ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ನಗರದಲ್ಲಿ ರಾಹುಲ್ ಭರ್ಜರಿ ಪ್ರಚಾರ

ದೊಡ್ಡಗಣಪತಿ ಗುಡಿ, ಮಸ್ತಾನ್ ಷಾ ದರ್ಗಾಕ್ಕೆ ಭೇಟಿ
Last Updated 9 ಮೇ 2018, 20:00 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬುಧವಾರ ದಿನವಿಡೀ ರೋಡ್‌ ಷೋ ಮತ್ತು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸಿ, ಪಕ್ಷದ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ಮಾಡಿದರು.

ಬೆಳಿಗ್ಗೆ 11.15ಕ್ಕೆ ಬಸವನಗುಡಿ ದೊಡ್ಡಗಣಪತಿ ದೇವಸ್ಥಾನಕ್ಕೆ ಬಂದ ಅವರನ್ನು ಮಂಗಳವಾದ್ಯ ಹಾಗೂ ಪೂರ್ಣಕುಂಭದೊಂದಿಗೆ ಸ್ವಾಗತಿಸ
ಲಾಯಿತು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್, ಗೃಹಸಚಿವ ರಾಮಲಿಂಗಾರೆಡ್ಡಿ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್ ರಾಹುಲ್‌ಗೆ ಸಾಥ್ ನೀಡಿದರು.

ಪೂಜೆ ಬಳಿಕ ಅರ್ಚಕರು ರಾಹುಲ್‌ಗೆ ಹಾರ ಹಾಕಿ, ಗಣಪತಿ ಫೋಟೊವನ್ನು ಉಡುಗೊರೆ ನೀಡಿದರು. ಒಂದು ಸುತ್ತು ಪ್ರದಕ್ಷಿಣೆ ಹಾಕಿದ ರಾಹುಲ್, ಅರ್ಚಕರಿಂದ ದೇವಸ್ಥಾನದ ಇತಿಹಾಸ ತಿಳಿದುಕೊಂಡು, 20 ನಿಮಿಷಗಳ ಬಳಿಕ ಹೊರಬಂದರು. ಆಶ್ರಮ ವೃತ್ತದಿಂದ ದೇವಸ್ಥಾನದವರೆಗೂ ಕಾರ್ಯಕರ್ತರು ಹಾಗೂ ಅಭಿಮಾನಿಗಳು ರಸ್ತೆಯ ಎರಡೂ ಬದಿಗಳಲ್ಲಿ ನಿಂತು, ‘ರಾಹುಲ್‌.. ರಾಹುಲ್..’ ಎಂದು ಕೂಗುತ್ತಿದ್ದರು.

ನಂತರ ರಾಹುಲ್‌, ಕಾಟನ್ ಪೇಟೆ ಹಜರತ್ ತವಕ್ಕಲ್ ಮಸ್ತಾನ್ ಷಾ ದರ್ಗಾಕ್ಕೆ ಭೇಟಿ ನೀಡಿದರು. ಬಿಟಿಎಂ ಲೇಔಟ್‌ನಲ್ಲಿ ಸಂಚರಿಸಿದ ಅವರು ಗಾರ್ಮೆಂಟ್ಸ್ ಕಾರ್ಖಾನೆಗಳ ನೌಕರರ ಜೊತೆ ಸಂವಾದ ನಡೆಸಿದರು.

ಶಿವಾಜಿನಗರದಲ್ಲಿ ಸಭೆ: ರಸೆಲ್ ಮಾರ್ಕೆಟ್ ಬಳಿ ಸಭೆ ನಡೆಸಿದ ಅವರು, ‘ಅಕ್ಕ-ಪಕ್ಕ ಭ್ರಷ್ಟರನ್ನೇ ಕೂರಿಸಿಕೊಂಡಿರುವ ಮೋದಿ, ಭ್ರಷ್ಟಾಚಾರದ ಬಗ್ಗೆ ನೀತಿ ಪಾಠ ಮಾಡುತ್ತಿದ್ದಾರೆ’ ಎಂದು ಲೇವಡಿ ಮಾಡಿದರು.

‘ಮೋದಿ ನನ್ನ ವಿರುದ್ಧ ಹಗುರವಾದ ಮಾತುಗಳನ್ನಾಡಿ ಬಾಯಿ ಮುಚ್ಚಿಸಲು ಯತ್ನಿಸುತ್ತಿದ್ದಾರೆ. ಆದರೆ, ನಾನು ಅವರಿಗೆ ಹೆದರುವುದಿಲ್ಲ. ಮುಂದೆಯೂ ಪ್ರಶ್ನೆಗಳನ್ನು ಕೇಳುತ್ತಲೇ ಇರುತ್ತೇನೆ. ಕಳ್ಳರನ್ನು, ಅತ್ಯಾಚಾರಿಗಳನ್ನು ವಿಧಾನಸೌಧದ ಮೆಟ್ಟಿಲೇರಲು ಬಿಡುವುದಿಲ್ಲ’ ಎಂದರು.

ಶಿವಾಜಿನಗರದ ಜನರು ರೋಷನ್‌ ಬೇಗ್‌ ಅವರಿಗೆ ಮತ ಚಲಾಯಿಸಿ ಎಂದು ರಾಹುಲ್‌ ಮನವಿ ಮಾಡಿದರು.

ರಾಹುಲ್ ಗಾಂಧಿ ಗುರುವಾರ ರಾಜ್ಯ ರಾಜಧಾನಿಯ 10 ವಿಧಾನಸಭಾ ಕ್ಷೇತ್ರಗಳನ್ನು ಕೇಂದ್ರೀಕರಿಸಿ ಪ್ರಚಾರ ನಡೆಸಿದರು. ಚಿಕ್ಕಪೇಟೆ, ಬಿಟಿಎಂ
ಲೇ ಔಟ್, ಗಾಂಧಿ ನಗರ, ಹೆಬ್ಬಾಳ, ಸಿ.ವಿ. ರಾಮನ್ ನಗರ ಸೇರಿ 10 ಕ್ಷೇತ್ರದಲ್ಲಿ ರೋಡ್ ಷೋ ನಡೆಸಿದರು.

ಹೊಸೂರು ರಸ್ತೆ, ಮೆಜೆಸ್ಟಿಕ್, ಕೆ.ಜಿ. ರಸ್ತೆಯಲ್ಲಿ ರಾಹುಲ್ ರೋಡ್‌ ಷೋ ನಡೆಸಿದ್ದರಿಂದ ಬಹಳ ಹೊತ್ತು ಸಂಚಾರ ಅಸ್ತವ್ಯಸ್ತವಾಯಿತು.

ನೇತಾಡುತ್ತಲೇ ‘ಕೈ’ ಬೀಸಿದ ಅಭ್ಯರ್ಥಿ!

ಬಸವನಗುಡಿ ದೊಡ್ಡಗಣಪತಿ ದೇವಸ್ಥಾನದಿಂದ ಹೊರಬಂದ ಕೂಡಲೇ ರಾಹುಲ್‌ ಪಕ್ಷದ ಕಾರ್ಯಕರ್ತರತ್ತ ಕೈ ಬೀಸಿ ವಾಹನ ಏರಿದರು. ಅವರಿದ್ದ ವಾಹನ ಭರ್ರನೆ ಅಲ್ಲಿಂದ ಹೊರಟಿತು.

ಅಷ್ಟೊತ್ತಿಗೆ ಅಲ್ಲಿಗೆ ಬಂದ ಕ್ಷೇತ್ರದ ಅಭ್ಯರ್ಥಿ ಬೋರೇಗೌಡ, ಓಡಿ ಬಂದು ವಾಹನದ ಹಿಂಬದಿಯ ಏಣಿಗೆ ಜೋತು ಬಿದ್ದರು. ಹಿಂದಿನ ಬಾಗಿಲು ತೆಗೆಯುವಂತೆ ಎಷ್ಟೇ ಮನವಿ ಮಾಡಿದರೂ, ಭದ್ರತಾ ಸಿಬ್ಬಂದಿ ಸೊಪ್ಪು ಹಾಕಲಿಲ್ಲ.

‘ನಾನೂ ಕಾಂಗ್ರೆಸ್ ಪಕ್ಷದವನೇ. ಈ ಕ್ಷೇತ್ರದ ಅಭ್ಯರ್ಥಿ. ನಿಮ್ಮೊಟ್ಟಿಗೇ ದೇವಸ್ಥಾನಕ್ಕೆ ಬಂದವನು. ಬಾಗಿಲು ತೆಗೆಯಿರಿ’ ಎಂದು ಅವರು ಕೂಗುತ್ತಿದ್ದರು. ಆದರೆ, ಸಿಬ್ಬಂದಿಯ ಗಮನ ರಾಹುಲ್ ಕಡೆಗೇ ಇದ್ದುದರಿಂದ ಬೋರೇಗೌಡ ಅತ್ತ–ಇತ್ತ ನೋಡಿ ಸುಮ್ಮನಾದರು. ನೇತಾಡುತ್ತಲೇ ಜನರ ಕಡೆ ಕೈ ಬೀಸುತ್ತಿದ್ದರು. ಅವರ ಪಾಡು ನೋಡಿ ಕಾರ್ಯಕರ್ತರು ನಗೆಗಡಲಲ್ಲಿ ತೇಲಿದರು.

ಎಂಟಿಆರ್ ರುಚಿ ಸವಿದ ರಾಹುಲ್‌

* ಲಾಲ್‌ಬಾಗ್ ರಸ್ತೆಯಲ್ಲಿರುವ ಎಂಟಿಆರ್ ಹೊಟೇಲ್‌ನಲ್ಲಿ ರಾಹುಲ್ ಉಪಾಹಾರ ಸೇವಿಸಿದರು. ಪೂರಿ ಮತ್ತು ಮಸಾಲೆ ದೋಸೆ ಸವಿದರು.

* ನ್ಯೂ ತಿಪ್ಪಸಂದ್ರದಲ್ಲಿ ರಾಹುಲ್ ಜೊತೆ ಯುವತಿಯೊಬ್ಬಳು ಸೆಲ್ಫಿ ತೆಗಿಸಿಕೊಳ್ಳಲು ಹರಸಾಹಸಪಟ್ಟ ಪ್ರಸಂಗ ನಡೆಯಿತು. ರಾಹುಲ್ ಇದ್ದ ವಾಹನದ ಬಳಿ ಬಂದ ಯುವತಿ, ಸೆಲ್ಫಿಗೆ ಅವಕಾಶ ನೀಡುವಂತೆ ರಾಹುಲ್‌ಗೆ ಮನವಿ ಮಾಡಿದಳು. ಪೊಲೀಸರು ಅದಕ್ಕೆ ಒಪ್ಪದಿದ್ದಾಗ ಗೋಳಾಡಿದ ಯುವತಿಯನ್ನು ನೋಡಿ, ಹತ್ತಿರ ಕರೆದ ರಾಹುಲ್, ಸೆಲ್ಫಿ ಕ್ಲಿಕ್ಕಿಸಿಕೊಂಡರು.

* ಸಿ.ವಿ. ರಾಮನ್ ನಗರದಲ್ಲಿ ರಾಹುಲ್ ಬಳಿ ನುಗ್ಗಿ ಬಂದ ಯುವಕನನ್ನು ಪೊಲೀಸರು ತಡೆದರು. ಆಗ ಪೊಲೀಸರು ಮತ್ತು ಯುವಕನ ಮಧ್ಯೆ ಜಟಾಪಟಿ ನಡೆಯಿತು.

* ತಿಪ್ಪಸಂದ್ರದಿಂದ ಹೆಬ್ಬಾಳಕ್ಕೆ ರಾಹುಲ್ ತೆರಳುವಾಗ ಜೀರೊ ಟ್ರಾಫಿಕ್ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ಬಂದ ಆಂಬ್ಯುಲೆನ್ಸ್‌ಗೆ ಮುಂದೆ ಹೋಗಲು ರಾಹುಲ್‌ ದಾರಿ ಮಾಡಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT