ಶುಕ್ರವಾರ, ಫೆಬ್ರವರಿ 26, 2021
20 °C

‘ಜಿಹಾದ್‌’ ಪದ ಬಳಸಿದವರೆಲ್ಲ ಉಗ್ರರಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ‘ಜಿಹಾದ್‌’ ಎಂಬ ಪದ ಬಳಸಿದ ಕಾರಣಕ್ಕೆ ಯಾವುದೇ ವ್ಯಕ್ತಿಯನ್ನು ಭಯೋತ್ಪಾದಕನೆಂದು ಕರೆಯಲಾಗದು ಎಂದು ಮಹಾರಾಷ್ಟ್ರದ ಅಕೋಲದ ನ್ಯಾಯಾಲಯ ಹೇಳಿದೆ.

ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದ ಮೂವರನ್ನು ದೋಷಮುಕ್ತಗೊಳಿಸಿದ ನ್ಯಾಯಾಧೀಶ ಎ.ಎಸ್‌. ಜಾಧವ್‌ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಬ್ದುಲ್‌ ರಜಾಕ್‌ (24), ಶೋಯೆಬ್ ಖಾನ್‌ (24) ಮತ್ತು ಸಲೀಂ ಮಲಿಕ್‌  ಆರೋಪಮುಕ್ತಗೊಂಡವರು.

2015ರಲ್ಲಿ  ಪುಸದ್‌ ಪ್ರದೇಶದ ಮಸೀದಿಯೊಂದರ ಬಳಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಇವರ ಮೇಲೆ ಪ್ರಕರಣ ದಾಖಲಾಗಿತ್ತು.

ಗೋಮಾಂಸ ನಿಷೇಧದ ಸಂದರ್ಭದಲ್ಲಿ ಈ ಕೃತ್ಯ ನಡೆದಿದ್ದು, ಚೂರಿಯಿಂದ ರಜಾಕ್‌ ಇಬ್ಬರು ಪೊಲೀಸರ ಮೇಲೆ ಇರಿದಿದ್ದ ಎಂದು ಸರ್ಕಾರಿ ವಕೀಲರು ಆರೋಪಿಸಿದ್ದರು.

ಭಯೋತ್ಪಾದಕ ಸಂಘಟನೆಗಳಿಗೆ ಸೇರುವಂತೆ ಮುಸ್ಲಿಂ ಯುವಕರನ್ನು ಪ್ರೇರೇಪಿಸುವ ಪಿತೂರಿಯಲ್ಲಿ ಈ ಮೂವರು ಭಾಗಿಯಾಗಿದ್ದರು ಎಂದು ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್‌) ಆರೋಪಿಸಿತ್ತು.

‘ಆರೋಪಿ ರಜಾಕ್‌ ಗೋಮಾಂಸ ನಿಷೇಧದ ವಿರುದ್ಧ ಸರ್ಕಾರ ಹಾಗೂ ಹಿಂದೂ ಸಂಘಟನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾನೆ’ ಎಂದು ನ್ಯಾಯಾಧೀಶರು ಹೇಳಿದ್ದಾರೆ.

’ಆತ ‘ಜಿಹಾದ್‌’ ಪದವನ್ನು ಬಳಸಿದ್ದಾನೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಈ ಪದವನ್ನು ಬಳಸಿದ್ದಾನೆ ಎನ್ನುವ ಕಾರಣಕ್ಕೆ ಆತನಿಗೆ ಉಗ್ರನೆಂಬ ಹಣೆಪಟ್ಟಿ ಕಟ್ಟುವುದು ಸರಿಯಲ್ಲ’ ಎಂದೂ ಅಭಿಪ್ರಾಯಪಟ್ಟಿದ್ದಾರೆ.

‘ಜಿಹಾದ್‌’ ಎಂಬುದು ಅರೇಬಿಕ್‌ ಪದ ಇದಕ್ಕೆ ನಿಘಂಟಿನಲ್ಲಿ ‘ಹೋರಾಟ’ ಎಂಬ ಅರ್ಥ ಇದೆ ಎಂದೂ ನ್ಯಾಯಾಧೀಶರು ಹೇಳಿದ್ದಾರೆ.

ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ರಜಾಕ್‌ ಈಗಾಗಲೇ ಮೂರು ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ್ದು, ಈಗ ಆತನನ್ನು ಬಿಡುಗಡೆಗೊಳಿಸಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು