ಭಾನುವಾರ, ಸೆಪ್ಟೆಂಬರ್ 26, 2021
21 °C

ಅತ್ಯಾಚಾರ ಪ್ರಕರಣ: ಟೆಕಿ ಸೇರಿ ಮೂವರ ಬಂಧನ

ಪಿಟಿಐ Updated:

ಅಕ್ಷರ ಗಾತ್ರ : | |

ಹೈದರಾಬಾದ್ : ಮೂರು ವರ್ಷಗಳ ಹಿಂದೆ ಯುವತಿಯ ಮೇಲೆ ಅತ್ಯಾಚಾರ ಎಸಗಿ, ದುಷ್ಕೃತ್ಯದ ವಿಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪದ ಮೇಲೆ ಇಬ್ಬರು ಸಾಫ್ಟ್‌ವೇರ್‌ ಎಂಜಿನಿಯರ್‌ ಹಾಗೂ ಅವರ ಸ್ನೇಹಿತನನ್ನು ಕೃಷ್ಣಾ ಜಿಲ್ಲೆಯ ನುಜಿವೀಡು ಪೊಲೀಸರು ಬಂಧಿಸಿದ್ದಾರೆ.

ಸಾಫ್ಟ್‌ವೇರ್‌ ಎಂಜಿನಿಯರ್‌ಗಳಾದ ವಂಶಿಕೃಷ್ಣ, ಶಿವಾರೆಡ್ಡಿ ಹಾಗೂ ಇವರಿಬ್ಬರ ಸ್ನೇಹಿತ, ಮಾರ್ಕೆಟಿಂಗ್ ಕಂಪನಿಯೊಂದರ ಉದ್ಯೋಗಿ ದೊಡ್ಲ ಪ್ರವೀಣ ಬಂಧಿತರು.

ಈ ಘಟನೆಯಿಂದ ತೀವ್ರ ಖಿನ್ನತೆಗೆ ಒಳಗಾಗಿರುವ ಯುವತಿಗೆ ವಿಜಯವಾಡದ ಎನ್‌.ಟಿ.ಆರ್‌ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಂಧ್ರಪ್ರದೇಶ ಮಹಿಳಾ ಆಯೋಗದ ಅಧ್ಯಕ್ಷೆ ನನ್ನಪಾನೇನಿ ರಾಜಕುಮಾರಿ ಆಸ್ಪತ್ರೆಗೆ ಶನಿವಾರ ಭೇಟಿ ನೀಡಿ, ಯುವತಿಯ ಆರೋಗ್ಯ ವಿಚಾರಿಸಿದ್ದು, ಯುವತಿ ಎಂ.ಟೆಕ್‌ ಅಧ್ಯಯನ ಪೂರ್ಣಗೊಳಿಸಲು ನೆರವು ನೀಡುವಂತೆ ಮುಖ್ಯಮಂತ್ರಿಗಳನ್ನು ಕೋರಲಾಗುವುದು ಎಂದು ತಿಳಿಸಿದ್ದಾರೆ.

ಘಟನೆ ವಿವರ: 2015ರಲ್ಲಿ ಬಿ.ಟೆಕ್‌ ಮೂರನೇ ವರ್ಷದಲ್ಲಿ ಓದುತ್ತಿದ್ದ ವಂಶಿಕೃಷ್ಣ ಹಾಗೂ ಶಿವಾರೆಡ್ಡಿ ಜನ್ಮದಿನದ ಔತಣಕೂಟದ ನೆಪ ಮಾಡಿ ಅದೇ ಕಾಲೇಜಿನಲ್ಲಿ ಓದುತ್ತಿದ್ದ ಯುವತಿಯನ್ನು ತಮ್ಮ ಕೋಣೆಗೆ ಕರೆದಿದ್ದಾರೆ. ನಿದ್ದೆ ಮಾತ್ರೆ ಬೆರೆಸಿದ ತಂಪು ಪಾನೀಯವನ್ನು ನೀಡಿದ್ದಾರೆ. ನಂತರ ಯುವತಿ ಮೇಲೆ ಅತ್ಯಾಚಾರ ಎಸಗಿ ಇಬ್ಬರು ಆರೋಪಿಗಳು, ದುಷ್ಕೃತ್ಯದ ವಿಡಿಯೊ ಚಿತ್ರೀಕರಣ ಮಾಡಿದ್ದಾರೆ. ಅತ್ಯಾಚಾರದ ವಿಡಿಯೊವನ್ನು ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡುವ ಬೆದರಿಕೆವೊಡ್ಡುತ್ತಿದ್ದ ಆರೋಪಿಗಳು, ಚಿನ್ನ ಹಾಗೂ ಹಣ ಆಕೆಯನ್ನು ಪೀಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕರು ನೀಡುತ್ತಿದ್ದ ಕಿರುಕುಳದಿಂದ ಬೇಸತ್ತ ಯುವತಿ ತಂದೆ ಗಮನಕ್ಕೆ ಈ ವಿಷಯ ತಂದಿದ್ದಾಳೆ. 2017ರಲ್ಲಿ ಯುವತಿ ತಂದೆ ನೀಡಿದ ದೂರಿನ ಮೇಲೆ ಕಾಲೇಜಿನ ಆಡಳಿತ ಮಂಡಳಿ ಯುವಕರ ವಿರುದ್ಧ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಅವರ ಮೊಬೈಲ್‌ನಲ್ಲಿದ್ದ ವಿಡಿಯೊ ನಾಶಪಡಿಸುವಂತೆ ಹೇಳಿದ್ದಾರೆ.

ನಂತರ ಯುವತಿಯ ಮದುವೆ ನಿಶ್ವಯವಾಗಿದೆ. ಈ ಇಬ್ಬರು ಆರೋಪಿಗಳ ಸ್ನೇಹಿತ, ದೊಡ್ಲ ಪ್ರವೀಣ ತನ್ನಿಬ್ಬರು ಸ್ನೇಹಿತರ ಮುಖಗಳನ್ನು ಮಸುಕುಗೊಳಿಸಿ, ಯುವತಿ ಮೇಲೆ ಅತ್ಯಾಚಾರ ನಡೆಸಿದ ವಿಡಿಯೊವನ್ನು ಯುವತಿಯ ಗ್ರಾಮ ಪೊತ್ತವರಪ್ಪಡು ಗ್ರಾಮದ ತನ್ನ ಗೆಳೆಯರಿಗೆ ಕಳುಹಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಯುವತಿಯ ತಂದೆ ನೀಡಿದ ದೂರಿನನ್ವಯ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು