ಶನಿವಾರ, ಜನವರಿ 18, 2020
19 °C

ಸಿಎಎ ಜಾರಿ ಪ್ರಕ್ರಿಯೆ ಆರಂಭಿಸಿದ ಉತ್ತರ ಪ್ರದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಖನೌ: ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ನೇತೃತ್ವದ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಗಾನಿಸ್ತಾನದ ವಲಸಿಗರನ್ನು ಗುರುತಿಸುವಂತೆ ಆಯಾ ಜಿಲ್ಲಾ ಮ್ಯಾಜಿಸ್ಟ್ರೇಟರಿಗೆ ಸರ್ಕಾರ ಸೂಚಿಸಿದೆ. ಈ ಕುರಿತು ಗೃಹ ಸಚಿವಾಲಯ ಮೌಖಿಕ ಸೂಚನೆ ನೀಡಿದೆ. ಆದರೆ, ಲಿಖಿತ ಆದೇಶ ಹೊರಡಿಸಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಗಾನಿಸ್ತಾನದಿಂದ ಕಿರುಕುಳಕ್ಕೊಳಗಾಗಿ ಭಾರತಕ್ಕೆ ಬಂದು ಪೌರತ್ವ ಇಲ್ಲದೆ ವಾಸಿಸುತ್ತಿರುವವರ ಪಟ್ಟಿಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟರು ಸಿದ್ಧಪಡಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಮೂಲಗಳ ಪ್ರಕಾರ ರಾಮ್‌ಪುರ, ಗಾಜಿಯಾಬಾದ್ ಶಹಜಹಾನ್‌ಪುರ, ಲಖನೌ ಜಿಲ್ಲೆಗಳಲ್ಲಿ ಸಿಎಎ ಅನ್ವಯ ಪೌರತ್ವ ಪಡೆಯುವವರ ಸಂಖ್ಯೆ ಹೆಚ್ಚಿರಬಹುದು ಎಂದು ಸರ್ಕಾರ ಅಂದಾಜಿಸಿದೆ.

ಮ್ಯಾಜಿಸ್ಟ್ರೇಟರು ಸಿದ್ಧಪಡಿಸುವ ಪಟ್ಟಿಯನ್ನು ಕೇಂದ್ರ ಗೃಹ ಸಚಿವಾಲಯಕ್ಕೆ ಕಳುಹಿಸಿಕೊಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮುಸ್ಲಿಂ ಅಕ್ರಮ ವಲಸಿಗರ ಬಗ್ಗೆಯೂ ಕೇಂದ್ರಕ್ಕೆ ರಾಜ್ಯ ಸರ್ಕಾರ ಮಾಹಿತಿ ನೀಡಲಿದೆ. ಅಕ್ರಮ ವಲಸಿಗರನ್ನು ಅವರ ದೇಶಕ್ಕೆ ಗಡಿಪಾರು ಮಾಡುವ ಸಲುವಾಗಿ ಈ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು