ಗುರುವಾರ , ನವೆಂಬರ್ 21, 2019
21 °C

ಗೋದಾವರಿಯಲ್ಲಿ ದೋಣಿ ಅವಘಡ: 47 ಮಂದಿ ಜಲಸಮಾಧಿ?

Published:
Updated:

ಅಮರಾವತಿ: ಪಾಪಿಕೊಂಡಲು ಎಂಬ ಪ್ರವಾಸಿತಾಣಕ್ಕೆ 73 ಜನರನ್ನು ಹೊತ್ತು ಗೋದಾವರಿ ನದಿಯಲ್ಲಿ ಸಾಗುತ್ತಿದ್ದ ‘ಶ್ರೀ ವಸಿಷ್ಠ’ ಎಂಬ ದೋಣಿ ಭಾನುವಾರ ಬೆಳಿಗ್ಗೆ 10.30ರ ಹೊತ್ತಿಗೆ ಮುಳುಗಿದೆ. ದೋಣಿಯಲ್ಲಿದ್ದವರ ಪೈಕಿ ಎಂಟು ಮಂದಿಯ ಮೃತದೇಹ ಪತ್ತೆಯಾಗಿದ್ದರೆ, 39 ಮಂದಿ ಜಲಸಮಾಧಿಯಾಗಿರಬಹುದು ಎನ್ನಲಾಗಿದೆ. ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮಂಟೂರ್‌–ಕಚಲೂರು ಸಮೀಪ ಈ ದುರಂತ ನಡೆದಿದೆ.

ಎರಡು ಅಂತಸ್ತಿನ ದೋಣಿಯಲ್ಲಿ 62 ಮಂದಿ ಪ್ರವಾಸಿಗರು ಮತ್ತು 11 ಮಂದಿ ಸಿಬ್ಬಂದಿ ಇದ್ದರು. 26 ಜನರು ದಡ ಸೇರಿದ್ದಾರೆ. ಅವರಲ್ಲಿ ಕೆಲವರಿಗೆ ಜೀವರಕ್ಷಕ ಜಾಕೆಟ್‌ ಸಿಕ್ಕಿತ್ತು. ರಕ್ಷಣಾ ಸಿಬ್ಬಂದಿಯು 8 ಮೃತದೇಹಗಳನ್ನು ಭಾನುವಾರ ಕತ್ತಲಾಗುವುದಕ್ಕೆ ಮುಂಚೆ ದಡಕ್ಕೆ ತಂದಿದ್ದಾರೆ. ನಾಪತ್ತೆಯಾದವರಿಗಾಗಿ ಹುಡುಕಾಟ ಮುಂದುವರಿದಿದೆ. 

ದೋಣಿಯ ಚಾಲಕ ಸಂಗಡಿ ನೂಕರಾಜು ಮತ್ತು ತಾಮರರಾಜು ಅವರೂ ಮುಳುಗಿ ಮೃತಪಟ್ಟಿದ್ದಾರೆ. ಈ ದೋಣಿಯಲ್ಲಿ 90 ಜನರು ಪ್ರಯಾಣಿಸುವುದಕ್ಕೆ ಅವಕಾಶ ಇದೆ. ಅದರಲ್ಲಿ 150 ಜೀವರಕ್ಷಕ ಜಾಕೆಟ್‌ಗಳು ಇದ್ದವು ಎಂದು ದೋಣಿಯ ಮಾಲೀಕ ಕೊಡಿಗುಂಡ್ಲ ವೆಂಕಟರಮಣ ಹೇಳಿದ್ದಾರೆ. 

‘ದೋಣಿಯು ನಿಧಾನಕ್ಕೆ ಒಂದು ಕಡೆಗೆ ವಾಲಲು ಆರಂಭಿಸಿತು. ದೋಣಿಯು ತಲೆಕೆಳಗಾದ ಬಳಿಕ ನಾವು 20 ಮಂದಿ ದೋಣಿಯ ಮೇಲೆಯೇ ತೆವಳಿಕೊಂಡು ಇದ್ದೆವು. ಬೇರೊಂದು ದೋಣಿಯಲ್ಲಿ ಬಂದವರು ನಮ್ಮನ್ನು ರಕ್ಷಿಸಿದರು’ ಎಂದು ದಡ ಸೇರಿದ ದಶರಥ ಎಂಬವರು ಹೇಳಿದ್ದಾರೆ. ‘ದೋಣಿಯು ದಡಕ್ಕೆ ಸಮೀಪಿಸುತ್ತಿತ್ತು. ಇದ್ದಕ್ಕಿದ್ದಂತೆ ಚಾಲಕ ದೋಣಿಯನ್ನು ಯಾಕೆ ನದಿಯ ಮಧ್ಯಕ್ಕೆ ಒಯ್ದರು ಎಂಬುದು ಗೊತ್ತಿಲ್ಲ’ ಎಂದು ಇನ್ನೊಬ್ಬ ಪ್ರವಾಸಿ ಹೇಳಿದ್ದಾರೆ. 

ಪ್ರವಾಹದ ಸೆಳೆತ: ಕಲ್ಲಿಗೆ ಡಿಕ್ಕಿ

ಗೋದಾವರಿ ನದಿಯಲ್ಲಿ ಪ್ರವಾಹ ಜೋರಾಗಿದೆ. ದೋಣಿ ಸಾಗುತ್ತಿದ್ದ ದಿಕ್ಕಿಗೆ ವಿರುದ್ಧ ದಿಕ್ಕಿನಿಂದ ನೀರು ಹರಿದು ಬಂತು. ಅದೇ ಹೊತ್ತಿಗೆ ದೋಣಿಯು ಕಲ್ಲೊಂದಕ್ಕೆ ಡಿಕ್ಕಿ ಹೊಡೆದು ಮುಳುಗಿತು ಎಂದು ಆಂಧ್ರ ಪ್ರದೇಶ ಗೃಹ ಸಚಿವೆ ಮೇಕತೋಟಿ ಸುಚರಿತಾ ಹೇಳಿದ್ದಾರೆ. ಬಂದರು ಪ್ರಾಧಿಕಾರದ ಪರವಾನಗಿಯನ್ನು ದೋಣಿಯು ಹೊಂದಿರಲಿಲ್ಲ ಎಂದೂ ಅವರು ತಿಳಿಸಿದ್ದಾರೆ. 

ಮೃತರ ಕುಟುಂಬಕ್ಕೆ ₹10 ಲಕ್ಷ ಪರಿಹಾರ

ಮೃತಪಟ್ಟವರ ಕುಟುಂಬಗಳಿಗೆ ತಲಾ ₹10 ಲಕ್ಷ ಪರಿಹಾರ ನೀಡುವುದಾಗಿ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ ಘೋಷಿಸಿದ್ದಾರೆ. ದುರಂತದ ಬಗ್ಗೆ ಸಮಗ್ರ ವರದಿ ನೀಡುವಂತೆ ಕೇಳಿದ್ದಾರೆ. ಜತೆಗೆ, ತಜ್ಞರ ಸಮಿತಿಯಿಂದ ದೋಣಿ ಸಂಚಾರದ ಸುರಕ್ಷತಾ ಸೂತ್ರಗಳನ್ನು ಸಿದ್ಧಪಡಿಸಲು ಸೂಚಿಸಿದ್ದಾರೆ. 

ದೋಣಿಗಳ ಪರಿಶೀಲನೆ

* ಆಂಧ್ರ ಪ್ರದೇಶ ಪ್ರವಾಸೋದ್ಯಮ ನಿಗಮದ ಸ್ಪೀಡ್‌ ಬೋಟ್‌ಗಳು ರಕ್ಷಣಾ ಕಾರ್ಯಕ್ಕೆ ಬಳಕೆ

* ಮುಳುಗಿದ ದೋಣಿಗೆ ಪರವಾನಗಿ ಇರಲಿಲ್ಲ

* ಈ ಪ್ರದೇಶದಲ್ಲಿ ಎಲ್ಲ ದೋಣಿ ಸೇವೆಗಳನ್ನು ತಕ್ಷಣವೇ ಸ್ಥಗಿತಗೊಳಿಸಲು ಸರ್ಕಾರ ಸೂಚಿಸಿದೆ

* ಇಲ್ಲಿ ಇರುವ ದೋಣಿಗಳು ಜನರನ್ನು ಸಾಗಿಸಲು ಯೋಗ್ಯವೇ ಎಂದು ಪರಿಶೀಲಿಸಲು ನಿರ್ದೇಶನ

* ದೋಣಿಗಳ ಪರವಾನಗಿ ಪರಿಶೀಲನೆ ಮತ್ತು ಸಿಬ್ಬಂದಿಯ ತರಬೇತಿ ಬಗ್ಗೆ ಮಾಹಿತಿ ಪಡೆಯಲು ಆದೇಶ

ಪ್ರತಿಕ್ರಿಯಿಸಿ (+)