ಸೋಮವಾರ, ಮಾರ್ಚ್ 30, 2020
19 °C

ರಾಷ್ಟ್ರ ರಾಜಕಾರಣಕ್ಕೆ ಬರಲು ಕೇಜ್ರಿವಾಲ್‌ಗೆ ಇದು ಸಕಾಲ: ಆಪ್‌ ಅಭಿಮಾನಿಗಳ ಇಂಗಿತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಮುಖ್ಯಮಂತ್ರಿಯಾಗಿ ಭಾನುವಾರ ಅಧಿಕಾರ ಸ್ವೀಕರಿಸಿರುವ ಅರಂವಿಂದ ಕೇಜ್ರಿವಾಲ್‌ ಅವರು ರಾಷ್ಟ್ರ ರಾಜಕಾರಣ ಪ್ರವೇಶಿಸಲು ಇದು ಸಕಾಲ ಎಂದು ಪಕ್ಷದ ಅಭಿಮಾನಿಗಳು, ಕಾರ್ಯಕರ್ತರು ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. 

‘ದೆಹಲಿಯನ್ನೂ ಮೀರಿ ರಾಷ್ಟ್ರದ ರಾಜಕಾರಣದತ್ತ ಗಮನಹರಿಸಲು, ರಾಷ್ಟ್ರದ ದ್ವೇಷಮಯ, ವಿಷಮ ವಾತಾವರಣವನ್ನು ಬದಲಿಸಲು ಕೇಜ್ರಿವಾಲ್‌ ಅವರಿಗೆ ಇದು ಸೂಕ್ತ ಸಮಯ’ ಎಂದು ಸುಮನಾ ರಾವ್‌ ಎಂಬ ಮಧ್ಯಪ್ರದೇಶದ ಪಕ್ಷದ ಅಭಿಮಾನಿ ಪ್ರಮಾಣವಚನ ಕಾರ್ಯಕ್ರಮದಲ್ಲಿ ಅಭಿಪ್ರಾಯಪಟ್ಟರು. 

‘ಇಡೀ ದೇಶದ ಪರಿಸ್ಥಿತಿ ಇಂದು ವಿಷಮವಾಗಿದೆ. ಇದನ್ನು ಬದಲಿಸುವತ್ತ ಆಪ್‌ ಗಂಭೀರವಾಗಿ ಚಿಂತಿಸಬೇಕು. ದೇಶದ ಇತರ ಭಾಗವನ್ನು ಬದಲಿಸುವುದೂ ಇಂದಿನ ಅಗತ್ಯ’ ಎಂದೂ ಅವರು ಹೇಳಿದರು. 

ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆದ ರಾಮಲೀಲಾ ಮೈದಾನದಾದ್ಯಂತ ತ್ರಿವರ್ಣ ಧ್ವಜ ಹಿಡಿದು ಸಂಭ್ರಮದಿಂದ ಓಡಾಡುತ್ತಿದ್ದ ಇರ್ಷಾನ್‌ ಖಾನ್‌ ಎಂಬುವವರು ಮಾಧ್ಯಮಗಳೊಂದಿಗೆ ಮಾತನಾಡಿ, ‘ಪಕ್ಷದ ಅಭಿಮಾನಿಗಳು ಮತ್ತು ಕಾರ್ಯಕ್ರರ್ತರು ಇಲ್ಲಿ ಆಪ್‌ನ ಬಾವುಟದ ಬದಲಿಗೆ ದೇಶದ ಬಾವುಟ ಹಿಡಿದಿರುವುದರ ಹಿಂದೆ ಒಂದು ಉದ್ದೇಶವಿದೆ. ಜನ ಈಗ ಕೇಜ್ರಿವಾಲ್‌ ಅವರು ರಾಷ್ಟ್ರ ರಾಜಕಾರಣದತ್ತ ಹೊರಳಬೇಕು ಎಂದು ಬಯಸಿದ್ದಾರೆ. ರಾಷ್ಟ್ರದತ್ತ ಗಮನಹರಿಸಲು ಕೇಜ್ರಿವಾಲ್‌ ಅವರಿಗೆ ಇದು ಸೂಕ್ತ ಸಮಯ. ನಕಾರಾತ್ಮಕ ರಾಷ್ಟ್ರವಾದವನ್ನು ಹೋಗಲಾಡಿಸಲು ಇದು ಸರಿಯಾದ ಸಂದರ್ಭವೂ ಹೌದು. ಅಲ್ಲದೆ, ಆಪ್‌ಗೆ ಇದನ್ನು ಸಾಧಿಸುವ ಶಕ್ತಿಯೂ ಇದೆ’ ಎಂದು ಅವರು ಹೇಳಿದರು. 

ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಸೇರಿದ್ದ ಬಹುತೇಕರು ಇದೇ ರೀತಿಯ ವಾದ, ಅಭಿಪ್ರಾಯಗಳನ್ನು ಹೇಳಿಕೊಂಡಿರುವುದನ್ನು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು