ಹಿಂಸಾ ರಾಜಕಾರಣ: ಟಿಎಂಸಿ–ಬಿಜೆಪಿ ಸಂಘರ್ಷ

ಶುಕ್ರವಾರ, ಜೂನ್ 21, 2019
24 °C
ಬಿಜೆಪಿಯಿಂದ ಕರಾಳದಿನ ಆಚರಣೆ: ಪಶ್ಚಿಮ ಬಂಗಾಳದಾದ್ಯಂತ ಪ್ರತಿಭಟನಾ ರ‍್ಯಾಲಿ

ಹಿಂಸಾ ರಾಜಕಾರಣ: ಟಿಎಂಸಿ–ಬಿಜೆಪಿ ಸಂಘರ್ಷ

Published:
Updated:
Prajavani

ಬಶೀರ್‌ಘಾಟ್/ಕೋಲ್ಕತ್ತ: ಹಿಂಸಾ ರಾಜಕಾರಣಕ್ಕೆ ಸಂಬಂಧಿಸಿ ಪಶ್ಚಿಮ ಬಂಗಾಳದಲ್ಲಿ ಆಡಳಿತಾರೂಢ ಟಿಎಂಸಿ ಮತ್ತು ಬಿಜೆಪಿ ನಡುವೆ ಆರೋಪ– ಪ್ರತ್ಯಾರೋಪಗಳು ಮುಂದುವರಿದಿವೆ.

ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಆರೋಪಿಸಿ ಮತ್ತು ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ ಬಿಜೆಪಿ ಸೋಮವಾರ ಕರಾಳ ದಿನ ಆಚರಿಸಿತು. ಆದರೆ, ಪಶ್ಚಿಮ ಬಂಗಾಳದಲ್ಲಿ ಗಲಭೆಗಳು ಮುಂದುವರಿಯಲು ಕೇಂದ್ರ ಸರ್ಕಾರ ಹಾಗೂ ಬಿಜೆಪಿ ನಾಯಕರು ಪ್ರಚೋದನೆ ನೀಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.

ಉತ್ತರ 24 ಪರಗಣ ಜಿಲ್ಲೆಯ ಬಶೀರ್‌ಘಾಟ್ ವಲಯದಲ್ಲಿ 12 ಗಂಟೆ ಬಂದ್ ಆಚರಿಸಲಾಯಿತು. ಬಹುತೇಕ ಕಡೆ ರ‍್ಯಾಲಿ ನಡೆಯಿತು. ಬಿಜೆಪಿ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿದ್ದರು. 

ಹಲವು ಭಾಗಗಳಲ್ಲಿ ರಸ್ತೆ ಹಾಗೂ ರೈಲು ಸಂಚಾರಕ್ಕೆ ತಡೆ ಒಡ್ಡ ಲಾಯಿತು. ತಪ್ಪಿತಸ್ಥರನ್ನು ತಕ್ಷಣ ಬಂಧಿ ಸುವಂತೆ ಕಾರ್ಯಕರ್ತರು ಆಗ್ರಹಿಸಿದರು. 

ಬಿಜೆಪಿ ಹಾಗೂ ಟಿಎಂಸಿ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದ್ದ ಬಶೀರ್‌ಘಾಟ್‌ನ ಸಂದೇಶ್‌ ಖಲಿ ಪ್ರದೇಶದಲ್ಲಿ ಬಿಗುವಿನ ವಾತಾವರಣ ಮುಂದುವರಿದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಸಂಖ್ಯೆ ಯ ಪೊಲೀಸರನ್ನು ನಿಯೋಜಿಸಲಾಗಿದೆ. 

ಕರಾಳದಿನ ಆಚರಿಸುವುದಾಗಿ ಭಾನುವಾರ ಬಿಜೆಪಿ ಘೋಷಿಸಿತ್ತು. ಸಂದೇಶ್‌ಖಲಿ ಪ್ರದೇಶದಲ್ಲಿ ಐವರ ಹತ್ಯೆಯಾಗಿದೆ. ಮೂವರ ಮೃತದೇಹಗಳು ದೊರಕಿದ್ದು, ಇನ್ನುಳಿದ ವರು ನಾಪತ್ತೆಯಾಗಿದ್ದಾರೆ ಎಂದು ಬಿಜೆಪಿ ಹೇಳುತ್ತಿದೆ. ಒಬ್ಬ ಮಾತ್ರ ಬಲಿ ಯಾಗಿದ್ದಾನೆ ಎಂದು ಟಿಎಂಸಿ ಹೇಳಿದೆ.


ಪಕ್ಷದ ಕಾರ್ಯಕರ್ತರ ಹತ್ಯೆ ಖಂಡಿಸಿ ಬಿಜೆಪಿ ಕಾರ್ಯಕರ್ತರು ಸಿಲಿಗುರಿಯಲ್ಲಿ ಕರಾಳದಿನ ಆಚರಿಸಿ, ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು

ಬಿಜೆಪಿ ಪಿತೂರಿ, ಟಿಎಂಸಿ ಆರೋಪ: ಬಿಜೆಪಿಯೇತರ ಪಕ್ಷಗಳ ಆಡಳಿತವಿರುವ ರಾಜ್ಯಗಳಲ್ಲಿ ಅಧಿಕಾರವನ್ನು ಕಬಳಿಸಲು ಕೇಂದ್ರ ಗೃಹಸಚಿವಾಲಯ ಕೆಟ್ಟ ಮಾರ್ಗ ಅನುಸರಿಸುತ್ತಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಆರೋಪಿಸಿದೆ. ಕೇಂದ್ರ ಗೃಹ ಸಚಿವಾಲಯವು ಪಶ್ಚಿಮ ಬಂಗಾಳ ಸರ್ಕಾರಕ್ಕೆ ನೀಡಿರುವ ಸಲಹೆಗಳು ಪಿತೂರಿಯಿಂದ ಕೂಡಿವೆ ಎಂದು ಕೇಂದ್ರ ಗೃಹಸಚಿವ ಅಮಿತ್ ಶಾ ಅವರಿಗೆ ಬರೆದಿರುವ ಪತ್ರದಲ್ಲಿ ಆರೋ‍ಪಿಸಲಾಗಿದೆ.

ಗಲಭೆಗಳ ಕುರಿತಂತೆ ರಾಜ್ಯ ಸರ್ಕಾರ ದಿಂದ ವರದಿ ಪಡೆಯದೇ, ನೈಜ ಘಟನೆಗಳನ್ನು ಪರಾಮರ್ಶೆ ಮಾಡ ದೆಯೇ, ಕೇಂದ್ರ ಗೃಹಸಚಿವಾಲಯವು ನಿರ್ಧಾರ ತೆಗೆದುಕೊಳ್ಳುತ್ತಿದೆ ಎಂದು ಸಚಿವ ಪಾರ್ಥ ಚಟರ್ಜಿ ಆರೋಪಿಸಿದ್ದಾರೆ. 

ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಹಿಂಸೆಗಳು ನಡೆಯುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದ ಸಚಿವಾಲಯ, ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಭಾನುವಾರ ಸಲಹೆ ನೀಡಿತ್ತು. 

‘ಬಂಗಾಳದಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಭದ್ರತಾ ಸಂಸ್ಥೆಗಳು ಪರಿಸ್ಥಿತಿಯನ್ನು ಸೂಕ್ತವಾಗಿ ನಿಭಾಯಿಸಿವೆ’ ಎಂದು ರಾಜ್ಯ ಸರ್ಕಾರ ಪ್ರತಿಕ್ರಿಯಿಸಿದೆ.

ಪ್ರಧಾನಿ ಭೇಟಿ ಮಾಡಿದ ರಾಜ್ಯಪಾಲ ತ್ರಿಪಾಠಿ: ರಾಜಕೀಯ ಗಲಭೆಗಳ ಮಧ್ಯೆಯೇ, ಪಶ್ಚಿಮ ಬಂಗಾಳ ರಾಜ್ಯಪಾಲ ಕೇಸರಿನಾಥ ತ್ರಿಪಾಠಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಸೋಮವಾರ ಭೇಟಿ ಮಾಡಿದರು.   

ಸಭೆಗೂ ಮುನ್ನ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಪ್ರಧಾನಿ ಹುದ್ದೆ ವಹಿಸಿಕೊಂಡ ಬಳಿಕ ಮೋದಿ ಅವರನ್ನು ಮೊದಲ ಬಾರಿಗೆ ಭೇಟಿ ಮಾಡುತ್ತಿದ್ದೇನೆ. ಇದು ಸೌಜನ್ಯದ ಭೇಟಿ’ ಎಂದು ಹೇಳಿದ್ದರು.

ದನಿ ಅಡಗಿಸುವ ಹುನ್ನಾರ: ಮಮತಾ

ರಾಜ್ಯ ಸರ್ಕಾರವನ್ನು ಕಿತ್ತೊಗೆಯಲು ಬಿಜೆಪಿ ಮತ್ತು ಕೇಂದ್ರ ಸರ್ಕಾರ ಸಂಚು ರೂಪಿಸಿದೆ. ಆದರೆ, ಈ ಯತ್ನ ಯಶಸ್ವಿಯಾಗದು ಎಂದು ‍ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

‘ದೇಶದಲ್ಲಿ ಬಿಜೆಪಿ ವಿರುದ್ಧವಾಗಿ ಮಾತನಾಡುತ್ತಿರುವ ಏಕೈಕ ಧ್ವನಿ ನನ್ನದು. ಹೀಗಾಗಿ ನನ್ನ ಧ್ವನಿ ಅಡಗಿಸಲು ಯತ್ನಿಸಲಾಗುತ್ತಿದೆ. ವಿವಿಧ ಸಾಮಾಜಿಕ ಜಾಲತಾಣ ಹಾಗೂ ವೆಬ್‌ಸೈಟ್‌ಗಳ ಮೂಲಕ ಸುಳ್ಳು ಸುದ್ದಿಗಳನ್ನು ಹರಡಲು ಬಿಜೆಪಿಯವರು ಕೋಟಿಗಟ್ಟಲೆ ರೂಪಾಯಿ ವ್ಯಯ ಮಾಡುತ್ತಿದ್ದಾರೆ’ ಎಂದು ಅವರು ಆರೋ‍ಪಿಸಿದ್ದಾರೆ.

‘ಯಾವುದೇ ರಾಜ್ಯದಲ್ಲಿ ಗಲಭೆಗಳು ಉಂಟಾದರೆ ಕೇಂದ್ರ ಸರ್ಕಾರದ್ದೂ ಸಮಾನ ಜವಾಬ್ದಾರಿ ಇರುತ್ತದೆ. ಇಂತಹ ಘಟನೆಗಳು ನಡೆದಾಗ ಕೇಂದ್ರ ಸರ್ಕಾರವು ಜವಾಬ್ದಾರಿಯಿಂದ ನುಣುಚಿಕೊಳ್ಳಬಾರದು’ ಎಂದು ಅವರು ಹೇಳಿದ್ದಾರೆ.

ಸಂದೇಶ್‌ಖಲಿ ಗ್ರಾಮದಲ್ಲಿ ನಡೆದ ಗಲಭೆ ಬಗ್ಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಈಗಾಗಲೇ ಪ್ರತಿಕ್ರಿಯೆ ನೀಡಿದ್ದು, ತಾವು ಮಾತನಾಡುವುದಿಲ್ಲ ಎಂದಿದ್ದಾರೆ.

***

ಪಶ್ಚಿಮ ಬಂಗಾಳದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ. ಆದರೂ ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಬೇಕಿಲ್ಲ.

- ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ

ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆಗೆ ಬಿಜೆಪಿ ಬೇಡಿಕೆ ಇಟ್ಟಿಲ್ಲ. ನಮ್ಮ ಕಾರ್ಯಕ್ರಮಗಳಿಗೆ ಸರ್ಕಾರ ಅಡ್ಡಿಪಡಿಸುವುದನ್ನು ವಿರೋಧಿಸುತ್ತೇವೆ.

- ಕೈಲಾಶ್ ವಿಜಯವರ್ಗೀಯ, ಬಿಜೆಪಿ ಪ್ರಧಾನ ಕಾರ್ಯದರ್ಶಿ

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !