ಮಂಗಳವಾರ, ಸೆಪ್ಟೆಂಬರ್ 17, 2019
22 °C
ಉನ್ನಾವ್‌ ಅತ್ಯಾಚಾರ ಸಂತ್ರಸ್ತೆ

ಸಂತ್ರಸ್ತೆ ಇದ್ದ ಕಾರು ಅಪಘಾತ ‌| ಬಿಜೆಪಿ ಶಾಸಕನ ವಿರುದ್ಧ ಕೊಲೆ ಪ್ರಕರಣ ದಾಖಲು

Published:
Updated:
Prajavani

ಲಖನೌ: ಉನ್ನಾವ್ ಅತ್ಯಾ ಚಾರ ಪ್ರಕರಣದ ಪ್ರಮುಖ ಆರೋಪಿ, ಬಿಜೆಪಿ ಶಾಸಕ ಕುಲದೀಪ್‌ ಸೆಂಗರ್‌ ಅವರ ವಿರುದ್ಧ ಉತ್ತರ ಪ್ರದೇಶ ಪೊಲೀಸರು  ಕೊಲೆ ಮತ್ತು ಕೊಲೆಯತ್ನ ಪ್ರಕರಣವನ್ನು ಸೋಮವಾರ ದಾಖಲಿಸಿಕೊಂಡಿದ್ದಾರೆ.

ಅತ್ಯಾಚಾರದ ಸಂತ್ರಸ್ತೆ ಮತ್ತು ಅವರ ಕುಟುಂಬದವರು ಪ್ರಯಾಣಿಸುತ್ತಿದ್ದ ಕಾರಿಗೆ ಭಾನುವಾರ ಲಾರಿ ಡಿಕ್ಕಿಹೊಡೆದು ಸಂಭವಿಸಿದ ಅಪಘಾತದಲ್ಲಿ ಇಬ್ಬರು ಮೃತಪಟ್ಟಿ ರುವುದಲ್ಲದೆ ಸಂತ್ರಸ್ತೆ ಹಾಗೂ ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಘಟನೆ ರಾಯ್‌ಬರೇಲಿ ಜಿಲ್ಲೆಯಲ್ಲಿ ನಡೆದಿತ್ತು. ಈ ಅಪಘಾತದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಅದಕ್ಕೆ ಸಂಬಂಧಿಸಿದಂತೆ ಶಾಸಕರ ವಿರುದ್ಧ ದೂರು ದಾಖಲಿಸಲಾಗಿದೆ.

‘ಸೆಂಗರ್‌ ಹಾಗೂ ಇತರ ಒಂಬತ್ತು ಮಂದಿಯ ವಿರುದ್ಧ ರಾಯ್‌ಬರೇಲಿ ಜಿಲ್ಲೆಯ ಗುರುಬಕ್ಷ್‌ಗಂಜ್‌ ಠಾಣೆಯಲ್ಲಿ ದೂರು ದಾಖಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

‘ಅಪಘಾತಕ್ಕೆ ಒಳಗಾದ ಲಾರಿಯ ಚಾಲಕ, ಸೆಂಗರ್‌ ಜೊತೆ ಸಂಪರ್ಕದಲ್ಲಿ ಇದ್ದರು ಎಂಬ ಶಂಕೆ ವ್ಯಕ್ತವಾಗಿದೆ. ಇವರಿಬ್ಬರ ದೂರವಾಣಿ ಕರೆ ಮಾಹಿತಿಯನ್ನು ಪಡೆಯುತ್ತಿದ್ದೇವೆ. ಶಾಸಕರ ಸಮೀಪವರ್ತಿಗಳ ಕರೆಗಳ ಬಗ್ಗೆಯೂ ಮಾಹಿತಿ ಪಡೆಯಲಾಗುತ್ತಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಂತ್ರಸ್ತೆಗೆ ನೀಡಿದ್ದ ಭದ್ರತಾ ಸಿಬ್ಬಂದಿಯೂ ಅಪಘಾತ ಸಂಭವಿಸಿದಾಗ ಕಾರಿನಲ್ಲಿರಲಿಲ್ಲ.

ಸೋಮವಾರ ಬೆಳಿಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ್ದ ರಾಜ್ಯ ಪೊಲೀಸ್‌ ಮುಖ್ಯಸ್ಥ ಒ.ಪಿ. ಸಿಂಗ್‌ ಅವರು, ‘ಅಪಘಾತ ಸಂಭವಿಸಿದ್ದ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ಜೋರಾಗಿ ಮಳೆಯಾಗುತ್ತಿತ್ತು. ಆದ್ದರಿಂದ ಮೇಲ್ನೋಟಕ್ಕೆ ಇದೊಂದು ಅಪಘಾತ ಎಂದು ಕಾಣಿಸುತ್ತದೆ. ಕಾರಿನಲ್ಲಿ ಜಾಗ ಇಲ್ಲದ ಕಾರಣ ಭದ್ರತಾ ಸಿಬ್ಬಂದಿಯು ಅವರ ಜೊತೆ ಪ್ರಯಾಣಿಸಲಿಲ್ಲ ಎಂದು ಕುಟುಂಬದವರು ತಿಳಿಸಿದ್ದಾರೆ’ ಎಂದಿದ್ದರು.

ಬೆದರಿಕೆ ಆರೋಪ
‘ದೂರು ವಾಪಸ್‌ ಪಡೆಯುವಂತೆ ಶಾಸಕರ ಕಡೆಯವರು ನಮಗೆ ಹಲವು ದಿನಗಳಿಂದ ಬೆದರಿಕೆ ಹಾಕುತ್ತಿದ್ದಾರೆ. ಕೋರ್ಟ್‌ಗೆ ಹಾಜರಾಗುವ ಸಂದರ್ಭದಲ್ಲೆಲ್ಲ ಶಾಸಕರೇ ಬೆದರಿಕೆ ಹಾಕುತ್ತಿದ್ದರು. ಜೈಲಿನೊಳಗಿನಿಂದಲೇ ಅವರು ತಮ್ಮ ಜಾಲವನ್ನು ನಡೆಸುತ್ತಿದ್ದಾರೆ’ ಎಂದು ಸಂತ್ರಸ್ತೆಯ ಸೋದರ ಸಂಬಂಧಿಯೊಬ್ಬರು ಆರೋಪಿಸಿದ್ದಾರೆ.

‘ಈ ಅಪಘಾತದ ಹಿಂದೆ ದೊಡ್ಡ ಸಂಚು ಇದೆ. ನಮ್ಮ ಕುಟುಂಬವನ್ನು ಸಂಪೂರ್ಣವಾಗಿ ಮುಗಿಸುವ ಪ್ರಯತ್ನ ನಡೆದಿದೆ’ ಎಂದು ಸಂತ್ರಸ್ತೆಯ ತಾಯಿ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ... ಸಂತ್ರಸ್ತೆಗೆ ಅಪಘಾತ: ಸದನದಲ್ಲಿ ಗದ್ದಲ

Post Comments (+)