ್ತು. 1821 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.

2) ಎಲ್ಲ ಮತಗಟ್ಟೆ ಸಮೀಕ್ಷೆಗಳು ಟಿಆರ್‌ಎಸ್ ಅಧಿಕಾರಕ್ಕೆ ಬರಲಿದೆ ಎಂದೇ ಭವಿಷ್ಯ ನುಡಿದಿದ್ದವು. ಇದು ರಾಜ್ಯವಾಗಿ ರೂಪುಗೊಂಡ ನಂತರ ತೆಲಂಗಾಣ ಜನರಿಗೆ ಎರಡನೇ ವಿಧಾನಸಭೆ ಚುನಾವಣೆ. ಮೊದಲ ಚುನಾವಣೆ 2014ರಲ್ಲಿ ನಡೆದಿತ್ತು.

3) ತೆಲಂಗಾಣದ ಬಿಜೆಪಿ ನಾಯಕ ಕೆ.ಲಕ್ಷ್ಮಣ್ ಟಿಆರ್‌ಎಸ್ ಜೊತೆಗೆ ಹೊಂದಾಣಿಕೆಯ ಪ್ರಸ್ತಾವ ಮುಂದಿಡುವುದರೊಂದಿಗೆ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದವು. ಉನ್ನತ ನಾಯಕರ ಗಮನಕ್ಕೆ ತಾರದೆ ಹೊಂದಾಣಿಕೆ ಪ್ರಸ್ತಾವ ಮುಂದಿಟ್ಟಿದ್ದಕ್ಕಾಗಿ ಲಕ್ಷ್ಮಣ್ ವಿರುದ್ಧ ಪಕ್ಷ ಶಿಸ್ತುಕ್ರಮ ಜರುಗಿಸಿತ್ತು.

4) ಎಣ್ಣೆ–ಸೀಗೇಕಾಯಿಯಂತಿದ್ದ ಕಾಂಗ್ರೆಸ್‌ ಮತ್ತು ಟಿಡಿಪಿ ಚುನಾವಣೆ ಹಿನ್ನೆಲೆಯಲ್ಲಿ ಹಾಲು–ನೀರಿನಂತೆ ಬೆರೆತುಕೊಂಡು ಪ್ರಜಾಕೂಟಮಿ ರಚನೆಗೆ ಕಾರಣವಾದವು. ಸಿಪಿಐ ಮತ್ತು ತೆಲಂಗಾಣ ಜನ ಸಮಿತಿ ಸಹ ಪ್ರಜಾಕೂಟಮಿಯ ಪಾಲುದಾರ ಪಕ್ಷಗಳಾದವು.

5) ನಿನ್ನೆಯಷ್ಟೇ (ಸೋಮವಾರ– ಡಿ.10) ರಾಜ್ಯಪಾಲ ಇ.ಎಸ್.ಎಲ್.ನರಸಿಂಹನ್ ಅವರನ್ನು ಸಂಪರ್ಕಿಸಿದ್ದ ಪ್ರಜಾಕೂಟಮಿಯ ನಾಯಕರು, ‘ರಾಜ್ಯದಲ್ಲಿ ಯಾವುದೇ ಪಕ್ಷಕ್ಕೆ ಬಹುಮತ ಬಾರದಿದ್ದರೆ ಸರ್ಕಾರ ರಚಿಸಲು ನಮಗೆ ಮೊದಲ ಅವಕಾಶ ನೀಡಬೇಕು. ನಮ್ಮದು ಚುನಾವಣಾ ಪೂರ್ವ ಮೈತ್ರಿಕೂಟ’ ಎಂದು ಕೋರಿದ್ದರು. 

6) ಮುಸ್ಲಿಂ ನಾಯಕ ಅಸಾದುದ್ದೀನ್ ಓವೈಸಿ ಅವರ ಎಐಎಂಐಎಂ ಹೈದರಾಬಾದ್‌ನ ಎಲ್ಲ 8 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಟಿಆರ್‌ಎಸ್‌ಗೆ ನನ್ನ ಬೆಂಬಲ ಎಂದು ಓವೈಸಿ ಈಗಾಗಲೇ ಘೋಷಿಸಿದ್ದಾರೆ.

7) ಡಿ.2ರಂದು ಟಿಆರ್‌ಎಸ್‌ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿತು. ಚಾಲ್ತಿಯಲ್ಲಿರುವ ಕಾರ್ಯಕ್ರಮಗಳ ಜೊತೆಗೆ ಮತದಾರರಿಗೆ ಭರವಸೆ ನೀಡುವ ಸಾಕಷ್ಟು ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿತ್ತು. ಪಿಂಚಣಿ ಯೋಜನೆ, ಮೀಸಲಾತಿ, ಅರಣ್ಯ ಭೂಮಿ ವಿವಾದ ಪರಿಹಾರ, ನಿವೃತ್ತಿಯ ವಯೋಮಿತಿ ಏರಿಕೆ, ನಿರುದ್ಯೋಗ ಸಮಸ್ಯೆಗೆ ಪರಿಹಾರ ಟಿಆರ್‌ಎಸ್ ಪ್ರಣಾಳಿಕೆಯಲ್ಲಿದ್ದ ಮುಖ್ಯ ಅಂಶಗಳು.

8) ಪ್ರಜಾಕೂಟಮಿಯ ಪ್ರಣಾಳಿಕೆ ಬಿಡುಗಡೆಯಾಗಿದ್ದ ಡಿ.7ಕ್ಕೆ. 10 ಅಂಶಗಳ ಅಜೆಂಡಾದೊಂದಿಗೆ ಮತದಾರರ ಗಮನ ಸೆಳೆಯಲು ಪ್ರಜಾಕೂಮಿ ಯತ್ನಿಸಿತು. ನಿರುದ್ಯೋಗ, ಬೇಸಾಯ, ಶಿಕ್ಷಣ, ಆರೋಗ್ಯ, ಆಡಳಿತ ಸುಧಾರಣೆ ಮತ್ತು ಹುತಾತ್ಮರ ಉದ್ಯಾನ ನಿರ್ಮಿಸುವ ಭರವಸೆಯನ್ನು ಪ್ರಜಾಕೂಟಮಿ ನೀಡಿತ್ತು.

9) 2014ರಲ್ಲಿ ನಡೆದಿದ್ದ ವಿಧಾನಸಭಾ ಚುನಾವಣೆಯಲ್ಲಿ ಟಿಆರ್‌ಎಸ್ 63, ಕಾಂಗ್ರೆಸ್ 21, ಟಿಡಿಪಿ 15, ಎಐಎಂಐಎಂ 7, ಬಿಜೆಪಿ 5 ಮತ್ತು ಪಕ್ಷೇತರರು 8 ಸ್ಥಾನಗಳಲ್ಲಿ ಜಯಗಳಿಸಿದ್ದರು.

10) ಚುನಾವಣೆ ಪ್ರಚಾರದ ವೇಳೆ ರಾಹುಲ್‌ ಗಾಂಧಿ ‘ಟಿಆರ್‌ಎಸ್‌ ಪಕ್ಷ ಪ್ರಧಾನಿ ನರೇಂದ್ರ ಮೋದಿ ಅವರ ಬಿ ಟೀಂ’ ಎಂದು ಟೀಕಿಸಿದ್ದರು.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !