ಭಾನುವಾರ, ಮೇ 9, 2021
25 °C
ಕರ್ನಾಟಕದ ಮಾದರಿಯಲ್ಲಿ ಮಧ್ಯಪ್ರದೇಶ ಸರ್ಕಾರ ಉರುಳುವ ಸಾಧ್ಯತೆ

ಕಮಲನಾಥ್‌ ಸರ್ಕಾರಕ್ಕೆ ಜ್ಯೋತಿರಾದಿತ್ಯ ಕಂಟಕವೇ?

ರಾಕೇಶ್‌ ದೀಕ್ಷಿತ್‌ Updated:

ಅಕ್ಷರ ಗಾತ್ರ : | |

ಭೋಪಾಲ್‌: ಕಮಲನಾಥ್‌ ನೇತೃತ್ವದ ಮಧ್ಯಪ್ರದೇಶ ಸರ್ಕಾರದ ಉಳಿವಿನ ಬಗ್ಗೆ ಪ್ರಶ್ನೆಗಳು ಎದ್ದಿವೆ. ಕಾಂಗ್ರೆಸ್‌ನ ರಾಜ್ಯ ಘಟಕದ ಅಧ್ಯಕ್ಷನನ್ನಾಗಿ ಮಾಡದಿದ್ದರೆ, ಪ್ರಭಾವಿ ಮುಖಂಡ ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿ ಸೇರಲಿದ್ದಾರೆ ಎಂಬ ವದಂತಿಗಳು ಇದಕ್ಕೆ ಕಾರಣ.

ಕಾಂಗ್ರೆಸ್‌ ಪಕ್ಷವು ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ನಿಭಾಯಿಸದಿದ್ದರೆ ಕರ್ನಾಟಕದ ಕಾಂಗ್ರೆಸ್‌–ಜೆಡಿಎಸ್‌ ಮೈತ್ರಿ ಸರ್ಕಾರಕ್ಕೆ ಆದ ಗತಿಯೇ ಮಧ್ಯಪ್ರದೇಶ ಸರ್ಕಾರಕ್ಕೂ ಆಗಬಹುದು. ಸರ್ಕಾರ ಕೆಡವಲು ಜ್ಯೋತಿರಾದಿತ್ಯ ಅವರಿಗೆ ಬೇಕಿರುವುದು 12 ಶಾಸಕರ ಬೆಂಬಲ ಮಾತ್ರ. 230 ಸದಸ್ಯ ಬಲದ ವಿಧಾನಸಭೆಯಲ್ಲಿ ಕಾಂಗ್ರೆಸ್‌ ಹೊಂದಿರುವುದು 115 ಶಾಸಕರನ್ನು ಮಾತ್ರ. ಬಿಜೆಪಿ 109 ಶಾಸಕರನ್ನು ಹೊಂದಿದೆ. 

ಕರ್ನಾಟಕದ ಬಳಿಕ ಮಧ್ಯಪ್ರದೇಶ ಕಾಂಗ್ರೆಸ್‌ನ ಕೈತಪ್ಪಲಿದೆ. ಜ್ಯೋತಿರಾದಿತ್ಯ ಅವರು ಬಂಡಾಯ ಏಳಲಿದ್ದಾರೆ ಎಂಬ ದಟ್ಟ ವದಂತಿಯ ನಡುವೆಯೇ ಕಮಲನಾಥ್‌ ಅವರು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಶುಕ್ರವಾರ ಭೇಟಿಯಾಗಿದ್ದಾರೆ. ರಾಜ್ಯ ಕಾಂಗ್ರೆಸ್‌ ಘಟಕದ ಅಧ್ಯಕ್ಷ ಯಾರಾಗಬೇಕು ಎಂಬ ಬಗ್ಗೆ ಈ ಇಬ್ಬರು ಚರ್ಚೆ ಮಾಡಿದ್ದಾರೆ. ಆದರೆ, ಈ ಹುದ್ದೆಗೆ ಯಾರು ಏರಲಿದ್ದಾರೆ ಎಂಬುದು ಮಾತ್ರ ಈಗಲೂ ಗುಟ್ಟಾಗಿಯೇ ಉಳಿದಿದೆ.

ಜ್ಯೋತಿರಾದಿತ್ಯ ಅವರು ಪಕ್ಷದಲ್ಲಿಯೇ ಉಳಿಯುವ ವಿಶ್ವಾಸ ಇದೆ. ಅವರಿಗೆ ಯಾವ ಸಿಟ್ಟೂ ಇಲ್ಲ. ಅವರು ಪಕ್ಷದಲ್ಲಿಯೇ ಇದ್ದಾರೆ ಎಂದು ಸೋನಿಯಾ ಅವರನ್ನು ಭೇಟಿಯಾದ ಬಳಿಕ ಕಮಲನಾಥ್‌ ಹೇಳಿದ್ದಾರೆ. 

ಪಕ್ಷ ಬಿಡುವ ವದಂತಿಗಳನ್ನು ಜ್ಯೋತಿರಾದಿತ್ಯ ಅವರು ಈವರೆಗೆ ಅಲ್ಲಗಳೆದಿಲ್ಲ. ಈ ಮಧ್ಯೆ, ಪಕ್ಷದ  ಹುದ್ದೆಗಳಿಗೆ ರಾಜೀನಾಮೆ ನೀಡುವುದಾಗಿ ಗ್ವಾಲಿಯರ್‌–ಚಂಬಲ್‌ ಪ್ರದೇಶದಲ್ಲಿರುವ ಅವರ ಬೆಂಬಲಿಗರು ಬೆದರಿಕೆ ಒಡ್ಡಿದ್ದಾರೆ. 

ಜ್ಯೋತಿರಾದಿತ್ಯ ಅವರನ್ನು ಅಧ್ಯಕ್ಷರನ್ನಾಗಿ ಮಾಡದಿದ್ದರೆ ಹುದ್ದೆಗೆ ರಾಜೀನಾಮೆ ನೀಡುವುದಾಗಿ ದಾತಿಯಾ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್‌ ದಂಗಿ ಹೇಳಿದ್ದಾರೆ. ಮೊರೆನಾ ಜಿಲ್ಲಾ ಘಟಕದ ಅಧ್ಯಕ್ಷ ರಾಕೇಶ್‌ ಮಾವೈ ಅವರೂ ಎರಡು ದಿನ ಹಿಂದೆ ಇದೇ ರೀತಿಯ ಬೆದರಿಕೆ ಒಡ್ಡಿದ್ದರು. 

ದಂಗಿ ಅವರು ಸೋನಿಯಾ ಅವರಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಮಧ್ಯಪ್ರದೇಶದಲ್ಲಿ ಮರಳಿ ಅಧಿಕಾರಕ್ಕೆ ತರುವಲ್ಲಿ ಜ್ಯೋತಿರಾದಿತ್ಯ ಅವರ ಪಾತ್ರ ಮಹತ್ವದ್ದಾಗಿತ್ತು. ಆದರೆ, ಅವರನ್ನು ರಾಜ್ಯದ ಹೊರಗೇ ಇರುವಂತೆ ಪಿತೂರಿ ಮಾಡಲಾಗಿದೆ ಎಂದು ಪತ್ರದಲ್ಲಿ ಅವರು ಹೇಳಿದ್ದಾರೆ. 

ಜ್ಯೋತಿರಾದಿತ್ಯ ಅವರು ಮಧ್ಯಪ್ರದೇಶ ರಾಜಕಾರಣದಲ್ಲಿ ಸಕ್ರಿಯರಾಗಿರಬೇಕು ಎಂದು ಅವರಿಗೆ ನಿಷ್ಠವಾಗಿರುವ ಒಂದು ಗುಂಪು ಬಲವಾಗಿ ಪ್ರತಿಪಾದಿಸುತ್ತಿದೆ. 

‘ಅವರಂತಹ ಯುವ, ನಿಷ್ಠಾವಂತ ಮತ್ತು ಜನಪ್ರಿಯ ನಾಯಕ ಬೇಕು ಎಂದು ಮಹಾರಾಷ್ಟ್ರದ ಕಾಂಗ್ರೆಸ್‌ ಮುಖಂಡರು ಬಯಸುತ್ತಿರುವುದು ಸಹಜವೇ ಆಗಿದೆ. ಆದರೆ, ಅವರಿಗೆ ಮಧ್ಯಪ್ರದೇಶದಲ್ಲಿ ಮಹತ್ವದ ಜವಾಬ್ದಾರಿ ವಹಿಸದಿದ್ದರೆ ನಾವು ತೃಪ್ತರಾಗುವುದಿಲ್ಲ’ ಎಂದು ಮಧ್ಯಪ್ರದೇಶದ ಸಚಿವೆ ಇಮಾರತಿ ದೇವಿ ಅವರು ಹೇಳಿದ್ದಾರೆ. 

ಜ್ಯೋತಿರಾದಿತ್ಯ ಅವರನ್ನು ಮಧ್ಯಪ್ರದೇಶದಿಂದ ಹೊರಗೇ ಇಟ್ಟರೆ ಅವರು ಬೇರೆ ಆಯ್ಕೆಗಳನ್ನು ಪರಿಶೀಲಿಸಬೇಕಾಗಬಹುದು ಎಂದೂ ಕೆಲವು ಮುಖಂಡರು ಹೇಳಿದ್ದಾರೆ. 

ಕಳೆದ ಡಿಸೆಂಬರ್‌ನಲ್ಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಜ್ಯೋತಿರಾದಿತ್ಯ ಅವರನ್ನೇ ಮುಖ್ಯಮಂತ್ರಿ ಮಾಡಲಾಗುವುದು ಎಂಬ ನಿರೀಕ್ಷೆ ಆಗ ಇತ್ತು. ಆದರೆ, ಅನುಭವಿ ಕಮಲನಾಥ್‌ ಅವರನ್ನು ಈ ಹುದ್ದೆಗೆ ಪಕ್ಷವು ಆಯ್ಕೆ ಮಾಡಿತ್ತು. ಲೋಕಸಭೆ ಚುನಾವಣೆ ಇದ್ದ ಕಾರಣ ಕಮಲನಾಥ್‌ ಅವರನ್ನು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮುಂದುವರಿಸಲಾಗಿತ್ತು. ಆದರೆ, ಚುನಾವಣೆಯಲ್ಲಿ ಕಮಲನಾಥ್‌ ಮಗ ನಕುಲ್‌ನಾಥ್‌ ಬಿಟ್ಟರೆ ಬೇರೆ ಯಾರೂ ಗೆದ್ದಿರಲಿಲ್ಲ. ಜ್ಯೋತಿರಾದಿತ್ಯ ಅವರೂ ತಮ್ಮ ಪರಂಪರಾಗತ ಕ್ಷೇತ್ರವಾದ ಗುಣಾದಲ್ಲಿ ಸೋತಿದ್ದರು.  

ಕರ್ನಾಟಕ ಮಾದರಿ

ಕರ್ನಾಟಕ ವಿಧಾನಸಭೆಯ ಒಟ್ಟು ಸ್ಥಾನ 224. ಬಹುಮತದ ಸಂಖ್ಯೆ 113. ಕಾಂಗ್ರೆಸ್‌, ಜೆಡಿಎಸ್‌, ಬಿಎಸ್‌ಪಿ ಮತ್ತು ಇಬ್ಬರು ಪಕ್ಷೇತರರು ಸೇರಿ 119 ಶಾಸಕರ ಸಂಖ್ಯೆಯ ಮೈತ್ರಿ ಸರ್ಕಾರ ರಚಿಸಲಾಗಿತ್ತು. ಇದರಲ್ಲಿ ಎರಡು ಸ್ಥಾನಗಳು ತೆರವಾಗಿತ್ತು. ಬಿಜೆಪಿ 104 ಸದಸ್ಯರ ಬಲ ಹೊಂದಿತ್ತು. ಮೈತ್ರಿ ಸರ್ಕಾರದ 17 ಶಾಸಕರ ರಾಜೀನಾಮೆ ಕೊಡಿಸಲಾಯಿತು. ಇದರಿಂದ ಸದಸ್ಯರ ಸಂಖ್ಯೆ 205ಕ್ಕೆ ಕುಸಿಯಿತು. ಸರಳ ಬಹುತಮದ ಸಂಖ್ಯೆ 103ಕ್ಕೆ ಕುಸಿಯಿತು. ಹೀಗಾಗಿ ಸರ್ಕಾರ ರಚಿಸಲು ಬಿಜೆಪಿಗೆ ಸಾಧ್ಯವಾಯಿತು. ಇದೇ ಮಾದರಿಯನ್ನು ಮಧ್ಯಪ್ರದೇಶದಲ್ಲೂ ಅನುಸರಿಸುವ ಸಾಧ್ಯತೆ ಇದೆ.

ಮನವೊಲಿಕೆ ಯತ್ನ

ಯಾವುದೇ ಪ್ರಮುಖ ಹುದ್ದೆ ಇಲ್ಲದ ಜ್ಯೋತಿರಾದಿತ್ಯ ಅವರ ಮನವೊಲಿಸಲು ಕಾಂಗ್ರೆಸ್ ಯತ್ನ ನಡೆಸಿದೆ. ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅವರನ್ನು ಉತ್ತರ ಪ್ರದೇಶದ ಉಸ್ತುವಾರಿ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿತ್ತು. ಈಗ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಆದರೆ, ಪ್ರದೇಶ ಕಾಂಗ್ರೆಸ್‌ ಸಮಿತಿಯ ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಅವರು ಪಟ್ಟು ಹಿಡಿದಿದ್ದಾರೆ. 

ಬಿಜೆಪಿ ಜತೆ ಸಂಪರ್ಕ

ಜ್ಯೋತಿರಾದಿತ್ಯ ಅವರು ಬಿಜೆಪಿ ಮುಖಂಡರ ಜತೆ ಸಂಪರ್ಕದಲ್ಲಿದ್ದಾರೆ ಎಂಬ ವರದಿಗಳಿವೆ. ಜಮ್ಮು–ಕಾಶ್ಮೀರದ ವಿಶೇಷಾಧಿಕಾರ ರದ್ದತಿಯನ್ನು ಅವರು ಬೆಂಬಲಿಸಿದ್ದರು. ಇದು ಬಿಜೆಪಿ ಮುಖಂಡರಲ್ಲಿಯೂ ಅಚ್ಚರಿಗೆ ಕಾರಣವಾಗಿತ್ತು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು