ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಸಂಚಾರ ಇಂದಿನಿಂದ ಆರಂಭ

Last Updated 11 ಮೇ 2020, 20:15 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಆಯ್ದ ನಗರಗಳಿಗೆ ರೈಲು ಸಂಚಾರ ಮಂಗಳವಾರದಿಂದ ಆರಂಭವಾಗಲಿದೆ. ಆದರೆ, ಇಲಾಖೆಯು ಪ್ರಯಾಣಿಕರಿಗೆ ಕೆಲವು ನಿಬಂಧನೆಗಳನ್ನು ವಿಧಿಸಿದೆ.

ಪ್ರಯಾಣಿಕರು ರೈಲು ಹೊರಡುವ ಸಮಯಕ್ಕಿಂತ ಕನಿಷ್ಠ 90 ನಿಮಿಷ ಮುಂಚಿತವಾಗಿ ನಿಲ್ದಾಣದಲ್ಲಿರಬೇಕು, ತಮಗೆ ಬೇಕಾದ ಆಹಾರ ಮತ್ತು ಹೊದಿಕೆಗಳನ್ನು ತಾವೇ ತರಬೇಕು ಎಂದು ಸೂಚಿಸಿದೆ.

ವಲಸೆ ಕಾರ್ಮಿಕರಿಗಾಗಿ ಆರಂಭಿಸಿದ ಶ್ರಮಿಕ ವಿಶೇಷ ರೈಲುಗಳ ಸೇವೆ ಮುಂದುವರಿಯಲಿದೆ. ಆದರೆ, ಇತರ ಪ್ರಯಾಣಿಕ ರೈಲು, ಎಕ್ಸ್‌ಪ್ರೆಸ್‌ ಹಾಗೂ ಉಪನಗರ ರೈಲು ಸೇವೆಗಳು ಮುಂದಿನ ಸೂಚನೆ ಬರುವವರೆಗೂ ಇರುವುದಿಲ್ಲಎಂದೂ ಇಲಾಖೆ ತಿಳಿಸಿದೆ.

‘ವಿಶೇಷ ರೈಲುಗಳಲ್ಲಿ ಮೊದಲ, ಎರಡನೇ ಹಾಗೂ ಮೂರನೇ ಶ್ರೇಣಿಯ ಹವಾನಿಯಂತ್ರಿತ ಕೋಚ್‌ಗಳು ಮಾತ್ರ ಇರುತ್ತವೆ. ಪ್ರಯಾಣಿಕರಿಗೆ ‘ರಾಜಧಾನಿ’ ರೈಲುಗಳ ದರವನ್ನು ವಿಧಿಸಲಾಗುತ್ತದೆ. ರೈಲಿನಲ್ಲಿ ಆಹಾರ ನೀಡದಿರುವುದರಿಂದ ಆ ಶುಲ್ಕವನ್ನು ವಿಧಿಸುವುದಿಲ್ಲ’ ಎಂದು ಇಲಾಖೆಯ ವಕ್ತಾರ ರಾಜೇಶದತ್ತ ಬಾಜಪೇಯಿ ತಿಳಿಸಿದ್ದಾರೆ.

ಖಾಸಗಿ ಕ್ಲಿನಿಕ್‌ ತೆರೆಯಲು ಸೂಚನೆ

ವೈದ್ಯಕೀಯ ಸೇವೆಯಲ್ಲಿರುವವರ ಮುಕ್ತ ಓಡಾಟಕ್ಕೆ ವ್ಯವಸ್ಥೆ ಕಲ್ಪಿಸದಿರುವ ಮತ್ತು ಖಾಸಗಿ ಕ್ಲಿನಿಕ್‌ಗಳನ್ನು ತೆರೆಯಲು ಅವಕಾಶ ನೀಡದಿರುವ ಕೆಲವು ರಾಜ್ಯಗಳ ನಿಲುವಿಗೆ ಕೇಂದ್ರದ ಗೃಹ ಸಚಿವಾಲಯವು ಸೋಮವಾರ ಆಕ್ಷೇಪ ವ್ಯಕ್ತಪಡಿಸಿದೆ.

‘ಆರೋಗ್ಯ ಕಾರ್ಯಕರ್ತರಿಗೆ ಮುಕ್ತವಾಗಿ ಓಡಾಡಲು ಸಾಧ್ಯವಾಗುವ ವಾತಾವರಣ ಸೃಷ್ಟಿಸಬೇಕು. ಎಲ್ಲಾ ಖಾಸಗಿ ಕ್ಲಿನಿಕ್‌, ನರ್ಸಿಂಗ್‌ ಹೋಮ್‌ ಮತ್ತು ಪ್ರಯೋಗಾಲಯಗಳನ್ನು ಪೂರ್ಣ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಅನುಮತಿ ನೀಡಬೇಕು’ ಎಂದು ಸಚಿವಾಲಯದ ಕಾರ್ಯದರ್ಶಿ ಅಜಯ್‌ ಭಲ್ಲ ಅವರು ಎಲ್ಲಾ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳಿಗೆ ಕಳುಹಿಸಿದ ಪತ್ರದಲ್ಲಿ ಸೂಚಿಸಿದ್ದಾರೆ.

ನಿಬಂಧನೆಗಳು
- ಪ್ರತಿ ಪ್ರಯಾಣಿಕನ ಆರೋಗ್ಯ ತಪಾಸಣೆ ಮಾಡಲಾಗುವುದು. ಸೋಂಕಿನ ಲಕ್ಷಣಗಳಿಲ್ಲದವರಿಗೆ ಮಾತ್ರ ಪ್ರಯಾಣಿಸಲು ಅವಕಾಶ

- ಆನ್‌ಲೈನ್‌ನಲ್ಲಿ ಐಆರ್‌ಸಿಟಿಸಿ ಮೂಲಕ ಮಾತ್ರ ಟಿಕೆಟ್‌ ವಿತರಣೆ. ಗರಿಷ್ಠ 7 ದಿನ ಮುಂಚಿತವಾಗಿ ಮಾತ್ರ ಬುಕಿಂಗ್‌ಗೆ ಅವಕಾಶ

- ಕೆಲವೇ ಕೆಲವು ಆಹಾರ ಪದಾರ್ಥ ಹಾಗೂ ಕುಡಿಯುವ ನೀರಿನ ಬಾಟಲ್‌ಗಳ ಮಾರಾಟಕ್ಕೆ ಐಆರ್‌ಸಿಟಿಸಿಯಿಂದ ವ್ಯವಸ್ಥೆ

- ಟಿಕೆಟ್‌ ಖಾತರಿಗೊಂಡರೆ ಮಾತ್ರ ಪ್ರಯಾಣ. ಆರ್‌ಎಸಿ, ವೇಟಿಂಗ್‌ ಲಿಸ್ಟ್‌ನಲ್ಲಿರುವವರು ಪ್ರಯಾಣಿಸುವಂತಿಲ್ಲ. ತತ್ಕಾಲ್‌, ಪ್ರೀಮಿಯಂ ಬುಕಿಂಗ್‌ ಸೌಲಭ್ಯ ಇರುವುದಿಲ್ಲ

- ಪ್ರಯಾಣದ ವೇಳೆ ಮುಖಗವಸು ಧರಿಸುವುದು ಕಡ್ಡಾಯ

- ರೈಲು ಪ್ರಯಾಣಕ್ಕೂ 24ಗಂಟೆ ಮುಂಚಿನವರೆಗೆ ಮಾತ್ರ ಟಿಕೆಟ್‌ ರದ್ದತಿಗೆ ಅವಕಾಶ. ಟಿಕೆಟ್‌ ರದ್ದತಿ ಶುಲ್ಕ ಶೇ 50ರಷ್ಟು ಇರುತ್ತದೆ

- ನಿಲ್ದಾಣವನ್ನು ಪ್ರವೇಶಿಸುವಾಗ ಮತ್ತು ನಿರ್ಗಮಿಸುವಾಗ ಪ್ರಯಾಣಿಕರಿಗೆ ಸ್ಯಾನಿಟೈಸರ್‌ ನೀಡಲಾಗುವುದು

- ಬೇರೆ ರಾಜ್ಯದಿಂದ ಬರುವ ಪ್ರಯಾಣಿಕರು, ತಾವು ಬಂದಿಳಿಯುವ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದಲ್ಲಿ, ಆರೋಗ್ಯ ವಿಚಾರಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ ನಿಯಮ–ನಿಬಂಧನೆಗಳಿಗೆ ಬದ್ಧ ರಾಗಿರಬೇಕು

***

ರೈಲು ಸೇವೆ ಆರಂಭಿಸುವ ಕ್ರಮವನ್ನು ಸ್ವಾಗತಿಸುತ್ತೇವೆ. ಇದೇ ರೀತಿ ವಿಮಾನಯಾನ ಹಾಗೂ ರಸ್ತೆ ಸಾರಿಗೆ ಸೇವೆಯನ್ನೂ ಆರಂಭಿಸಬೇಕು.

-ಪಿ. ಚಿದಂಬರಂ, ಕಾಂಗ್ರೆಸ್‌ ಮುಖಂಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT