ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು: ರಾಜನಾಥ ಸಿಂಗ್‌ ಎಚ್ಚರಿಕೆ

Last Updated 4 ಫೆಬ್ರುವರಿ 2019, 20:06 IST
ಅಕ್ಷರ ಗಾತ್ರ

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿದ್ದು, ಅಗತ್ಯ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರಕ್ಕೆ ಸಂವಿಧಾನದತ್ತ ಅಧಿಕಾರವಿದೆ ಎಂದು ಗೃಹ ಸಚಿವ ರಾಜನಾಥ ಸಿಂಗ್‌ ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿಯ ಬೆಳವಣಿಗೆ ಅನಿರೀಕ್ಷಿತ ಮತ್ತು ದುರ್ವೈವದ ಸಂಗತಿ. ಕಾನೂನು ರೀತಿ ಕರ್ತವ್ಯ ನಿರ್ವಹಿಸಲು ಸಿಬಿಐಗೆ ಅವಕಾಶ ಮಾಡಿಕೊಡಬೇಕು ಎಂದು ಕಠಿಣ ಸಂದೇಶ ರವಾನಿಸಿದ್ದಾರೆ.

ಭಾನುವಾರ ನಡೆದಿರುವ ವಿದ್ಯಮಾನ ರಾಜ್ಯದಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಎದುರಾಗಿರುವದನ್ನು ತೋರಿಸುತ್ತದೆ. ರಾಜ್ಯಪಾಲರ ವರದಿ ಆಧಾರರ ಮೇಲೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಸಿಂಗ್‌ ಲೋಕಸಭೆಗೆ ತಿಳಿಸಿದರು.

ಇದಕ್ಕೂ ಮೊದಲು, ರಾಜಕೀಯ ವಿರೋಧಿಗಳನ್ನು ಹತ್ತಿಕ್ಕಲು ಸರ್ಕಾರ ಸಿಬಿಐ ಹಾಗೂ ಇತರ ತನಿಖಾ ಸಂಸ್ಥೆಗಳನ್ನು ಅಸ್ತ್ರ ಮಾಡಿಕೊಂಡಿದೆ ಎಲ್ಲ ವಿರೋಧ ಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದವು.

ಪಶ್ಚಿಮ ಬಂಗಾಳದಲ್ಲಿ ಮಾತ್ರವಲ್ಲ ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಪ್ರದೇಶಗಳಲ್ಲಿ ಕೇಂದ್ರ ಸರ್ಕಾರ ರಾಜಕೀಯ ವಿರೋಧಿಗಳನ್ನು ಮುಗಿಸಲು ಸಿಬಿಐ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದರು.

ಮಹಿಳಾ ಮುಖ್ಯಮಂತ್ರಿ ವಿರುದ್ಧ ಕೇಂದ್ರ ಸರ್ಕಾರ ಅಧಿಕಾರ ಮತ್ತು ತೋಳ್ಬಲ ಪ್ರದರ್ಶಿಸುತ್ತಿದೆ. ನಿಜಕ್ಕೂ ಇದು ಖಂಡನಾರ್ಹ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಕಿಡಿ ಕಾರಿದರು.

ಮಮತಾ ಬ್ಯಾನರ್ಜಿ ಅವರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಕಾಂಗ್ರೆಸ್‌, ಬಿಜೆಡಿ, ಎನ್‌ಸಿಪಿ, ಸಮಾಜವಾದಿ ಪಕ್ಷ, ಟಿಎಂಸಿ, ಆರ್‌ಜೆಡಿ ಸಂಸದರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಸದನದಲ್ಲಿ ಪ್ರತಿಧ್ವನಿ: ಪಶ್ಚಿಮ ಬಂಗಾಳದಲ್ಲಿ ಭಾನುವಾರ ನಡೆದ ಬೆಳವಣಿಗೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿತು.

ಕೇಂದ್ರ ಸರ್ಕಾರವು ಸಿಬಿಐಯನ್ನು ಅಸ್ತ್ರದಂತೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ತೃಣಮೂಲ ಕಾಂಗ್ರೆಸ್‌ ಸಂಸದರು ಪ್ರತಿಭಟನೆಗೆ ಇಳಿದರು. ಇತರ ವಿರೋಧ ಪಕ್ಷಗಳು ಟಿಎಂಸಿ ಸಂಸದರ ಬೆಂಬಲಕ್ಕೆ ನಿಂತರು. ಸ್ಪೀಕರ್‌ ಮಾಡಿಕೊಂಡ ಮನವಿ ಫಲ ನೀಡದಿದ್ದಾಗ ಉಭಯ ಸದನಗಳ ಕಲಾಪಗಳನ್ನು ಮುಂದೂಡಲಾಯಿತು.

ವರದಿ ಸಲ್ಲಿಸಿದ ರಾಜ್ಯಪಾಲ
ಕೋಲ್ಕತ್ತ:
ಪಶ್ಚಿಮ ಬಂಗಾಳದಲ್ಲಿ ನಿರ್ಮಾಣವಾಗಿರುವ ಸ್ಥಿತಿಯ ಬಗ್ಗೆ ರಾಜ್ಯಪಾಲ ಕೆ.ಎನ್‌. ತ್ರಿಪಾಠಿ ಸೋಮವಾರ ಕೇಂದ್ರ ಗೃಹ ಸಚಿವಾಲಯಕ್ಕೆ ವರದಿ ಸಲ್ಲಿಸಿದ್ದಾರೆ.

ವರದಿಯಲ್ಲಿರುವ ಅಂಶಗಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಜತೆ ದೂರವಾಣಿಯಲ್ಲಿ ಮಾತನಾಡಿದ ರಾಜ್ಯಪಾಲರು ಮಾಹಿತಿ ನೀಡಿದ್ದಾರೆ.

ವಿಶೇಷ ತನಿಖಾ ದಳ, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಗೃಹ ಕಾರ್ಯದರ್ಶಿ ಭಾನುವಾರ ರಾತ್ರಿ ಸಲ್ಲಿಸಿದ ವರದಿಗಳನ್ನು ಒಟ್ಟುಗೂಡಿಸಿ ರಾಜ್ಯಪಾಲರು ವರದಿ ತಯಾರಿಸಿದ್ದಾರೆ ಎಂದು ರಾಜಭವನದ ಮೂಲಗಳು ತಿಳಿಸಿವೆ.

**

ಸಿಬಿಐ ಕೇಂದ್ರ ಸರ್ಕಾರದ ಮಿತ್ರಪಕ್ಷದಂತೆ ಕೆಲಸ ಮಾಡುತ್ತಿದೆ
– ವಿರೋಧ ಪಕ್ಷಗಳು

**

ಸಿಬಿಐ ರಾಜಕೀಯ ಅಸ್ತ್ರ

ಕೇಂದ್ರ ಸರ್ಕಾರವು ಸಿಬಿಐಯನ್ನು ರಾಜಕೀಯ ಅಸ್ತ್ರವನ್ನಾಗಿ ದುರ್ಬಳಕೆ ಮಾಡಿಕೊಳ್ಳುತ್ತಿದೆ. ವಿಶ್ವಾಸಾರ್ಹತೆ ಕಳೆದುಕೊಂಡಿರುವ ಸಿಬಿಐ ಘನತೆ ಮರುಸ್ಥಾಪಿಸುವ ಕೆಲಸವಾಗಬೇಕಿದೆ. ಬಂಗಾಳದಲ್ಲಿ ನಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಅಧಿಕಾರ ದುರ್ಬಳಕೆ ಪರಮಾವಧಿ. ಒಕ್ಕೂಟ ವ್ಯವಸ್ಥೆಯ ಮೇಲೆ ನಡೆಯುತ್ತಿರುವ ದಬ್ಬಾಳಿಕೆ
– ಬಿಜು ಜನತಾದಳ (ಬಿಜೆಡಿ)

**

ಪ್ರಜಾಪ್ರಭುತ್ವ ಉಳಿಸಲು ಹೋರಾಟ

ಪ್ರಜಾಪ್ರಭುತ್ವ ಉಳಿಸಲು ಮಮತಾ ಹೋರಾಟ ನಡೆಸಿದ್ದಾರೆ. ಪ್ರಾದೇಶಿಕತೆಯ ಅಸ್ಮಿತೆ ಉಳಿಸಿಕೊಳ್ಳುವ ಯಾವುದೇ ಹೋರಾಟವಾದರೂ ತಮ್ಮ ಪಕ್ಷ ಅದನ್ನು ಬೆಂಬಲಿಸುತ್ತದೆ. ಮಮತಾ ಹೋರಾಟಕ್ಕೆ ದೂರವಾಣಿ ಮೂಲಕ ಶುಭ ಕೋರಿದ್ದೇನೆ. ಖುದ್ದು ಬೆಂಬಲ ನೀಡಲು ಸಹೋದರಿ ಮತ್ತು ರಾಜ್ಯಸಭಾ ಸದಸ್ಯೆ ಕನಿಮೊಳಿ ಅವರನ್ನು ಕೋಲ್ಕತ್ತಕ್ಕೆ ಕಳಿಸಿದ್ದೇನೆ
– ಎಂ.ಕೆ. ಸ್ಟಾಲಿನ್‌ ಡಿಎಂಕೆ ಅಧ್ಯಕ್ಷ

**

ಬೆಂಕಿಯ ಜತೆ ಸರಸ

ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪಶ್ಚಿಮ ಬಂಗಾಳದಲ್ಲಿ ಬೆಂಕಿಯ ಜತೆ ಸರಸ ಆಡುತ್ತಿದೆ. ಮಮತಾ ಬ್ಯಾನರ್ಜಿ ಬಂಗಾಳದ ಹುಲಿ. ಹವಾಯಿ ಚಪ್ಪಲಿ ಮತ್ತು ಕಾಟನ್‌ ಸೀರೆಯ ಮಮತಾ ನಿಜವಾದ ಜನನಾಯಕಿ. ಆಕೆಯ ವಿರುದ್ಧ ಕೇಂದ್ರ ಸರ್ಕಾರ ಏನೇ ಆರೋಪ ಮಾಡಿದರೂ ಜನರು ನಂಬುವ ಸ್ಥಿತಿಯಲ್ಲಿ ಇಲ್ಲ. ಜನತೆಯ ವಿಶ್ವಾಸವನ್ನು ಸರ್ಕಾರ ಕಳೆದುಕೊಂಡಿದೆ
– ಶತ್ರುಘ್ನ ಸಿನ್ಹಾ, ಬಿಜೆಪಿ ಬಂಡಾಯ ನಾಯಕ

**

ಏನಾದರೂ ಸಂಭವಿಸಬಹುದು!

ಲೋಕಸಭೆ ಚುನಾವಣೆ ಘೋಷಣೆಯ ಮೊದಲು ಇನ್ನೂ ಒಂದು ತಿಂಗಳ ಅವಧಿಯಲ್ಲಿ ದೇಶದಲ್ಲಿ ಏನಾದರೂ ಸಂಭವಿಸಬಹುದು. ಸೂಕ್ಷ್ಮ ಪರಿಸ್ಥಿತಿಗಳನ್ನು ತಾಳ್ಮೆಯಿಂದ ನಿರ್ವಹಿಸುವ ಅಗತ್ಯವಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ಪತನಕ್ಕೆ ಕೇಂದ್ರ ಸರ್ಕಾರ ಯತ್ನಿಸುವ ಸಾಧ್ಯತೆ ಇಲ್ಲ
– ನಿತೀಶ್‌ ಕುಮಾರ್, ಬಿಹಾರ ಮುಖ್ಯಮಂತ್ರಿ

**

ಅಘೋಷಿತ ತುರ್ತು ಪರಿಸ್ಥಿತಿ

ಸಿಬಿಐನಿಂದ ಬಚಾವಾಗಲು ಮಮತಾ ಬ್ಯಾನರ್ಜಿ ಖುದ್ದು ಧರಣಿ ಆರಂಭಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ. ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಕುಸಿದಿದೆ.ಅಮಿತ್‌ ಶಾ, ಯೋಗಿ ಆದಿತ್ಯನಾಥ ಮತ್ತು ಸ್ಮೃತಿ ಇರಾನಿ ಅವರ ಹೆಲಿಕಾಪ್ಟರ್‌ ಇಳಿಯಲು ಅವಕಾಶ ನಿರಾಕರಿಸುವುದು ಪ್ರಜಾಪ್ರಭುತ್ವವೇ?
– ಪ್ರಕಾಶ್‌ ಜಾವಡೇಕರ್‌, ಕೇಂದ್ರ ಸಚಿವ

**

ಸಿಬಿಐ ವಿರುದ್ಧ ರಾಜಕೀಯೇತರ ಹೋರಾಟ

ಸಿಬಿಐ ವಿರುದ್ಧ ನಾನು ನಡೆಸಿರುವುದು ರಾಜಕೀಯೇತರ ಹೋರಾಟ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆಗಾಗಿ ನನ್ನ ಹೋರಾಟ ಮತ್ತು ಸತ್ಯಾಗ್ರಹ ಮುಂದುವರಿಯಲಿದೆ. ಬಹುತೇಕ ರಾಜಕೀಯ ಪಕ್ಷಗಳು ನನ್ನ ಬೆಂಬಲಕ್ಕೆ ನಿಂತಿವೆ.
- ಮಮತಾ ಬ್ಯಾನರ್ಜಿ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ

**

ಕೇಜ್ರಿವಾಲ್‌ ಹಾದಿ

ಮಮತಾ ಬ್ಯಾನರ್ಜಿ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರ ಹಾದಿ ತುಳಿಯುತ್ತಿದ್ದಾರೆ. ಕೋಲ್ಕತ್ತ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ವಿಚಾರಣೆ ನಡೆಸಿದರೆ ತಮ್ಮ ಅನೇಕ ರಹಸ್ಯಗಳು ಬಹಿರಂಗವಾಗಬಹುದು ಎಂಬ ಭಯದಿಂದ ಮಮತಾ ಧರಣಿ ನಡೆಸುತ್ತಿದ್ದಾರೆ.
- ರವಿಶಂಕರ್‌ ಪ್ರಸಾದ್‌, ಕೇಂದ್ರ ಸಚಿವ

**

ಪ್ರಜಾಪ್ರಭುತ್ವ ಉಳಿಯಬೇಕು ಎಂದಾದರೆ ಮೋದಿ–ಅಮಿತ್‌ ಶಾ ಜೋಡಿಯನ್ನು ಸೋಲಿಸಬೇಕು. ಈ ಜೋಡಿ ಪ್ರಜಾಪ್ರಭುತ್ವಕ್ಕೆ ಮಾರಕ. ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದೆ.
- ಅರವಿಂದ್ ಕೇಜ್ರಿವಾಲ್‌, ದೆಹಲಿ ಮುಖ್ಯಮಂತ್ರಿ

**

ಭ್ರಷ್ಟರ ರಕ್ಷಣೆಗೆ ಮಮತಾ ಬ್ಯಾನರ್ಜಿ ಮುಂದಾಗಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಕಾನುನು, ಸುವ್ಯವಸ್ಥೆ ಕುಸಿದಿದ್ದು, ರಾಷ್ಟ್ರಪತಿ ಆಡಳಿತ ಹೇರಬೇಕು
- ಬಾಬುಲ್‌ ಸುಪ್ರಿಯೊ, ಕೇಂದ್ರ ಸಚಿವ

ದಾಖಲೆ ನಾಶ: ಸಿಬಿಐ ಆತಂಕ: ‘ಸುಪ್ರೀಂ‘ನಲ್ಲಿ ಇಂದು ಸಿಬಿಐ ಅರ್ಜಿ ವಿಚಾರಣೆ
ನವದೆಹಲಿ:
ಕೋಲ್ಕತ್ತ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ಅವರು ಶಾರದಾ ಚಿಟ್‌ ಫಂಡ್‌ ತನಿಖೆಗೆ ಸಂಬಂಧಿಸಿದ ಎಲೆಕ್ಟ್ರಾನಿಕ್‌ ದಾಖಲೆಗಳನ್ನು ನಾಶಪಡಿಸುವ ಸಾಧ್ಯತೆ ಇದೆ ಎಂದು ಸಿಬಿಐ ಸೋಮವಾರ ಸುಪ್ರೀಂ ಕೋರ್ಟ್ ಎದುರು ಆತಂಕ ವ್ಯಕ್ತಪಡಿಸಿದೆ.

ಸಿಬಿಐ ಮನವಿಯನ್ನು ಪರಿಗಣಿಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಪೀಠ, ಮಂಗಳವಾರ ಅರ್ಜಿಯ ವಿಚಾರಣೆ ನಡೆಸುವುದಾಗಿ ಹೇಳಿದೆ.

ರಾಜೀವ್ ಕುಮಾರ್‌ ದಾಖಲೆ ನಾಶಪಡಿಸುವ ಆರೋಪಗಳನ್ನು ಸಾಬೀತುಪಡಿಸುವ ಸಾಕ್ಷಾಧಾರಗಳನ್ನು ಒದಗಿಸುವಂತೆ ಗೊಗೊಯಿ, ಸಿಬಿಐಗೆ ಸೂಚಿಸಿದರು.

ಒಂದು ವೇಳೆ ಈ ಆರೋಪ ನಿಜವಾದರೆ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ತ್ವರಿತ ವಿಚಾರಣೆಗೆ ಹೈಕೋರ್ಟ್ ನಕಾರ
ಕೋಲ್ಕತ್ತ:
ಕೋಲ್ಕತ್ತ ನಗರ ಪೊಲೀಸ್‌ ಕಮಿಷನರ್‌ ನಿವಾಸದೊಳಗೆ ಪ್ರವೇಶಿಸಲು ಯತ್ನಿಸಿದ ಸಿಬಿಐ ಅಧಿಕಾರಿಗಳ ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ ಅರ್ಜಿಯ ತ್ವರಿತ ವಿಚಾರಣೆಗೆ ಕಲ್ಕತ್ತಾ ಹೈಕೋರ್ಟ್ ಸೋಮವಾರ ನಿರಾಕರಿಸಿದೆ.

ಚಿಟ್‌ ಫಂಡ್‌ ಹಗರಣಗಳ ವಿಚಾರಣೆ ಸಂಬಧ ಸಿಬಿಐ ಅಧಿಕಾರಿಗಳು ಭಾನುವಾರ ಕೋಲ್ಕತ್ತ ನಗರ ಪೊಲೀಸ್‌ ಕಮಿಷನರ್‌ ರಾಜೀವ್‌ ಕುಮಾರ್‌ ನಿವಾಸಕ್ಕೆ ಪ್ರವೇಶಿಸಲು ಯತ್ನಿಸಿದ್ದರು.

ಕೇಂದ್ರ ಸರ್ಕಾರದ ಆಕ್ಷೇಪದ ಹಿನ್ನೆಲೆಯಲ್ಲಿ ಅರ್ಜಿಯ ತ್ವರಿತ ವಿಚಾರಣೆಗೆ ಹೈಕೋರ್ಟ್ ನಿರಾಕರಿಸಿದೆ. ರಾಜ್ಯ ಸರ್ಕಾರದ ಅರ್ಜಿ ಮಂಗಳವಾರ ವಿಚಾರಣೆಗೆ ಬರಲಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಸಿಬಿಐ ಸಲ್ಲಿಸಿರುವ ಅರ್ಜಿ ಕೂಡ ಮಂಗಳವಾರ ವಿಚಾರಣೆಗೆ ಬರಲಿದೆ.

ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
ನವದೆಹಲಿ:
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಬಿಜೆಪಿ ಸೋಮವಾರ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದೆ.

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ರಾಜಕೀಯ ಸಭೆ, ಸಮಾರಂಭಗಳನ್ನು ನಡೆಸಲು ತೃಣಮೂಲ ಕಾಂಗ್ರೆಸ್‌ ಸರ್ಕಾರ ಅವಕಾಶ ನೀಡುತ್ತಿಲ್ಲ ಎಂದು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ನೇತೃತ್ವದ ಪಕ್ಷದ ಉನ್ನತ ನಿಯೋಗ ದೂರಿದೆ.

ಟಿಎಂಸಿಗೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲ. ಲೋಕಸಭಾ ಚುನಾವಣೆ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ನಡೆಯುವ ಪೂರಕ ವಾತಾವರಣ ರಾಜ್ಯದಲ್ಲಿ ಇಲ್ಲ. ಆಯೋಗ ಕೂಡಲೇ ಮಧ್ಯ ಪ್ರವೇಶಿಸಬೇಕು ಎಂದುಮನವಿ ಮಾಡಿದೆ.

ರಾಜ್ಯ ಸರ್ಕಾರದ ಕೈಗೊಂಬೆಗಳಂತೆ ವರ್ತಿಸುತ್ತಿರುವ ಅಧಿಕಾರಿಗಳನ್ನು ತೆಗೆದು ಹಾಕಿ, ಕೇಂದ್ರ ಸಶಸ್ತ್ರ ಪಡೆಗಳನ್ನು ನಿಯೋಜಿಸಬೇಕು ಎಂದು ನಿಯೋಗ ಮನವಿ ಸಲ್ಲಿಸಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹೆಲಿಕಾಪ್ಟರ್‌ಗೆ ಇಳಿಯಲು ಬಿಡದ ಘಟನೆಯನ್ನು ಆಯೋಗದ ಗಮನಕ್ಕೆ ತರಲಾಗಿದೆ ಎಂದು ನಿಯೋಗ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT