ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ

ಮುಷ್ಕರ: ಪೊಲೀಸರ ಮೇಲೆ ಕಲ್ಲು ತೂರಾಟ, ಕಚ್ಚಾ ಬಾಂಬ್‌ ಎಸೆದ ಪ್ರತಿಭಟನಕಾರರು
Last Updated 8 ಜನವರಿ 2020, 20:00 IST
ಅಕ್ಷರ ಗಾತ್ರ

ಕೋಲ್ಕತ್ತ/ತಿರುವನಂತಪುರ/ನವದೆಹಲಿ: ವಿವಿಧ ಕಾರ್ಮಿಕ ಸಂಘಟನೆಗಳು ಬುಧವಾರ ರಾಷ್ಟ್ರದಾದ್ಯಂತ ಕರೆ ನೀಡಿದ್ದ ಮುಷ್ಕರ ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರಕ್ಕೆ ತಿರುಗಿತು.

24 ಗಂಟೆ ಬಂದ್‌ ಆಚರಿಸುವಂತೆ ಒತ್ತಾಯಿಸಿ ಘೋಷಣೆಗಳನ್ನು ಹಾಕಿದ ಪ್ರತಿಭಟನಕಾರರು ಬಸ್‌ಗಳು, ಪೊಲೀಸ್‌ ವಾಹನಗಳು ಮತ್ತು ಸರ್ಕಾರಿ ಆಸ್ತಿಗಳನ್ನು ಧ್ವಂಸಗೊಳಿಸಿದ್ದಾರೆ.

ಮಲ್ದಾ ಜಿಲ್ಲೆಯ ಸುಜಾಪುರ್‌ ಪ್ರದೇಶದಲ್ಲಿ ರಸ್ತೆ ತಡೆ ನಡೆಸಿದ ಪ್ರತಿಭಟನಕಾರರು, ಪೊಲೀಸ್‌ ವಾಹನ ಸೇರಿದಂತೆ ಹಲವು ವಾಹನಗಳಿಗೆ ಬೆಂಕಿ ಹಚ್ಚಿದರು. ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಯತ್ನಿಸಿದಾಗ ಪ್ರತಿಭಟನಕಾರರು ಕಲ್ಲುಗಳು ಮತ್ತು ಕಚ್ಚಾ ಬಾಂಬ್‌ಗಳನ್ನು ಎಸೆದರು. ಆಗ ಪೊಲೀಸರು ಅಶ್ರುವಾಯು ಸಿಡಿಸಿದರು ಮತ್ತು ರಬ್ಬರ್‌ ಬುಲೆಟ್‌ಗಳನ್ನು ಹಾರಿಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಹಲವೆಡೆ ರೈಲು ಹಳಿಗಳ ಮೇಲೆ ಧರಣಿ ಮತ್ತು ರಸ್ತೆ ತಡೆ ನಡೆಸಿದ್ದರಿಂದ ಸಾರಿಗೆ ಸಂಚಾರ ಅಸ್ತವ್ಯಸ್ತಗೊಂಡಿತು. ಇದರಿಂದ, ಜನಸಾಮಾನ್ಯರು ಪರದಾಡಬೇಕಾಯಿತು. ಪೂರ್ವ ಮಿಡ್ನಾಪುರ ಮತ್ತು ಕೂಚ್‌ ಬಿಹಾರ್‌ ಜಿಲ್ಲೆಯಲ್ಲಿ ಬಸ್‌ಗಳ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.

ಕೋಲ್ಕತ್ತದಲ್ಲಿ ರಸ್ತೆ ತಡೆ ನಡೆಸಲು ಯತ್ನಿಸಿದ 55 ಮಂದಿಯನ್ನು ಬಂಧಿಸಲಾಗಿದೆ. ತೃಣಮೂಲ ಕಾಂಗ್ರೆಸ್‌ ಕಾರ್ಯಕರ್ತರು ಕೆಲವು ಸ್ಥಳಗಳಲ್ಲಿ ಮುಷ್ಕರ ವಿರೋಧಿಸಿ ರ‍್ಯಾಲಿ ನಡೆಸಿದರು.

ರೈಲು ಮತ್ತು ರಸ್ತೆ ತಡೆಗೆ ಯತ್ನಿಸಿದ ಸಿಪಿಎಂ ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಘರ್ಷಣೆ ನಡೆಯಿತು. ಪ್ರತಿಭಟನಕಾರರು
ಪೊಲೀಸ್‌ ವಾಹನವನ್ನು ಜಖಂಗೊಳಿಸಿದರು. ಸಿಪಿಎಂ ಶಾಸಕಾಂಗ ಪಕ್ಷದ ನಾಯಕ ಸುಜನ್‌ ಚಕ್ರವರ್ತಿಯನ್ನು ಪೊಲೀಸರು ಬಂಧಿಸಿದರು.

ಬ್ಯಾಂಕ್‌ ವಹಿವಾಟು ಅಸ್ತವ್ಯಸ್ತ: ಪಶ್ಚಿಮ ಬಂಗಾಳದಲ್ಲಿ ನೌಕರರು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದರಿಂದ ಬಹುತೇಕ ಬ್ಯಾಂಕ್‌ ಶಾಖೆಗಳು ಮತ್ತು ಎಟಿಎಂಗಳು ಮುಚ್ಚಿದ್ದವು. ಗುತ್ತಿಗೆ ನೌಕರರು ಸಹ ಮುಷ್ಕರದಲ್ಲಿ ಪಾಲ್ಗೊಂಡಿದ್ದರು.

ಇದರಿಂದಾಗಿ, 21 ಸಾವಿರ ಕೋಟಿ ಮೊತ್ತದ 28 ಲಕ್ಷ ಚೆಕ್‌ಗಳು ನಗದೀಕರಣವಾಗಲಿಲ್ಲ ಎಂದು ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘಟನೆ (ಎಐಬಿಇಎ) ತಿಳಿಸಿದೆ. ಆರ್‌ಬಿಐಸಿಬ್ಬಂದಿ ಪಾಲ್ಗೊಂಡಿದ್ದರು.

ಮುಂಬೈನಲ್ಲಿ ಸಹಜ ಸ್ಥಿತಿ

ಮುಷ್ಕರಕ್ಕೆ ಮಹಾರಾಷ್ಟ್ರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಸಾರಿಗೆ ಮತ್ತು ಬ್ಯಾಂಕಿಂಗ್‌ ಸೇವೆಗಳ ಮೇಲೆ ಯಾವುದೇ ರೀತಿ ಪರಿಣಾಮ ಬೀರಲಿಲ್ಲ. ಮುಂಬೈನ ಜೀವನಾಡಿ ಎಂದೇ ಖ್ಯಾತಿ ಪಡೆದಿರುವ ಉಪನಗರ ರೈಲುಗಳ ಸಂಚಾರದಲ್ಲಿಯೂ ಯಾವುದೇ ವ್ಯತ್ಯಯವಾಗಲಿಲ್ಲ. ಪುಣೆ, ಸಾಂಗ್ಲಿ ಸೇರಿದಂತೆ ಹಲವು ನಗರಗಳಲ್ಲಿ ಕಾರ್ಮಿಕರು ಮತ್ತು ರೈತರು ಪ್ರತಿಭಟನಾ ರ‍್ಯಾಲಿ ನಡೆಸಿದರು.

ದೆಹಲಿಯಲ್ಲಿ ಸುಗಮ ಸಂಚಾರ: ದೇಶದ ರಾಜಧಾನಿಯಲ್ಲಿ ಮುಷ್ಕರದ ಬಿಸಿ ತಟ್ಟಲಿಲ್ಲ. ಮೆಟ್ರೊ ಮತ್ತು ದೆಹಲಿ ಸಾರಿಗೆ ನಿಗಮ (ಡಿಟಿಸಿ) ಸೇವೆಗಳು ಎಂದಿನಂತೆ ಸಂಚರಿಸಿದವು. ಮಾಯಾಪುರಿ ಮತ್ತು ವಝಿರಾಬಾದ್‌ ಕೈಗಾರಿಕೆ ಪ್ರದೇಶಗಳಲ್ಲಿ ಕಾರ್ಮಿಕರು ರ‍್ಯಾಲಿ ನಡೆಸಿದರು.

800 ಕಾರ್ಮಿಕರ ಬಂಧನ

ಕೊಯಮತ್ತೂರು: ಮುಷ್ಕರದ ಅಂಗವಾಗಿ ಪ್ರತಿಭಟನಾ ರ‍್ಯಾಲಿ ನಡೆಸಲು ಯತ್ನಿಸಿದ ಎಡಪಕ್ಷಗಳ ಇಬ್ಬರು ಸಂಸದರು ಸೇರಿದಂತೆ 800 ಕಾರ್ಮಿಕರನ್ನು ಇಲ್ಲಿ ಬಂಧಿಸಲಾಯಿತು.ಸಿಪಿಐ ಸಂಸದ ಕೆ. ಸುಬ್ಬರ‍್ಯಾನ್‌ ಮತ್ತು ಸಿಪಿಎಂ ಸಂಸದ ಪಿ.ಆರ್‌. ನಟರಾಜನ್‌ ಬಂಧನಕ್ಕೆ ಒಳಗಾದವರು.

***

ಪಶ್ಚಿಮ ಬಂಗಾಳದಲ್ಲಿ ರಾಜಕೀಯ ಅಸ್ತಿತ್ವ ಇಲ್ಲದವರು ಕೀಳುಮಟ್ಟದ ರಾಜಕೀಯ ನಡೆಸಿ ರಾಜ್ಯದ ಆರ್ಥಿಕತೆಗೆ ಧಕ್ಕೆ ತರುವ ಯತ್ನ ಮಾಡುತ್ತಿದ್ದಾರೆ.
-ಮಮತಾ ಬ್ಯಾನರ್ಜಿ,ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT