ಗುರುವಾರ , ಫೆಬ್ರವರಿ 27, 2020
19 °C
ಸಚಿವ ಹರ್ಷವರ್ಧನ್ ಅವರತ್ತ ನುಗ್ಗಿದ ತಮಿಳುನಾಡಿನ ಸಂಸದ ಮಾಣಿಕ್ಯಂ ಟಾಗೂರ್

ಸಂಸತ್ತಿನಲ್ಲಿ ಗದ್ದಲ ಮೂಡಿಸಿದ ರಾಹುಲ್ ಗಾಂಧಿಯ 'ದಂಡ'

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ಪ್ರಧಾನಿಯವರು ಹೀಗೆ ಭಾಷಣ ಮಾಡುತ್ತಿದ್ದರೆ ಯುವ ಜನತೆ ಅವರಿಗೆ ದಂಡ (ದೊಣ್ಣೆ) ದಿಂದ ಹೊಡೆಯುತ್ತಾರೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ದೆಹಲಿ ಚುನಾವಣಾ ಭಾಷಣದಲ್ಲಿ ಆಡಿದರೆನ್ನಲಾದ ಮಾತುಗಳು ಶುಕ್ರವಾರ ಸಂಸತ್ತಿನಲ್ಲಿ ಪ್ರತಿಧ್ವನಿಸಿ ಗದ್ದಲಕ್ಕೆ ಕಾರಣವಾಯಿತು.

ಸಂಸತ್ತಿನಲ್ಲಿ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ರಾಹುಲ್ ಗಾಂಧಿ ವೈದ್ಯಕೀಯ ಕಾಲೇಜುಗಳ ಸ್ಥಾಪನೆ ಕುರಿತು ಪ್ರಶ್ನೆಯೊಂದನ್ನು ಎತ್ತಿದರು. ಇದಕ್ಕೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ದನ್ ಅವರು ಉತ್ತರ ನೀಡಬೇಕಾಗಿತ್ತು. ಆದರೆ, ಹರ್ಷವರ್ದನ್ ಉತ್ತರ ನೀಡುವ ಮುನ್ನ ತಾವು ಬರೆದುಕೊಂಡು ಬಂದಿದ್ದ ಹೇಳಿಕೆಯನ್ನು ಓದಲು ಆರಂಭಿಸಿದರು.

ಆ ಹೇಳಿಕೆಯಲ್ಲಿ ಕಾಂಗ್ರೆಸ್‌‌ನ ರಾಹುಲ್ ಗಾಂಧಿ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಬಗ್ಗೆ ಅವಹೇಳನಕಾರಿ, ಅಸಂಬದ್ಧವಾಗಿ ಮಾತನಾಡಿದ್ದಾರೆ. ಇಂತಹ ಹೇಳಿಕೆಗಳನ್ನು ಖಂಡಿಸುತ್ತೇನೆ ಎಂದರು. ಮಧ್ಯಪ್ರವೇಶಿಸಿದ ರಾಹುಲ್ ಗಾಂಧಿ ನಾನು ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸುವಂತೆ ಒತ್ತಾಯಿಸಿದರು. ಮತ್ತೆ ಆರೋಗ್ಯ ಸಚಿವರು ಮಾತು ಮುಂದುವರಿಸಿ, ಈ ದೇಶದ ಪ್ರಧಾನಿ ವಿರುದ್ಧ ಈ ರೀತಿಯ ಪದಗಳನ್ನು ಬಳಕೆ ಮಾಡುವುದು ಖಂಡನೀಯ ಎಂದು ಹೇಳಿದರು.

ಆರೋಗ್ಯ ಸಚಿವರು ಇದೇ ಹೇಳಿಕೆಯನ್ನು ಓದುತ್ತಿದ್ದರು. ಇದರಿಂದ ವಿರೋಧ ಪಕ್ಷದ ಸದಸ್ಯರೆಲ್ಲಾ ಜೋರಾಗಿ ಕೂಗಲಾರಂಭಿಸಿದರು. ಮಧ್ಯೆ ಪ್ರವೇಶಿಸಿದ ಸಭಾಧ್ಯಕ್ಷ ಓಂ ಬಿರ್ಲಾ ಎಲ್ಲರೂ ಕುಳಿತುಕೊಳ್ಳಿ ಎಂದು ಸೂಚಿಸಿದರು. ನಂತರ ಸಚಿವರು ಉತ್ತರ ನೀಡುವಂತೆ ತಿಳಿಸಿದರು. ಆದರೂ ಹರ್ಷವರ್ದನ್ ಈ ಹೇಳಿಕೆ ಖಂಡಿಸುವುದಾಗಿ ಹೇಳಿದರು.

ಈ ಮಾತಿನಿಂದ ಸಮಾಧಾನಗೊಳ್ಳದ ಕಾಂಗ್ರೆಸ್ ಸಂಸದ ತಮಿಳುನಾಡಿನ ಮಾಣಿಕ್ಯಂ ಟಾಗೂರ್, ಸಭಾಧ್ಯಕ್ಷರ ಕುರ್ಚಿಯತ್ತ ಧಾವಿಸಿ ಬಂದು ಸಚಿವ ಹರ್ಷವರ್ದನ್ ಅವರು ಕುಳಿತಿದ್ದ ಕುರ್ಚಿಯತ್ತ ನುಗ್ಗಲು ಬಂದರು. ತಕ್ಷಣ ಉತ್ತರ ಪ್ರದೇಶದ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ಟಾಗೂರ್ ಅವರನ್ನು ತಡೆದರು.

ಇದನ್ನೂ ಓದಿ: ಪ್ರಧಾನಿಗೆ ಯುವಜನರಿಂದ ಬಡಿಗೆಯೇಟು: ರಾಹುಲ್ ಗಾಂಧಿ ಹೇಳಿಕೆ

ಕೇರಳದ ಕಾಂಗ್ರೆಸ್ ಸಂಸದ ಹಿಬಿ ಇಡೆನ್ ಕೂಡ ಮಧ್ಯಪ್ರವೇಶಿಸಲು ಯತ್ನಿಸಿದರು. ಬಿಜೆಪಿಯ ಸ್ಮೃತಿ ಇರಾನಿ ಸೇರಿದಂತೆ ಹಲವು ಸಂಸದರು ಇದನ್ನು ತಡೆದರು.

ಎಲ್ಲರಿಂದಲೂ ರಕ್ಷಿಸಲ್ಪಟ್ಟ ಸಚಿವ ಹರ್ಷವರ್ದನ್ ಮತ್ತೆ ತಮ್ಮ ಹೇಳಿಕೆಯನ್ನು ಓದಲು ಆರಂಭಿಸಿದರು.
ಇತ್ತೀಚೆಗೆ ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಇನ್ನು ಆರು ತಿಂಗಳ ನಂತರ ಈ ದೇಶದ ಯುವ ಜನತೆ ನರೇಂದ್ರ ಮೋದಿ ಅವರನ್ನು ಬೀದಿಗೆ ಎಳೆದುಕೊಂಡು ಬಂದು ದೊಣ್ಣೆಯಿಂದ ಹೊಡೆದು ಆಚೆಗೆ ಬಿಸಾಡುತ್ತಾರೆ ಎಂದು ಹೇಳಿದ್ದರು ಎಂದರು.

ರಾಹುಲ್ ಗಾಂಧಿ ಅವರ ತಂದೆಯೂ ಪ್ರಧಾನಿಯಾಗಿದ್ದವರು. ಅವರೂ ಕೂಡ ಇಂತಹ ಪರಿಸ್ಥಿತಿಯನ್ನು ಎದುರಿಸಿರಲಿಲ್ಲ ಎಂದರು. ಬಿಜೆಪಿ ಪಕ್ಷ ಯಾವ ಸಂದರ್ಭದಲ್ಲಿ ಇಂತಹ ಕೆಳಮಟ್ಟಕ್ಕೆ ಇಳಿದಿರಲಿಲ್ಲ ಎಂದರು. ಈ ಹೇಳಿಕೆ ಕೇಳಿ ಕಾಂಗ್ರೆಸ್ ಸಂಸದರ ಕೂಗಾಟ ಜೋರಾಯಿತು. ವಿರೋಧ ಪಕ್ಷದವರೂ ಕೂಗಾಡಲು ಆರಂಭಿಸಿದರು. ಸಭೆಯಲ್ಲಿ ಮತ್ತೆ ಗದ್ದಲ ಉಂಟಾಯಿತು.

ನಂತರ ಸಭಾಧ್ಯಕ್ಷ ಓಂ ಬಿರ್ಲಾ ಸದನವನ್ನು ಮೊಟಕುಗೊಳಿಸಿ 1ಗಂಟೆಗೆ ಸೇರುವುದಾಗಿ ತಿಳಿಸಿದರು.
ನಂತರ ಸಂಸದ ಕಿರಿತ್ ಸೋಲಂಕಿ ಅಧ್ಯಕ್ಷ ಪೀಠದಲ್ಲಿ ಕುಳಿತರು. ಮತ್ತೆ ಬಿಜೆಪಿ ಸಂಸದರು ರಾಹುಲ್ ಗಾಂಧಿ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು. ಸಂಸದ ಮಾಣಿಕ್ಯಂ ಟಾಗೂರ್ ಹರ್ಷವರ್ಧನ್ ಅವರತ್ತ ದಾಳಿ ನಡೆಸಲು ಮುಂದಾಗಿರುವುದಕ್ಕೆ ಕ್ಷಮೆ ಕೇಳಬೇಕು. ಅಲ್ಲದೆ, ಅವರನ್ನು ಸದನದಿಂದ ಹೊರಹಾಕಿ ಎಂದು ಬಿಜೆಪಿ ಸದಸ್ಯರು ಒತ್ತಾಯಿಸಿದರು.

ಮತ್ತೆ ಸದನವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಲಾಯಿತು. ಸಂಸದೀಯ ವ್ಯವಹಾರಗಳ ಸಚಿವ ಪ್ಲಲ್ಹಾದ ಜೋಷಿ ಮಾತನಾಡಿ, ಏನೇ ಇರಲಿ ಸಭಾಧ್ಯಕ್ಷರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಆರೋಗ್ಯ ಸಚಿವರ ಮೇಲೆ ದಾಳಿ ನಡೆಸಲು ಮುಂದಾಗಿರುವುದು ಖಂಡನೀಯ ಎಂದರು.

ನಂತರ ಸಭೆ ಸೇರಿದ ಸದನ ಮತ್ತೆ ಗದ್ದಲದಲ್ಲಿ ಮುಳುಗಿತು. ಸಂಸದ ಎ.ರಾಜಾ ಅವರು ಅಧ್ಯಕ್ಷರ ಪೀಠದಲ್ಲಿ ಕುಳಿತು ಸದನವನ್ನು ನಾಳೆಗೆ ಮುಂದೂಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು