ಸೋಮವಾರ, ಫೆಬ್ರವರಿ 17, 2020
30 °C

ಧ್ವಜ ಹರಿದು ಧಿಮಾಕಿನಿಂದ ’ನಾನು ಪಕ್ಕಾ ಮುಸಲ್ಮಾನ’ಎಂದವ ಅಸಲಿಗೆ ಮುಸಲ್ಮಾನನೇ ಅಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂರತ್‌: ಬಾಲಕನೊಬ್ಬ ‘ನಾನು ಪಕ್ಕಾ ಮುಸಲ್ಮಾನ’ ಎಂದು ಕೂಗುತ್ತಾ ತ್ರಿವರ್ಣ ಧ್ವಜವನ್ನು ಹರಿದು ಹಾಕುವ ದೃಶ್ಯಾವಳಿಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ‘ಆದರೆ, ಈ ಬಾಲಕ ಹಾಗೂ ಚಿತ್ರೀಕರಿಸಿದವ ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿದವರು ಮತ್ತು ಮುಸಲ್ಮಾನನಲ್ಲದಿದ್ದರೂ ಮುಸ್ಲಿಂ ಎಂದು ಹೇಳಿಕೊಂಡಿರುವುದು ಹುಡುಗಾಟಿಕೆಯಿಂದ ಎಂಬುದು ವಿಚಾರಣೆ ಬಳಿಕ ತಿಳಿದು ಬಂದಿದೆ.

ಆದಾಗ್ಯೂ ಈ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ವೈರಲ್‌ ಆಗಿದ್ದು, ಕೋಮು ಸೌಹಾರ್ದಕ್ಕೆ ಧಕ್ಕೆ ಉಂಟು ಮಾಡುತ್ತಿದೆ.

ಈ ವಿಡಿಯೊವನ್ನು @AnupMishraBJP ಎನ್ನುವವರು ಆಗಸ್ಟ್‌ 20ರಂದು ಟ್ವಿಟರ್‌ಗೆ ಹಾಕಿದ್ದು, ‘ಈ ಹುಡುಗ ಭಾರತದ ರಾಷ್ಟ್ರೀಯ ಧ್ವಜವನ್ನು ಹರಿದುಹಾಕುತ್ತಾ, ಎಸೆಯುತ್ತಾ ‘ನಾನು ನಿಜವಾದ ಮುಸಲ್ಮಾನ’ ಎಂದು ಹೇಳುತ್ತಿದ್ದಾನೆ.... ಈ ಮನಸ್ಥಿತಿಯು ಎಲ್ಲಿ ಹುಟ್ಟಿದೆ?’ ಎಂಬ ಒಕ್ಕಣೆ ನೀಡಿದ್ದರು. ವಿಡಿಯೊ ಇದೀಗ ವೈರಲ್‌ ಆಗಿದ್ದು, 2100ಕ್ಕೂ ಹೆಚ್ಚು ಬಾರಿ ರೀಟ್ವೀಟ್‌ ಆಗಿದೆ.

ವಿಡಿಯೊ ವೈರಲ್‌ ಆಗುತ್ತಿದ್ದಂತೆ ಧ್ವಜ ಹರಿದವನನ್ನು ಸಂಪರ್ಕಿಸಿರುವ ಕೆಲವರು ಆತನನ್ನು ನಿಂದಿಸಿ, ಥಳಿಸಿದ್ದಾರೆ. ಜೊತೆಗೆ ಕ್ಷಮೆ ಕೋರುವಂತೆ ಒತ್ತಾಯಿಸಿರುವ ಮತ್ತೊಂದು ವಿಡಿಯೊವನ್ನು ಹರಿಬಿಟ್ಟಿದ್ದಾರೆ. ಈ ವಿಡಿಯೊಗೆ ‘ಪಕ್ಕಾ ಮುಸಲ್ಮಾನ ನಿಜಾವಾದ ದೇಶಭಕ್ತರಿಗೆ ಸಿಕ್ಕಾಗ’ ಎಂದ ಟಿಪ್ಪಣಿ ಹಾಕಿದ್ದಾರೆ.

ಈ ವಿಡಿಯೊವನ್ನು ಸುದರ್ಶನ್‌ ಸುದ್ದಿ ವಾಹಿನಿ ಮುಖ್ಯಸ್ಥ ಸುರೇಶ್‌ ಚೌಹಾಂಕೆ ಅವರೂ ಟ್ವಿಟರ್‌ ಹಾಗೂ ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಲಕ್ಷಾಂತರ ಜನರು ನೋಡಿದ್ದಾರೆ.

ಪ್ರಕರಣ

@AnupMishraBJP ವಿಡಿಯೊ ಹರಿಬಿಡುತ್ತಿದ್ದಂತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸೂರತ್‌ ಪೊಲೀಸರು ವಿಡಿಯೊದಲ್ಲಿದ್ದ ಹುಡುಗ ಹಾಗೂ ಚಿತ್ರೀಕರಿಸಿದ್ದವ ಇಬ್ಬರನ್ನೂ ಕುಟುಂಬ ಸಮೇತವಾಗಿ ಠಾಣೆಗೆ ಕರೆಸಿಕೊಂಡು ವಿಚಾರಣೆ ನಡೆಸಿದ್ದರು.

ಅಮ್ರೋಲಿಯವರಾದ ಇಬ್ಬರೂ ಯುವಕರು ತಮಾಷೆಗಾಗಿ ಆ ರೀತಿ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದರು. ಹೀಗಾಗಿ ಪೊಲೀಸರು ಇಬ್ಬರಿಗೂ ಎಚ್ಚರಿಕೆ ನೀಡಿ ಕಳುಹಿಸಿದ್ದರು.

ಈ ಬಗ್ಗೆ ಆಗಸ್ಟ್‌ 20 ರಂದು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ವಿಭಾಗೀಯ ಆಯುಕ್ತ ಬಿ.ಸಿ. ಠಾಖೇರ್‌, ‘ಬಾಲಕರು ಹುಡುಗಾಟಿಕೆಯಿಂದ ಈ ರೀತಿ ಮಾಡಿದ್ದು ಕುಟುಂಬದವರು ಕ್ಷಮೆ ಕೋರಿದ್ದಾರೆ. ಅವರು ಇನ್ನೂ ಕೇವಲ 14 ವರ್ಷದವರಾಗಿದ್ದು, ಅಲ್ಪಸಂಖ್ಯಾತ(ಮುಸ್ಲಿಂ) ಸಮುದಾಯಕ್ಕೆ ಸೇರಿದವರಲ್ಲ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ. ಇಂತಹ ಕೃತ್ಯಗಳಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಕುಟುಂಬದವರಿಗೆ ವಿವರಿಸಿದ್ದೇವೆ. ಮತ್ತೆ ಈ ರೀತಿ ಆಗದಂತೆ ಎಚ್ಚರವಹಿಸುವಂತೆ ಸೂಚಿಸಿ, ಎಚ್ಚರಿಕೆ ನೀಡಿದ್ದೇವೆ’ ಎಂದು ಮಾಹಿತಿ ನೀಡಿದ್ದರು.

ಈ ಸುದ್ದಿ ದಿ ಟೈಮ್ಸ್‌ ಆಫ್‌ ಇಂಡಿಯಾ ವರದಿ ಮಾಡಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು