ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂದಿರಕ್ಕಾಗಿ ದೇಶದಾದ್ಯಂತ ಶಪಥ

Last Updated 6 ನವೆಂಬರ್ 2019, 10:58 IST
ಅಕ್ಷರ ಗಾತ್ರ

ಲಖನೌ: ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣಕ್ಕಾಗಿ ಜನರು ಪ್ರತಿಜ್ಞೆ ಕೈಗೊಳ್ಳುವ ಕಾರ್ಯಕ್ರಮಗಳನ್ನು ದೇಶದಾದ್ಯಂತ ನಡೆಸಲು ವಿಶ್ವಹಿಂದೂ ಪರಿಷತ್‌ (ವಿಎಚ್‌ಪಿ) ಯೋಜನೆ ರೂಪಿಸಿದೆ. ಇತ್ತೀಚೆಗೆ ನಡೆಸಲಾದ ಧರ್ಮ ಸಭೆಯಿಂದಾಗಿ ಮಂದಿರ ನಿರ್ಮಾಣ ಚಳವಳಿಗೆ ಸಿಕ್ಕ ವೇಗವನ್ನು ಉಳಿಸಿಕೊಳ್ಳುವುದು ವಿಎಚ್‌ಪಿಯ ಉದ್ದೇಶವಾಗಿದೆ.

ಡಿ.9ರಂದು ದೆಹಲಿಯಲ್ಲಿ ಧರ್ಮಸಭೆ ನಡೆಸಲಾಗುವುದು. ಅದರಲ್ಲಿ ಐದು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಹಾಗೆಯೇ, ಮುಂದಿನ ವರ್ಷ ಜನವರಿ 31 ಮತ್ತು ಫೆಬ್ರುವರಿ 1ರಂದು ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಧರ್ಮ ಸಂಸತ್‌ನಲ್ಲಿ ಐದು ಸಾವಿರ ಸಂತರು ಭಾಗವಹಿಸಲಿದ್ದಾರೆ. ದಕ್ಷಿಣ ಮತ್ತು ಈಶಾನ್ಯ ಭಾರತದ ಸಂತರನ್ನು ವಿಶೇಷವಾಗಿ ಆಹ್ವಾನಿಸಲಾಗುವುದು ಎಂದು ವಿಎಚ್‌ಪಿ ವಕ್ತಾರ ಶರದ್‌ ಶರ್ಮಾ ತಿಳಿಸಿದ್ದಾರೆ.

ರಾಮ ಮಂದಿರ, ಗೋವು, ಗಂಗಾನದಿ ಮತ್ತು ಸಾಮಾಜಿಕ ಸೌಹಾರ್ದಕ್ಕೆ ಸಂಬಂಧಿಸಿದ ವಿಚಾರಗಳ ಬಗ್ಗೆ ಧರ್ಮ ಸಭೆಯಲ್ಲಿ ಚರ್ಚೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ಬೇಕು ಎಂಬ ಭಾವನೆ ಹಿಂದೂ ಸಮಾಜದಲ್ಲಿ ಇದೆ ಎಂಬ ಸಂದೇಶವನ್ನು ಧರ್ಮ ಸಭೆಯು ನೀಡಿದೆ. ಮಂದಿರ ನಿರ್ಮಾಣಕ್ಕೆ ಸಂಬಂಧಿಸಿ ಮುಂದಿನ ನಡೆ ಏನು ಎಂಬುದನ್ನು 2019ರಲ್ಲಿ ಪ್ರಯಾಗರಾಜ್‌ನಲ್ಲಿ ನಡೆಯಲಿರುವ ಕುಂಭ ಮೇಳದಲ್ಲಿ ನಿರ್ಧರಿಸಲಾಗುವುದು ಎಂದು ಶರ್ಮಾ ವಿವರಿಸಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿರುವ ಸಂದರ್ಭದಲ್ಲಿ ಜನರ ನಾಡಿಮಿಡಿತ ಅರಿಯುವುದಕ್ಕಾಗಿ ಅಯೋಧ್ಯೆಯಲ್ಲಿ ಧರ್ಮ ಸಭೆ ನಡೆಸಲಾಗಿದೆ ಎಂಬುದು ವಿರೋಧ ಪಕ್ಷಗಳ ಅಭಿಪ್ರಾಯವಾಗಿದೆ.

‘ಈ ವಿಚಾರ (ರಾಮ ಮಂದಿರ) ಈಗ ನ್ಯಾಯಾಂಗದ ವ್ಯಾಪ್ತಿಯಲ್ಲಿದೆ. ಹಾಗಿದ್ದರೂ ವಿಎಚ್‌ಪಿ, ಬಿಜೆಪಿ ಮತ್ತು ಅವುಗಳಿಗೆ ಸಂಬಂಧಿಸಿದ ಇತರ ಸಂಘಟನೆಗಳು ಅಸಾಧಾರಣ ಆತುರ ತೋರುತ್ತಿವೆ. ಇವು ನಾಲ್ಕೂವರೆ ವರ್ಷ ಈ ಬಗ್ಗೆ ಮಾತೇ ಆಡಿಲ್ಲ. ಅಯೋಧ್ಯೆ ಮತ್ತು ಸುತ್ತಲಿನ ಪ್ರದಶಗಳಲ್ಲಿ ಬಿಜೆಪಿ ನೆಲೆ ಕಳೆದುಕೊಳ್ಳುತ್ತಿದೆ. ಕಾರ್ಯಕರ್ತರನ್ನು ಹುರಿದುಂಬಿಸಲು ಹತಾಶ ಪ್ರಯತ್ನವಾಗಿ ಧರ್ಮ ಸಭೆ ನಡೆಸಲಾಗಿದೆ’ ಎಂದು ಅಯೋಧ್ಯೆಯ ಮಾಜಿ ಶಾಸಕ ತೇಜ್‌ ನಾರಾಯಣ್‌ ಪಾಂಡೆಹೇಳಿದ್ದಾರೆ.

*
ಬಿಜೆಪಿ ಮತ್ತು ವಿಎಚ್‌ಪಿ 30 ವರ್ಷಗಳಿಂದ ಈ ರಾಜಕೀಯ ನಾಟಕ ಆಡುತ್ತಿವೆ. ಅಯೋಧ್ಯೆಯ ಜನರು ಈ ಕಾರ್ಯಸೂಚಿಯನ್ನು ತಿರಸ್ಕರಿಸಿದ್ದಾರೆ.
–ತೇಜ್‌ ನಾರಾಯಣ್‌ ಪಾಂಡೆ, ಅಯೋಧ್ಯೆಯ ಮಾಜಿ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT