ಬ್ಯಾಂಕ್‌ಗಳ ಸಾಲ ತೀರಿಸಲು ಸಿದ್ಧ: ಮಲ್ಯ ಭರವಸೆ

7

ಬ್ಯಾಂಕ್‌ಗಳ ಸಾಲ ತೀರಿಸಲು ಸಿದ್ಧ: ಮಲ್ಯ ಭರವಸೆ

Published:
Updated:
ಮಲ್ಯ

ನವದೆಹಲಿ: ‘ಆಸ್ತಿಗಳನ್ನು ಮಾರಾಟ ಮಾಡಿ ಬ್ಯಾಂಕ್‌ ಸಾಲ ತೀರಿಸಲು ಸಿದ್ಧ’ ಎಂದು ಉದ್ಯಮಿ ವಿಜಯ ಮಲ್ಯ ಆಶ್ವಾಸನೆ ನೀಡಿದ್ದಾರೆ.

ಈ ಕುರಿತು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ಅವರು,  ಸಾಲ ತೀರಿಸುವ ಕುರಿತು ತಾವು ಮಾಡಿದ್ದ ಎಲ್ಲ ಪ್ರಯತ್ನಗಳನ್ನು ಬಿಚ್ಚಿಟ್ಟಿದ್ದಾರೆ.

ತಮ್ಮ ಒಡೆತನದ ಕಂಪನಿಯ ₹13,960 ಕೋಟಿ ಬೆಲೆ ಬಾಳುವ ಆಸ್ತಿ ಮಾರಾಟ ಮಾಡಲು ಅನುಮತಿ ನೀಡುವಂತೆ ಕೋರಿ 2018ರ ಜೂನ್‌ 22ರಂದು ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾಗಿ ಅವರು ತಿಳಿಸಿದ್ದಾರೆ.

ಕಂಪನಿಗಳಿಗೆ ಸೇರಿದ ₹8,421 ಕೋಟಿ ಮೌಲ್ಯದ ಆಸ್ತಿ ಮತ್ತು ₹2,649 ಕೋಟಿ ಮೌಲ್ಯದ ಇತರ ಆಸ್ತಿಗಳನ್ನು ನ್ಯಾಯಾಲಯ ಉಸ್ತುವಾರಿಯಲ್ಲಿ ಮಾರಾಟ ಮಾಡಲು ಸಿದ್ಧ ಎಂದು ಹೈಕೋರ್ಟ್‌ಗೆ ಸಲ್ಲಿಸಿದ ಪ್ರಮಾಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಜಾರಿ ನಿರ್ದೇಶನಾಲಯ, ಸಾಲ ವಸೂಲಾತಿ ನ್ಯಾಯಮಂಡಳಿ ಸೇರಿದಂತೆ ವಿವಿಧ ಸಂಸ್ಥೆಗಳು ಈ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ.

ಪ್ರಧಾನಿಗೆ ಪತ್ರ: ಸಾಲ ಮರುಪಾವತಿಗೆ ಸಿದ್ಧವಿರುವುದಾಗಿ ತಿಳಿಸಿ 2016ರ ಏಪ್ರಿಲ್‌ 15ರಂದು ಪ್ರಧಾನಿ ಮತ್ತು ಹಣಕಾಸು ಸಚಿವರಿಗೆ ಬರೆದ ಪತ್ರಗಳನ್ನು ಅವರು ಬಹಿರಂಗಪಡಿಸಿದ್ದಾರೆ. ಆ ಪತ್ರಗಳಿಗೆ ಇದುವರೆಗೂ ಯಾವ ಪ್ರತಿಕ್ರಿಯೆಯೂ ಬಂದಿಲ್ಲ ಎಂದು ಮಲ್ಯ ಆರೋಪಿಸಿದ್ದಾರೆ.

ಅಪಪ್ರಚಾರ: ಬ್ಯಾಂಕ್‌ಗಳಿಂದ ಪಡೆದ ₹9,000 ಕೋಟಿ ಸಾಲದ ಹಣವನ್ನು ಕದ್ದು ವಿದೇಶಕ್ಕೆ ಪರಾರಿಯಾಗಿದ್ದೇನೆ ಎಂದು ರಾಜಕಾರಣಿಗಳು ಮತ್ತು ಮಾಧ್ಯಮಗಳು ತಮ್ಮ ವಿರುದ್ಧ ಅಪಪ್ರಚಾರ ನಡೆಸಿವೆ. ಮತ್ತೊಂದೆಡೆ ತನಿಖಾ ಸಂಸ್ಥೆಗಳು ತಮ್ಮನ್ನು ಬೇಟೆಯಾಡುತ್ತಿವೆ ಎಂದಿದ್ದಾರೆ.

ಅಪಪ್ರಚಾರದಿಂದಾಗಿ ತಮ್ಮನ್ನು ಸುತ್ತವರಿದಿರುವ ವಿವಾದ, ತಪ್ಪು ಕಲ್ಪನೆಗಳನ್ನು ದೂರ ಮಾಡಲು ಇದೀಗ ಕಾಲ ಕೂಡಿ ಬಂದಿದೆ. ವಾಸ್ತವ ಸಂಗತಿಗಳನ್ನು ಜನರ ಎದುರು ಇಡಲು ದೀರ್ಘ ಕಾಲದ ಮೌನವನ್ನು ಮುರಿದಿರುವುದಾಗಿ ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ರಾಜಕೀಯ ಚಿತಾವಣೆ: ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತಮ್ಮ ವಿರುದ್ಧ ಕಾನೂನಾತ್ಮಕ ನೆಲೆಯಲ್ಲಿ ಅಲ್ಲ, ಬದಲಾಗಿ ರಾಜಕೀಯ ಪ್ರೇರಿತ ತನಿಖೆ ನಡೆಸುತ್ತಿವೆ ಎಂದು ಮಲ್ಯ ಆರೋಪಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 13

  Happy
 • 1

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !