ಮಂಗಳವಾರ, ಆಗಸ್ಟ್ 20, 2019
25 °C
ತ್ರಿವಳಿ ತಲಾಖ್ ಅರ್ಜಿದಾರರಲ್ಲಿ ಒಬ್ಬರು

ಹನುಮಾನ್ ಚಾಲೀಸಾ ಪಠಿಸಿದ್ದಕ್ಕೆ ಜೀವ ಬೆದರಿಕೆ: ಇಶ್ರತ್ ಜಹಾನ್

Published:
Updated:
Prajavani

ಕೋಲ್ಕತ್ತ: ಶಿರವಸ್ತ್ರ (ಹಿಜಾಬ್) ಧರಿಸಿ ಹನುಮಾನ್ ಚಾಲೀಸಾ ಪಠಣದಲ್ಲಿ ಪಾಲ್ಗೊಂಡಿದ್ದಕ್ಕಾಗಿ ತನಗೆ ಕೊಲೆ ಬೆದರಿಕೆ ಒಡ್ಡಲಾಗಿದೆ ಎಂದು ಇಶ್ರತ್ ಜಹಾನ್ ಅವರು ಹೌರಾದ ಗೋಲಬಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ತ್ರಿವಳಿ ತಲಾಖ್ ಪದ್ಧತಿ ವಿರೋಧಿಸಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವ ಐವರು ಅರ್ಜಿದಾರರಲ್ಲಿ ಇಶ್ರತ್ ಸಹ ಒಬ್ಬರು.

‘ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ನನ್ನ ಮೈದುನ ಹಾಗೂ ಮನೆಯ ಮಾಲೀಕರು ನನ್ನನ್ನು ಅವಾಚ್ಯವಾಗಿ ನಿಂದಿಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ’ ಎಂದು ಇಶ್ರತ್ ದೂರಿನಲ್ಲಿ ತಿಳಿಸಿದ್ದಾರೆ.

‘ನನ್ನ ಮಗನ ಶಾಲೆಯಿಂದ ವಾಪಸ್ ಬರುತ್ತಿದ್ದೆ. ಆಗ ನೂರಾರು ಸ್ಥಳೀಯ ನಿವಾಸಿಗಳು ನನ್ನನ್ನು ಸುತ್ತುವರಿದು, ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕಾಗಿ ಬೆದರಿಸಲು ಯತ್ನಿಸಿದರು. ನಾವು ಜಾತ್ಯತೀತ ದೇಶದಲ್ಲಿ ಜೀವಿಸುತ್ತಿದ್ದೇವೆ. ಯಾವುದೇ ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳುವುದು ಪ್ರಜಾಪ್ರಭುತ್ವದ ಹಕ್ಕು. ದೇಶದ ಉತ್ತಮ ಪ್ರಜೆಯಾಗಿ ನನ್ನ ಕರ್ತವ್ಯ ನಿರ್ವಹಿಸಿದ್ದೇನೆ. ನಾನು ಜಾತ್ಯತೀತ ವ್ಯಕ್ತಿ. ಇದರಿಂದಾಗಿಯೇ ನನ್ನ ಕುಟುಂಬ ಸದಸ್ಯರಿಂದ ಜೀವಬೆದರಿಕೆ ಎದುರಿಸುತ್ತಿದ್ದೇನೆ’ ಎಂದು ಅವರು ದೂರಿನಲ್ಲಿ ಹೇಳಿದ್ದಾರೆ.

‘ದೂರಿನ ಕುರಿತು ತನಿಖೆ ಆರಂಭಿಸಿದ್ದು, ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸರು ತಿಳಿಸಿದ್ದಾರೆ.

2014ರಲ್ಲಿ ದುಬೈನಿಂದ ದೂರವಾಣಿ ಕರೆ ಮಾಡಿದ ಪತಿ, ತ್ರಿವಳಿ ತಲಾಖ್ ಹೇಳಿ ವಿಚ್ಛೇದನ ನೀಡಿದ್ದರು. ಇದಾದ ಬಳಿಕ ಇಶ್ರತ್ ಅವರು ಸುಪ್ರೀಂ ಮೊರೆ ಹೋದರು.

 

Post Comments (+)