ಶುಕ್ರವಾರ, ಫೆಬ್ರವರಿ 28, 2020
19 °C

ನೀರಿಗಾಗಿ ನಲ್ಲಿ ತಿರುವಿದರೆ ಸುರಿಯಿತು ಮದ್ಯ! ಕೇರಳದಲ್ಲೊಂದು ಕೌತುಕದ ಪ್ರಸಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತ್ರಿಶೂರ್‌: ನೀರಿಗಾಗಿ ನಲ್ಲಿ ತಿರುವಿದಾಗ ಮದ್ಯವೇ ಸುರಿದರೆ ಹೇಗಿರಬಹುದು. ಬಹುಶಃ ಮದ್ಯಪ್ರಿಯರಿಗೆ ಇದು ಒಳ್ಳೆ ಸುದ್ದಿ. ಆದರೆ, ಮಕ್ಕಳು ಮರಿ, ಮಹಿಳೆಯರಿರುವ ಮನೆಗಳಲ್ಲಿ ಹೀಗಾದರೆ ನಿಜಕ್ಕೂ ಫಜೀತಿ. 

ಕೇರಳದ ತ್ರಿಶೂರಿನ ಚಲಕ್ಕುಡಿ ಎಂಬಲ್ಲಿ ಇಂಥದ್ದೇ ಸನ್ನಿವೇಶ ಎದುರಾಗಿದೆ. ಇಲ್ಲಿನ ಸೋಲೋಮನ್‌ ಅಪಾರ್ಟ್‌ಮೆಂಟ್‌ನ 18 ಮನೆಗಳಲ್ಲಿ ಕಳೆದ ಸೋಮವಾರದಿಂದ ನಲ್ಲಿ ತಿರುವಿದರೆ ಸಾಕು ಮದ್ಯ ಮಿಶ್ರಿತ ನೀರು ಬರುತ್ತಿದೆ. ಇದರಿಂದ ಇಡೀ 18 ಕುಟುಂಬಗಳೂ ಕಂಗಾಲಾಗಿ ಹೋಗಿವೆ. 

ನೀರಿನಲ್ಲಿ ಮದ್ಯ ಮಿಶ್ರಣವಾಗಿರುವುದು ಹೇಗೆ ಮತ್ತು ಏಕೆ ಎಂಬ ಪ್ರಶ್ನೆಗೂ ಉತ್ತರ ಸಿಕ್ಕಿದೆ. ಚಲಕ್ಕುಡಿಯಲ್ಲಿದ್ದ ಮದ್ಯದಂಗಡಿಯೊಂದರ ಮೇಲೆ ಆರು ವರ್ಷಗಳ ಹಿಂದೆ ದಾಳಿ ಮಾಡಿದ್ದ ಅಬಕಾರಿ ಇಲಾಖೆ ಅಧಿಕಾರಿಗಳು 2200 ಲೀಟರ್‌ ಪ್ರಮಾಣದ ವಿವಿಧ ಬ್ರ್ಯಾಂಡ್‌ನ, ವಿವಿಧ ಬಗೆಯ ಮದ್ಯವನ್ನು ಜಪ್ತಿ ಮಾಡಿದ್ದರು. ಕೋರ್ಟ್‌ ಆದೇಶದಂತೆ ಅಷ್ಟೂ ಮದ್ಯವನ್ನು ಕಳೆದ ಭಾನುವಾರ ಅಧಿಕಾರಿಗಳು ಬಾರ್‌ ಪಕ್ಕದಲ್ಲೇ ಗುಂಡಿ ತೆಗೆದು, ಅದರಲ್ಲಿ ಸುರಿದಿದ್ದಾರೆ. 

ಹೀಗೇ ಗುಂಡಿಯಲ್ಲಿ ಸುರಿದ ನೀರು ಭೂಮಿಗೆ ಇಂಗಿ, ಪಕ್ಕದಲ್ಲೇ ಇದ್ದ ತೆರೆದ ಬಾವಿಯ ನೀರಿಗೆ ಸೇರಿದೆ. ಹೀಗಾಗಿ ಈ ಬಾವಿಯ ನೀರನ್ನು ಬಳಸುವ 18 ಕುಟುಂಬಗಳ ಮನೆಯಲ್ಲಿ ನಲ್ಲಿ ತಿರುವಿದರೆ ಮದ್ಯ ಮಿಶ್ರಿತ ನೀರು ಪೂರೈಕೆಯಾಗುತ್ತಿದೆ. 

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿರುವ ಅಬಕಾರಿ ಅಧಿಕಾರಿಗಳು ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ 5000 ಲೀಟರ್‌ನಷ್ಟು ಶುದ್ಧ ನೀರಿನ ತಾತ್ಕಾಲಿಕಾಗಿ ವ್ಯವಸ್ಥೆ ಮಾಡಿದ್ದಾರೆ. ಬಾವಿಯ ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ. ಈ ಕುರಿತು ನಾಗರಿಕರು ಯಾವುದೇ ದೂರು ನೀಡಿಲ್ಲ ಎಂದು ಚಲಕ್ಕುಡಿ ಪೊಲೀಸರು ತಿಳಿಸಿದ್ದಾರೆ. 

***

ಜಪ್ತಿ ಮಾಡಲಾದ 450 ಬಾಟೆಲ್‌ನಷ್ಟು ವಿವಿಧ ಮಾದರಿಯ ಮದ್ಯವನ್ನು ಕೋರ್ಟ್‌ನ ಸೂಚನೆಯಂತೆ ಭಾನುವಾರ ನಾಶ ಮಾಡಿದ್ದೆವು. ಆದರೆ, ನಾಶ ಮಾಡಲಾದ ಮದ್ಯ ಈ ರೀತಿಯ ತಾಪತ್ರಯ ಸೃಷ್ಟಿ ಮಾಡುತ್ತದೆ ಎಂದು ಗೊತ್ತಿರಲಿಲ್ಲ. ‌
– ಅಬಕಾರಿ ಅಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು