ಗುರುವಾರ , ಜೂಲೈ 2, 2020
28 °C

ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ 2.0: ಬಿಜೆಪಿ ಅಧ್ಯಕ್ಷ ನಡ್ಡಾ ಶ್ಲಾಘನೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ನರೇಂದ್ರ ಮೋದಿ ಅವರ ನೇತೃತ್ವದ ಎನ್‌ಡಿಎ 2.0 ಸರ್ಕಾರಕ್ಕೆ ವರ್ಷ ತುಂಬಿದ ಸಂದರ್ಭದಲ್ಲಿ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಮೋದಿ ಸರ್ಕಾರದ ಕಾರ್ಯವೈಖರಿಯನ್ನು ಶ್ಲಾಘಿಸಿದ್ದಾರೆ.  

‘ವಿಶ್ವದ ಮುಂದೆ ದೇಶದ ವರ್ಚಸ್ಸನ್ನು ಹೆಚ್ಚಿಸಿದ ಹಲವು ದೃಢ ಹಾಗೂ ದಿಟ್ಟ ನಿರ್ಧಾರವನ್ನು ತೆಗೆದುಕೊಂಡ ವರ್ಷವಿದು. ಹಲವು ದಶಕಗಳಿಂದ ಜನರು ಕಾಯುತ್ತಿದ್ದ ನಿರ್ಧಾರಗಳನ್ನು ಮೋದಿ ಅವರು ಅನುಷ್ಠಾನಗೊಳಿಸಿದರು. ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿ, ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ ರದ್ದು, ಬ್ಯಾಂಕ್‌ಗಳ ವಿಲೀನ ಹೀಗೆ ದೇಶವನ್ನು ಬಲಿಷ್ಠಗೊಳಿಸುವ ಹಲವು ನಿರ್ಧಾರಗಳನ್ನು ಅವರು ತೆಗೆದುಕೊಂಡರು.ಸವಾಲುಗಳನ್ನು ಅವಕಾಶಗಳನ್ನಾಗಿ ಬದಲಾಯಿಸಿದರು’ ಎಂದು ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

‘ದೂರದೃಷ್ಟಿಯುಳ್ಳ ತಮ್ಮ ನೀತಿಗಳಿಂದ ದೇಶದ ಪ್ರಜಾಪ್ರಭುತ್ವಕ್ಕೆ ಹೊಸ ದಿಕ್ಕನ್ನು ನರೇಂದ್ರ ಮೋದಿ ಅವರು ನೀಡಿದ್ದಾರೆ. ಎರಡನೇ ಅವಧಿಯಲ್ಲಿ ಮೊದಲ ವರ್ಷ ಪೂರೈಸಿದ ಪ್ರಧಾನಿ ನರೇಂದ್ರ ಮೋದಿ, ಸಚಿವ ಸಂಪುಟದ ಸದಸ್ಯರು ಪಕ್ಷದ ಸಂಸದರು ಶ್ಲಾಘನೆಗೆ ಅರ್ಹರು ಎಂದು’ ನಡ್ಡಾ ತಿಳಿಸಿದ್ದಾರೆ. 

ಸಾಧನೆಗಳ ಪಟ್ಟಿ ಮುಂದಿಟ್ಟ ಪ್ರಧಾನಿ ನರೇಂದ್ರ ಮೋದಿ 
ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷಾಧಿಕಾರ (ಸಿಎಎ) ರದ್ದು, ರಾಮ ಮಂದಿರ ನಿರ್ಮಾಣ ವಿವಾದದ ಇತ್ಯರ್ಥ, ತ್ರಿವಳಿ ತಲಾಖ್‌ಗೆ ಶಿಕ್ಷೆ, ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿ ಹೀಗೆ ಎನ್‌ಡಿಎ 2.0 ಆಡಳಿತಾವಧಿಯಲ್ಲಿ ಸರ್ಕಾರದ ಸಾಧನೆಗಳನ್ನು ಬಹಿರಂಗ ಪತ್ರದ ಮುಖಾಂತರ ನರೇಂದ್ರ ಮೋದಿ ಅವರು ಪಟ್ಟಿ ಮಾಡಿ ಜನರ ಮುಂದಿಟ್ಟಿದ್ದಾರೆ. 

ಜೊತೆಗೆ ‘ವಿಕಾಸ್‌ ಯಾತ್ರಾ’ ಎಂಬ ದಾಖಲೆಯನ್ನು ಟ್ವಿಟರ್‌ನಲ್ಲಿ ಮೋದಿ ಅವರು ಅಪ್‌ಲೋಡ್‌ ಮಾಡಿದ್ದಾರೆ. ಇದರಲ್ಲಿ ಅಭಿವೃದ್ಧಿ ಕಾಮಗಾರಿಗಳು, ಸಬಲೀಕರಣ, ಭ್ರಷ್ಟಾಚಾರ ನಿಗ್ರಹಕ್ಕೆ ತೆಗೆದುಕೊಂಡ ಕ್ರಮಗಳು, ಕೋವಿಡ್‌–19 ವಿರುದ್ಧದ ಹೋರಾಟ ಹೀಗೆ 15 ವಿಭಾಗಗಳಲ್ಲಿ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.   

‘ಭಾರತವನ್ನು ವಿಶ್ವನಾಯಕ ರಾಷ್ಟ್ರವನ್ನಾಗಿಸುವ ಕನಸು ನನಸು ಮಾಡುವ ಗುರಿ ಇರಿಸಿಕೊಂಡು ಸರ್ಕಾರ ಈ ನಿರ್ಧಾರಗಳನ್ನು ತೆಗೆದುಕೊಂಡಿತ್ತು’ ಎಂದು ಮೋದಿ ಪ್ರತಿಪಾದಿಸಿದ್ದಾರೆ. 

‘ದೇಶವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಕನಸನ್ನು ಇಟ್ಟುಕೊಂಡು ದೇಶದ ಜನತೆ 2019ರಲ್ಲಿ ನಮಗೆ ಮತ ಹಾಕಿದರು. ಕಳೆದ ಒಂದು ವರ್ಷದಲ್ಲಿ ತೆಗೆದುಕೊಂಡ ನಿರ್ಧಾರಗಳು ಈ ಕನಸನ್ನು ನನಸು ಮಾಡುವ ಉದ್ದೇಶದಿಂದ ತೆಗೆದುಕೊಳ್ಳಲಾಗಿದೆ’ ಎಂದಿದ್ದಾರೆ. 

ಗೆಲುವಿನ ಹಾದಿಯಲ್ಲಿದ್ದೇವೆ: ‘ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ನಾವು ಗೆಲುವಿನ ಹಾದಿಯಲ್ಲಿದ್ದೇವೆ. ಈ ಸಂದರ್ಭದಲ್ಲಿ ವಲಸೆ ಕಾರ್ಮಿಕರು ಸಂಕಷ್ಟ ಅನುಭವಿಸಿದ್ದಾರೆ. ನಮ್ಮ ಭವಿಷ್ಯವನ್ನು ನಾವೇ ನಿರ್ಧರಿಸುತ್ತೇವೆ. ನಾನು ದೇಶದ ಜನರ ಸಾಮರ್ಥ್ಯದ ಮೇಲೆ ನಂಬಿಕೆ ಇರಿಸಿದ್ದೇನೆ. ಕೋವಿಡ್‌–19 ವಿರುದ್ಧದ ಹೋರಾಟದಲ್ಲಿ ದೇಶದ ಜನತೆಯ ಒಗ್ಗಟ್ಟು ಕಂಡು ವಿಶ್ವವೇ ಅಚ್ಚರಿಪಟ್ಟಿದೆ. ವಲಸೆ ಕಾರ್ಮಿಕರು, ಸಣ್ಣ ಕೈಗಾರಿಕೆಗಳು ಉದ್ಯೋಗಿಗಳ ಸಂಕಷ್ಟ ದೂರ ಮಾಡಲು ನಾವು ಕಾರ್ಯೋನ್ಮುಖರಾಗಿದ್ದೇವೆ’ ಎಂದು ಮೋದಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

‘ನಿರಾಶೆ, ದುರಾಡಳಿತದ ವರ್ಷ’
ಎನ್‌ಡಿಎ 2.0 ಸರ್ಕಾರದ ಮೊದಲ ವರ್ಷವನ್ನು ‘ನಿರಾಶಾದಾಯಕ, ದುರಾಡಳಿತದ ವರ್ಷ’ ಎಂದು ಕಾಂಗ್ರೆಸ್‌ ಶನಿವಾರ ಟೀಕಿಸಿದೆ. 

‘ಆರು ವರ್ಷ ಪೂರೈಸಿದ ಈ ಸಂದರ್ಭದಲ್ಲಿ ಮೋದಿ ಸರ್ಕಾರವು ಜನರೊಂದಿಗೆಯೇ ಯುದ್ಧ ಮಾಡುತ್ತಿದೆ ಎನಿಸುತ್ತಿದೆ. ಜನರ ಸಂಕಷ್ಟವೆಂಬ ಗಾಯಗಳನ್ನು ಗುಣಪಡಿಸುವ ಬದಲು ಅವರಿಗೆ ಮತ್ತಷ್ಟು ಹಿಂಸೆ ನೀಡಲಾಗುತ್ತಿದೆ. ಬಡಜನರನ್ನು ಶೋಷಿಸುವುದರ ಮೂಲಕ ಆಯ್ದ ಶ್ರೀಮಂತರ ಖಜಾನೆ ಭರ್ತಿ ಮಾಡುವ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ’ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರರಾದ ರಣ್‌ದೀಪ್‌ ಸುರ್ಜೆವಾಲ ಹೇಳಿದರು.

*
ಆರು ವರ್ಷದ ಆಡಳಿತಾವಧಿಯಲ್ಲಿ ಹಲವು ‘ಚಾರಿತ್ರಿಕ ತಪ್ಪು’ಗಳನ್ನು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತಿದ್ದಿದೆ. ಅಭಿವೃದ್ಧಿಯ ಪಥದಲ್ಲಿ ಸ್ವಾವಲಂಬಿ ಭಾರತಕ್ಕೆ ಅಡಿಗಲ್ಲು ಹಾಕಿದೆ 
–ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು