ಗುರುವಾರ , ಆಗಸ್ಟ್ 22, 2019
25 °C
ಉನ್ನಾವ್ ಸಂತ್ರಸ್ತೆಯ ನೆರವಿಗೆ ಸುಪ್ರೀಂ ಕೋರ್ಟ್

ಅತ್ಯಾಚಾರ, ಅಪಘಾತ ಪ್ರಕರಣಗಳ ವಿಚಾರಣೆ ದೆಹಲಿಗೆ

Published:
Updated:

ನವದೆಹಲಿ: ಉನ್ನಾವ್ ಅತ್ಯಾಚಾರ ಪ್ರಕರಣ ಮತ್ತು ಈ ಪ್ರಕರಣಕ್ಕೆ ಸಂಬಂಧಿಸಿದ ಇನ್ನೂ ನಾಲ್ಕು ಪ್ರಕರಣಗಳ ವಿಚಾರಣೆಯನ್ನು ಉತ್ತರಪ್ರದೇಶದ ನ್ಯಾಯಾಲಯದಿಂದ ದೆಹಲಿ ನ್ಯಾಯಾಲಯಕ್ಕೆ ವರ್ಗಾಯಿಸಿ ಸುಪ್ರೀಂ ಕೋರ್ಟ್‌ ಗುರುವಾರ ಆದೇಶ ನೀಡಿದೆ.

ಉನ್ನಾವ್ ಅತ್ಯಾಚಾರ ಸಂತ್ರಸ್ತೆ ಮತ್ತು ಆಕೆಯ ಕುಟುಂಬದವರು ಮುಖ್ಯನ್ಯಾಯಮೂರ್ತಿಗಳಿಗೆ ಬರೆದಿದ್ದ ಪತ್ರದ ಪರಿಶೀಲನೆ ವೇಳೆ ಸುಪ್ರೀಂ ಕೋರ್ಟ್‌ ಈ ಆದೇಶ ನೀಡಿದೆ. ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ, ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್ ಮತ್ತು ದೀಪಕ್ ಗುಪ್ತಾ ಅವರಿದ್ದ ಪೀಠವು ಈ ಆದೇಶ ಹೊರಡಿಸಿದೆ.

‘ನನ್ನನ್ನು ರಾಯ್‌ಬರೇಲಿ ಜೈಲಿನಿಂದ ದೆಹಲಿಯ ಜೈಲಿಗೆ ವರ್ಗಾಯಿಸಿ’ ಎಂದು ಸಂತ್ರಸ್ತೆಯ ಚಿಕ್ಕಪ್ಪ ಮಹೇಶ್ ಸಿಂಗ್ ಅವರು ಸಲ್ಲಿಸಿರುವ ಅರ್ಜಿಯನ್ನು ಪೀಠವು ಶುಕ್ರವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ.

ಸುಪ್ರೀಂ ಕೋರ್ಟ್‌ ಆದೇಶಗಳು
* ಸಂತ್ರಸ್ತೆಗೆ ಉತ್ತರಪ್ರದೇಶ ಸರ್ಕಾರವು ₹ 25 ಲಕ್ಷ ಮಧ್ಯಂತರ ಪರಿಹಾರ ನೀಡಬೇಕು
* ಅಪಘಾತ ಪ್ರಕರಣದ ತನಿಖೆಯನ್ನು ಏಳು ದಿನಗಳ ಒಳಗೆ ಪೂರ್ಣಗೊಳಿಸಬೇಕು ಎಂದು ಸಿಬಿಐಗೆ ನಿರ್ದೇಶನ. ತೀರಾ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾತ್ರ ತನಿಖೆಯ ಅವಧಿಯನ್ನು ಇನ್ನೂ ಏಳು ದಿನಗಳಿಗೆ ವಿಸ್ತರಿಸಬಹುದು
* ಅತ್ಯಾಚಾರ ಪ್ರಕರಣದ ವಿಚಾರಣೆಯನ್ನು 45 ದಿನಗಳ ಒಳಗೆ ಪೂರ್ಣಗೊಳಿಸಬೇಕು
* ಸಂತ್ರಸ್ತೆ, ಆಕೆಯ ಕುಟುಂಬದವರು ಮತ್ತು ಆಕೆಯ ವಕೀಲರಿಗೆ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್‌) ಭದ್ರತೆ ಒದಗಿಸಬೇಕು. ಕಮಾಂಡೆಂಟ್ ಮಟ್ಟದ ಅಧಿಕಾರಿ ಭದ್ರತೆಯ ನೇತೃತ್ವ ಹೊಂದಿರಬೇಕು
* ಈ ಮೇಲಿನ ಆದೇಶಗಳನ್ನು ರದ್ದುಪಡಿಸಿ ಮತ್ತು ಬದಲಿಸಿ ಎಂದು ಸಲ್ಲಿಕೆಯಾಗುವ ಅರ್ಜಿಗಳನ್ನು ಯಾವ ಕಾರಣಕ್ಕೂ ಪರಿಗಣಿಸುವುದಿಲ್ಲ. ಈ ಆದೇಶಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ

Post Comments (+)