ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

’ಉನ್ನಾವ್‌ ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷಿ ವಿಷದಿಂದ ಸತ್ತಿಲ್ಲ’

ಉನ್ನಾವ್‌ನ ಅತ್ಯಾಚಾರ ಪ್ರಕರಣ
Last Updated 2 ಸೆಪ್ಟೆಂಬರ್ 2018, 14:00 IST
ಅಕ್ಷರ ಗಾತ್ರ

ಲಖನೌ: ‘ವಿಷದ ಪರಿಣಾಮದಿಂದ ಯೂನಸ್‌ ಸಾವನ್ನಪ್ಪಿಲ್ಲ ಎಂದುವಿಧಿವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್‌) ವರದಿ ಸ್ಪಷ್ಟಪಡಿಸಿದೆ’ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಉನ್ನಾವ್‌ ಅತ್ಯಾಚಾರ ಪ್ರಕರಣದ ಪ್ರಮುಖ ಸಾಕ್ಷಿ ಯೂನಸ್‌ಅವರು ಕಳೆದ ತಿಂಗಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದರು.

‘ಯೂನಸ್‌ಗೆ ಸಂಬಂಧಿಸಿದ ಎಫ್‌ಎಸ್‌ಎಲ್‌ ವರದಿಯನ್ನು ಉನ್ನಾವ್‌ನ ಜಿಲ್ಲಾ ‍ಪೊಲೀಸ್‌ ವರಿಷ್ಠಾಧಿಕಾರಿ ಸ್ವೀಕರಿಸಿದ್ದಾರೆ. ಅವರ ದೇಹಕ್ಕೆ ಯಾವುದೇ ವಿಷಕಾರಿ ಅಂಶ ಸೇರಿಲ್ಲ. ಅವರ ದೇಹದ ಒಳಾಂಗಗಳನ್ನು ರಾಸಾಯನಿಕ ಪರೀಕ್ಷೆಗೆ ಒಳ‍ಪಡಿಸಿದ್ದ ವೇಳೆ ಇದು ದೃಢಪಟ್ಟಿದೆ’ ಎಂದು ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಆನಂದ್‌ ಕುಮಾರ್‌ ತಿಳಿಸಿದ್ದಾರೆ.

‘ವರದಿ ಆಧಾರದಲ್ಲಿ ಯೂನಸ್‌ ಸಾವಿನ ಕುರಿತಂತೆ ಎದ್ದಿರುವ ಎಲ್ಲ ಸಂಶಯಗಳು ನಿವಾರಣೆಯಾಗಿದೆ’ ಎಂದರು.

ಆಗಸ್ಟ್ 18ರಂದು ಯೂನಸ್‌ ಸಾವನ್ನಪ್ಪಿದ್ದರು. ಸಾವಿನ ಕುರಿತಂತೆ ಅವರ ಚಿಕ್ಕಪ್ಪ ಅನುಮಾನ ವ್ಯಕ್ತಪಡಿಸಿದ್ದರು. ಈ ಕಾರಣದಿಂದ ಆಗಸ್ಟ್ 25ರಂದು ಅವರ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು.

‘ಯೂನಸ್‌ ಮೃತದೇಹವನ್ನು ತರಾತುರಿಯಲ್ಲಿ ಮಣ್ಣುಮಾಡುವ ಮೂಲಕ ಈ ಸಾವು ಅನುಮಾನ ಮೂಡಿಸಿದೆ’ ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಕೂಡ ಟ್ವೀಟರ್‌ನಲ್ಲಿ ಪ್ರಶ್ನಿಸಿದ್ದರು. ಇದರ ಬೆನ್ನಲ್ಲೇ ಹೇಳಿಕೆ ನೀಡಿದ್ದ ಅವರ ಕುಟುಂಬಸ್ಥರು,ಯಕೃತಿನ ಕಾಯಿಲೆಯಿಂದ ಬಳಲುತ್ತಿದ್ದ ಯೂನಸ್‌ 2013ರಿಂದಲೇ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು ಎಂದಿದ್ದರು.

ಪ್ರಕರಣ ಏನು ?

2017ರ ಜೂನ್‌ 4ರಂದು ಉನ್ನಾವ್‌ನಲ್ಲಿನ ಸೆಂಗರ್‌ ಅವರ ನಿವಾಸಕ್ಕೆ ಸಂಬಂಧಿಯೊಂದಿಗೆ ಕೆಲಸ ಕೇಳಲು ಹೋದಾಗ, ಶಾಸಕ ಕುಲದೀಪ್‌ ಸಿಂಗ್‌ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆ ದೂರಿದ್ದರು. ಸರ್ಕಾರ ಕಳೆದ ಏಪ್ರಿಲ್‌ನಲ್ಲಿ ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಲ್ಲಿಸಿದ್ದ ದೋಷಾರೋಪ ಪಟ್ಟಿಯಲ್ಲಿ ಯೂನಸ್‌ ಅವರನ್ನು ಈ ಪ್ರಕರಣದ ಪ್ರಮುಖ ಸಾಕ್ಷಿ ಎಂದು ಪರಿಗಣಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT