ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿಯಲ್ಲಿ ಪರಿಸ್ಥಿತಿ ವಿಷಮ; ಪಾಲಿಸಿ ಸಂಯಮ: ಅಮೆರಿಕ ಕಿವಿಮಾತು

ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಪಾಕಿಸ್ತಾನಕ್ಕೆ ತಾಕೀತು
Last Updated 28 ಫೆಬ್ರುವರಿ 2019, 1:40 IST
ಅಕ್ಷರ ಗಾತ್ರ

ವಾಷಿಂಗ್ಟನ್‌:ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಪ್ರಾದೇಶಿಕ ಸ್ಥಿರತೆ ಕಾಪಾಡಬೇಕು. ಯುದ್ಧಕ್ಕೆ ಇಳಿಯುವ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಭಾರತ ಮತ್ತು ಪಾಕಿಸ್ತಾನಕ್ಕೆ ಅಮೆರಿಕ ಕಿವಿಮಾತು ಹೇಳಿದೆ. ಎರಡೂ ದೇಶಗಳುಸಂಯಮ ಪಾಲಿಸುವಂತೆ ರಷ್ಯಾ ಕೂಡ ಕರೆ ನೀಡಿದೆ.

ಪಾಕಿಸ್ತಾನದ ನೆಲದಿಂದ ಕಾರ್ಯನಿರ್ವಹಿಸುತ್ತಿರುವ ಉಗ್ರ ಸಂಘಟನೆಗಳ ವಿರುದ್ಧ ಪರಿಣಾಮಕಾರಿ ಕ್ರಮ ಜರುಗಿಸುವಂತೆಯೂ ಅಮೆರಿಕ ಬುಧವಾರ ಆ ದೇಶಕ್ಕೆ ಎಚ್ಚರಿಕೆ ನೀಡಿದೆ.

ಈ ಸಂಬಂಧ ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೆಹಮೂದ್ ಖುರೇಷಿ ಮತ್ತು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಜತೆ ಪ್ರತ್ಯೇಕವಾಗಿ ದೂರವಾಣಿಯಲ್ಲಿ ಮಾತನಾಡಿರುವುದಾಗಿ ಅಮೆರಿಕ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ತಿಳಿಸಿದ್ದಾರೆ.

ಭಾರತ–ಪಾಕಿಸ್ತಾನ ಮಧ್ಯೆ ವಿಷಮಿಸುತ್ತಿರುವ ಸ್ಥಿತಿಯನ್ನು ನೇರವಾಗಿ ಮಾತುಕತೆ ಮೂಲಕ ಶಮನಗೊಳಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಸೇನಾ ಕಾರ್ಯಾಚರಣೆಗೆ ಮುಂದಾಗುವುದು ಬೇಡ ಎಂದು ಸಲಹೆ ಮಾಡಿರುವುದಾಗಿ ಅವರು ಹೇಳಿದ್ದಾರೆ.

ಉಗ್ರ ಸಂಘಟನೆಗಳನ್ನು ಯಾವುದೇ ಮುಲಾಜಿಲ್ಲದೆ ನಿರ್ದಯವಾಗಿ ಮಟ್ಟ ಹಾಕುವಂತೆ ಪಾಕಿಸ್ತಾನಕ್ಕೆ ತಾಕೀತು ಮಾಡಿರುವುದಾಗಿ ಪಾಂಪಿಯೊ ಹೇಳಿದ್ದಾರೆ.

ಭಾರತ ಮತ್ತು ಪಾಕಿಸ್ತಾನ ಮಧ್ಯೆ ಪರಿಸ್ಥಿತಿ ವಿಷಮಿಸಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕಳೆದ ವಾರ ಆತಂಕ ವ್ಯಕ್ತಪಡಿಸಿದ್ದರು.

ಸುಷ್ಮಾ ಬಂದರೆ, ನಾವು ಬರಲ್ಲ: ಪಾಕ್‌
ಇಸ್ಲಾಮಾಬಾದ್‌/ದುಬೈ (ಪಿಟಿಐ): ಭಾರತದ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್‌ ಗೌರವ ಅತಿಥಿಯಾಗಿ ಭಾಗವಹಿಸಿದರೆ ಇಸ್ಲಾಮಿಕ್‌ ರಾಷ್ಟ್ರಗಳ ಸಹಕಾರ ಸಂಘಟನೆ (ಒಐಸಿ) ಶೃಂಗಸಭೆಯನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಬೆದರಿಕೆ ಹಾಕಿದೆ.

ಮಾರ್ಚ್‌ 1 ಮತ್ತು 2ರಂದು ಅರಬ್‌ಸಂಯುಕ್ತ ಸಂಸ್ಥಾನದ ಅಬುಧಾಬಿಯಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಪಾಲ್ಗೊಳ್ಳುವಂತೆ ಸುಷ್ಮಾ ಅವರಿಗೆ ಆಹ್ವಾನ ನೀಡಲಾಗಿದೆ.

ಇದೇ ಮೊದಲ ಬಾರಿಗೆ ಒಐಸಿ ಶೃಂಗಸಭೆಗೆ ಭಾರತದ ವಿದೇಶಾಂಗ ಸಚಿವರನ್ನು ಆಹ್ವಾನಿಸಲಾಗಿದೆ.

ಶೃಂಗಸಭೆ ಅಥವಾ ಒಐಸಿ ಬಗ್ಗೆ ನಮ್ಮ ಅಭ್ಯಂತರ ಇಲ್ಲ. ನಮ್ಮ ಅಭ್ಯಂತರ ಇರುವುದು ಸುಷ್ಮಾ ಸ್ವರಾಜ್‌ ಭಾಗವಹಿಸುತ್ತಿರುವ ಬಗ್ಗೆ ಎಂದು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮೆಹಮೂದ್‌ ಖುರೇಷಿ ಹೆಳಿದ್ದಾರೆ.

ಒಂದು ವೇಳೆ ಸುಷ್ಮಾ ಭಾಗವಹಿಸಿದರೆ ಸಭೆಯಲ್ಲಿ ಪಾಕಿಸ್ತಾನ ಭಾಗವಹಿಸುವುದಿಲ್ಲ ಎಂದು ಅವರು ಇಸ್ಲಾಮಿಕ ರಾಷ್ಟ್ರಗಳ ಒಕ್ಕೂಟಕ್ಕೆ ಸ್ಪಷ್ಟವಾಗಿ ಹೇಳಿದ್ದಾರೆ. ಒಐಸಿಯ ಸದಸ್ಯರಾಗಿರುವ 57 ರಾಷ್ಟ್ರಗಳ ಪೈಕಿ 40 ದೇಶಗಳು ಇಸ್ಲಾಮಿಕ್‌ ರಾಷ್ಟ್ರಗಳಾಗಿವೆ.

ಶಾಲೆ ಬಂದ್‌, ಜನರು ವಲಸೆ
ಭಾರತ ಹಾಗೂ ಪಾಕಿಸ್ತಾನಗಳ ನಡುವಿನ ಉದ್ವಿಗ್ನ ಸ್ಥಿತಿಯಿಂದಾಗಿ ಗಡಿನಿಯಂತ್ರಣ ರೇಖೆಯ (ಎಲ್ಒಸಿ)ರಾಜೌರಿ ಹಾಗೂ ಪೂಂಛ್ ಜಿಲ್ಲೆಗಳ ಐದು ಕಿಲೋಮೀಟರ್ ವ್ಯಾಪ್ತಿಯ ಎಲ್ಲ ಶಾಲಾಕಾಲೇಜುಗಳನ್ನು ಮುಚ್ಚಲು ಅಧಿಕಾರಿಗಳು ಸೂಚನೆ ನೀಡಿದ್ದಾರೆ.

ಪಾಕಿಸ್ತಾನಕ್ಕೆ ಹೊಂದಿಕೊಂಡಿರುವ ಗಡಿ ಭಾಗದಲ್ಲಿರುವ ಎಲ್ಲ ಗ್ರಾಮಗಳ ಜನರಿಗೆ ಮನೆ ಬಿಟ್ಟು ಹೊರಬರದಂತೆ ಸೂಚನೆ ನೀಡಲಾಗಿದೆ. ಗಡಿ ಭಾಗದ ಜನರಲ್ಲಿ ಆತಂಕ ಮನೆಮಾಡಿದ್ದು, ಅವರು ತಮ್ಮ ಮನೆಗಳನ್ನು ತೊರೆದು, ಸುರಕ್ಷಿತ ಸ್ಥಳಗಳಿಗೆ ತೆರಳುತ್ತಿದ್ದಾರೆ ಎಂದು ವರದಿಯಾಗಿದೆ.

***
ನಮಗೆ ಯುದ್ಧ ಬೇಡ. ಎರಡೂ ದೇಶಗಳ ನಡುವೆ ಪರಿಹಾರ ಆಗದೆ ಉಳಿದಿರುವ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಭಾರತವು ಮಾತುಕತೆಗೆ ಬರಬಹುದು ಎಂಬ ವಿಶ್ವಾಸ ಇದೆ.
-ಶಾ ಮೆಹಮೂದ್‌ ಖುರೇಷಿ,ಪಾಕಿಸ್ತಾನದ ವಿದೇಶಾಂಗ ಸಚಿವ

***
ಪರಿಹಾರ ಕಾಣದೆ ಉಳಿದಿರುವ ಸಮಸ್ಯೆಗಳಿಗೆ ಯುದ್ಧದಿಂದ ಪರಿಹಾರ ಸಿಗದು ಎಂಬುದಕ್ಕೆ ಇತಿಹಾಸವೇ ಸಾಕ್ಷ್ಯ. ಯುದ್ಧದ ಮಾತನ್ನು ಎರಡೂ ದೇಶಗಳು ಕೈಬಿಡುವುದು ಈ ಪ್ರದೇಶದ ಹಿತಾಸಕ್ತಿಯಿಂದ ಒಳ್ಳೆಯದು. ಎರಡೂ ದೇಶಗಳ ಜನರು ಮತ್ತು ವಿಶೇಷವಾಗಿ ಜಮ್ಮು ಮತ್ತು ಕಾಶ್ಮೀರದ ಜನರ ಒಳಿತಿಗಾಗಿ ಹಿಂಸೆಯನ್ನು ಕೈಬಿಡಿ
-ಫಾರೂಕ್‌ ಅಬ್ದುಲ್ಲಾ,ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ

***
ನಮ್ಮ ವಾಯುಪಡೆಯ ಧೀರ ಪೈಲಟ್‌ ಒಬ್ಬರು ನಾಪತ್ತೆಯಾಗಿದ್ದಾರೆಂದು ತಿಳಿದು ಬೇಸರವಾಗಿದೆ. ಅವರು ಸುರಕ್ಷಿತವಾಗಿ ಬೇಗನೆ ಹಿಂದಿರುಗಲಿ ಎಂದು ಹಾರೈಸುವೆ. ಈ ಸಂಕಷ್ಟದ ಸಂದರ್ಭದಲ್ಲಿ ಸಶಸ್ತ್ರ ಪಡೆಗಳ ಜತೆಗೆ ನಾವಿದ್ದೇವೆ.
-ರಾಹುಲ್‌ ಗಾಂಧಿ,ಕಾಂಗ್ರೆಸ್‌ ಅಧ್ಯಕ್ಷ

ಲಾಹೋರ್‌ನಲ್ಲಿ ಬುಧವಾರ ಪಾಕಿಸ್ತಾನ ಜಮಾತ್‌ ಎ ಇಸ್ಲಾಮಿ ಪಕ್ಷದ ಇಸ್ಲಾಮಿ ಜಮಿಯಾತ್‌ ತಾಲಬಾ ಘಟಕದ ಕಾರ್ಯಕರ್ತರು ಭಾರತದ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸಿ ಘೋಷಣೆಗಳನ್ನು ಹಾಕಿದರು -ಎಎಫ್‌ಪಿ ಚಿತ್ರ
ಲಾಹೋರ್‌ನಲ್ಲಿ ಬುಧವಾರ ಪಾಕಿಸ್ತಾನ ಜಮಾತ್‌ ಎ ಇಸ್ಲಾಮಿ ಪಕ್ಷದ ಇಸ್ಲಾಮಿ ಜಮಿಯಾತ್‌ ತಾಲಬಾ ಘಟಕದ ಕಾರ್ಯಕರ್ತರು ಭಾರತದ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸಿ ಘೋಷಣೆಗಳನ್ನು ಹಾಕಿದರು -ಎಎಫ್‌ಪಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT