ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು ಗಲಭೆ| ಮೃತರ ಕುಟುಂಬಗಳಿಗೆ ₹5 ಲಕ್ಷ ಪರಿಹಾರ ಘೋಷಿಸಿದ ಮಮತಾ ಬ್ಯಾನರ್ಜಿ

Last Updated 26 ಡಿಸೆಂಬರ್ 2019, 13:21 IST
ಅಕ್ಷರ ಗಾತ್ರ

ಕೊಲ್ಕತ್ತಾ: ಮಂಗಳೂರು ಗಲಭೆಯಲ್ಲಿ ಮೃತಪಟ್ಟವರ ಕುಟುಂಬಕ್ಕೆ ಘೋಷಿಸಿದ್ದ ಪರಿಹಾರವನ್ನು ಯಡಿಯೂರಪ್ಪ ತಡೆಹಿಡಿದ ಬೆನ್ನಲ್ಲೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ₹5 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ಎನ್‌ಆರ್‌ಸಿ ವಿರುದ್ಧ ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪ್ರತಿಭಟನಾ ರ್‍ಯಾಲಿಯಲ್ಲಿ ಅವರು ಈ ಘೋಷಣೆ ಮಾಡಿದ್ದಾರೆ.

‘ನಮ್ಮದು ಶ್ರೀಮಂತ ಪಕ್ಷವೇನಲ್ಲ. ನಮ್ಮ ಪಕ್ಷದ ಪರವಾಗಿ, ತೃಣಮೂಲಕ ಕಾಂಗ್ರೆಸ್‌ ನಿಯೋಗ, ಟ್ರೇಡ್‌ ಯುನಿಯನ್‌ ವಿಭಾಗ ಅಲ್ಲಿಗೆ ಭೇಟಿ ನೀಡಿ ಮೃತ ಯುವಕರ ಕುಟುಂಬಗಳಿಗೆ ₹5 ಲಕ್ಷ ಪರಿಹಾರದ ಚೆಕ್‌ ನೀಡುತ್ತದೆ’ ಎಂದು ತಿಳಿಸಿದರು.

ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದ ಯುವಕರ ಕುಟುಂಬಗಳಿಗೆ ₹10 ಲಕ್ಷ ಪರಿಹಾರ ಘೋಷಿಸಿದ್ದ ಮುಖ್ಯಮಂತ್ರಿ ಯಡಿಯೂರಪ್ಪ, ಮರು ದಿನವೇ ‘ಗಲಭೆ ಬಗ್ಗೆ ತನಿಖೆ ಮುಗಿಯುವವರೆಗೂ ಪರಿಹಾರ ವಿತರಿಸುವುದಿಲ್ಲ. ಮೃತಪಟ್ಟವರು ನಿರಪರಾಧಿಗಳೆಂದು ಸಾಬೀತಾದರೆ ಮಾತ್ರವೇ ಪರಿಹಾರ’ ಎಂದು ಹೇಳಿದ್ದರು.

ಯಡಿಯೂರಪ್ಪ ಅವರ ಈ ನಡೆಯನ್ನು ಟೀಕಿಸಿದ ಮಮತಾ, ‘ಕರ್ನಾಟಕ ಮುಖ್ಯಮಂತ್ರಿಯನ್ನು ನಡೆಯನ್ನು ನೋಡಿ. ಮೃತ ಯುವಕರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ಘೋಷಿಸಿದರ ಅವರು, ಈಗ ಮೃತರು ಆರೋಪಿಗಳೆಂದು ಹೇಳುತ್ತಾ ಅದನ್ನು ಹಿಂಪಡೆದಿದ್ದಾರೆ. ಇದೊಂದು ನಾಚಿಕೆಗೇಡಿನ ಕೆಲಸ’ ಎಂದು ಟೀಕಿಸಿದ್ದಾರೆ.

‘ಇವತ್ತು ಭರವಸೆ ನೀಡಿ, ನಾಳೆಯೇ ಅದನ್ನು ಮುರಿಯುತ್ತಾರೆ ಎನ್ನುವುದು ಬೇಸರದ ವಿಷಯ. ಪ್ರಜಾಪ್ರಭುತ್ವದಲ್ಲಿ ಇದು ಆಗುತ್ತದೆಯೇ?.. ಯಡಿಯೂರಪ್ಪನವರೆ ಗುಂಡೇಟಿಗೆ ಬಲಿಯಾದವರ ಕುಟುಂಬಗಳಿಗೆ ನೀಡಲು ನಿಮ್ಮ ಬಳಿ ಹಣ ಇಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ಸಿಎಎ ವಿರುದ್ಧ ಪ್ರತಿಭಟಿಸುತ್ತಿರುವ ವಿವಿಧ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ಮಮತಾ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ‘ಯಾರಿಗೂ ಹೆದರಬೇಡಿ. ಐಐಟಿ ಕಾನ್ಪುರ, ಜಾಮಿಯಾ ಮಿಲಿಯ ಹಾಗೂ ಪ್ರತಿಭಟಿಸುತ್ತಿರುವ ಇತರೆ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೆ ನಿಮ್ಮೊಂದಿಗೆ ನಾವಿದ್ದೇವೆ. ಬಿಜೆಪಿಗೆ ಎಚ್ಚರಿಕೆ ನೀಡುತ್ತಿದ್ದೇನೆ, ಬೆಂಕಿಯೊಂದಿಗೆ ಆಟವಾಡುವುದನ್ನು ಬಿಡಿ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT