ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈದುಂಬಿ ಹರಿಯುತ್ತಿರುವ ತುಂಗಭದ್ರೆ

ಹರಿಹರ: ಹಲವು ಸವಾಲು ಎದುರಿಸಲು ಸಜ್ಜಾಗುತ್ತಿರುವ ಜಿಲ್ಲಾಡಳಿತ
Last Updated 12 ಜೂನ್ 2018, 4:17 IST
ಅಕ್ಷರ ಗಾತ್ರ

ಹರಿಹರ: ಮಧ್ಯ ಕರ್ನಾಟಕದ ಜೀವನದಿ ತುಂಗಭದ್ರೆ, ತನ್ನ ಹರಿವನ್ನು ಹೆಚ್ಚಿಸಿಕೊಂಡು ಮೈದುಂಬಿಕೊಂಡು ಹರಿಯುತ್ತಿದೆ. ಹರಿವು ಹೆಚ್ಚುತ್ತಿರುವ ಪರಿ ನದಿ ತೀರದ ಗ್ರಾಮಗಳಿಗೆ ಅಪಾಯದ ಮುನ್ಸೂಚನೆ ನೀಡುವ ಜತೆಗೆ ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತಕ್ಕೆ ಸವಾಲು ಒಡ್ಡುತ್ತಿದೆ.

ತುಂಗಾ ಹಾಗೂ ಭದ್ರಾ ನದಿಗಳ ಅಚ್ಚುಕಟ್ಟು ಪ್ರದೇಶಗಳಲ್ಲಿ  ಕೆಲ ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳವಾಗುತ್ತಿದೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯ ಗಾಜನೂರಿನ ತುಂಗಾ ಆಣೆಕಟ್ಟು ಭರ್ತಿಯಾಗಿದ್ದು, ಜಲಾಶಯದ 10 ಗೇಟ್‍ಗಳನ್ನು ತೆರೆದು 13 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಬಿಡಲಾಗಿದೆ. ಹಾಗಾಗಿ ಸೋಮವಾರದಿಂದ ನದಿಯಲ್ಲಿ ನೀರಿನ ಪ್ರಮಾಣ ಪ್ರತಿ ಕ್ಷಣ ಹೆಚ್ಚಳವಾಗುತ್ತಿದ್ದು, ಅಪಾಯದ ಸ್ಥಿತಿ ತಲುಪುವ ಹಂತದಲ್ಲಿದೆ.

ಮುಂಗಾರಿನ ಆರಂಭದಲ್ಲಿಯೇ ತುಂಗ ಹಾಗೂ ಭದ್ರಾ ಜಲಾಶಯಗಳು ಭರ್ತಿಯಾದರೆ, ನದಿಯ ನೀರಿನ ಪ್ರಮಾಣ ಇನ್ನೂ ಹೆಚ್ಚಾಗುವ ಸಾಧ್ಯತೆಗಳಿವೆ. ಕೂಡಲೇ, ಜಿಲ್ಲಾಡಳಿತ ಹಾಗೂ ತಾಲ್ಲೂಕು ಆಡಳಿತ ಪ್ರವಾಹಕ್ಕೀಡಾಗಬಹುದಾದ ಗ್ರಾಮ ಗಳ ಪುನರ್ವಸತಿ ಹಾಗೂ ಗಂಜಿ ಕೇಂದ್ರಗಳನ್ನು ಸ್ಥಾಪಿಸುವ ಜತೆಗೆ ಜಾನುವಾರಿಗೆ ಮೇವಿನ ವ್ಯವಸ್ಥೆ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂಬುದು ನದಿ ತೀರದ ಗ್ರಾಮಸ್ಥರ ಆಗ್ರಹ.

ತಾಲ್ಲೂಕಿನ ಸಾರಥಿ-ಚಿಕ್ಕಬಿದರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ನದಿಯಲ್ಲಿ ನೀರು ಹೆಚ್ಚಳದಿಂದ ಪ್ರತಿ ಬಾರಿ ಮುಳುಗಡೆಗೊಂಡು, ಚಿಕ್ಕಬಿದರಿ ಗ್ರಾಮ ಸಂಪರ್ಕ ಕಳೆದುಕೊಳ್ಳುತ್ತದೆ. ಗ್ರಾಮದ ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರ ದೈನಂದಿನ ಕಾರ್ಯಗಳಿಗೆ ತಾತ್ಕಾಲಿಕ  ದೋಣಿ ವ್ಯವಸ್ಥೆ ಹಾಗೂ ಶಾಶ್ವತ ಪರಿಹಾರಕ್ಕೆ ಜಿಲ್ಲಾಡಳಿತ ಯೋಜನೆ ರೂಪಿಸಬೇಕು ಎಂದು ಅಂಗವಿಕಲ ಸಂಘದ ಕಾರ್ಯದರ್ಶಿ ಸಾರಥಿ ಗ್ರಾಮದ ಚಂದ್ರಪ್ಪ ಆಗ್ರಹಿಸಿದರು.

ನದಿ ಮೇಲ್ಭಾಗದಲ್ಲಿ ನಿರಂತರ ಮಳೆ ಕಾರಣ ನದಿಯ ನೀರಿನಲ್ಲಿ ಮಣ್ಣಿನ ಪ್ರಮಾಣ ಹೆಚ್ಚಾಗಿರುತ್ತದೆ. ಇದನ್ನು ಶುದ್ಧಗೊಳಿಸಿ, ನಗರದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ನಗರಸಭೆ ಕೂಡಲೇ ಅಗತ್ಯ ಮುಂಜಾಗೃತಾ ಕ್ರಮಕ್ಕೆ ಮುಂದಾಗಬೇಕು. ಹೋಟೆಲ್ ಹಾಗೂ ಬೀದಿ ಬದಿ ವ್ಯಾಪಾರಸ್ಥರಿಗೆ ಶುದ್ಧ ಹಾಗೂ ಬಿಸಿನೀರನ್ನು ನೀಡುವಂತೆ ನಗರಸಭೆ ಎಚ್ಚರಿಕೆ ನೀಡಬೇಕಿದೆ ಎಂಬುದು ಹಿರಿಯ ನಾಗರಿಕ ರಾಮಚಂದ್ರಪ್ಪ ಅವರ ಅನಿಸಿಕೆ.

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಸಾಂಕ್ರಾಮಿಕ ರೋಗಗಳು ಹಾಗೂ ಕಲುಷಿತ ನೀರು ಪೂರೈಕೆ ಸೇವನೆಯಿಂದ ಉಂಟಾಗುವ ರೋಗಗಳಿಗೆ ವಿಶೇಷ ಘಟಕ ತೆರೆಯುವ ಜತೆಗೆ ಸಂಬಂಧಿಸಿದ ಔಷಧ ಸಾಮಗ್ರಿಗಳನ್ನು
ಸಂಗ್ರಹಿಸುವ ಮೂಲಕ ಮುಂಜಾಗ್ರತೆ ವಹಿಸಬೇಕಿದೆ ಎಂದು ಕಾರ್ಮಿಕ ಮುಖಂಡ ಎಚ್‍.ಕೆ. ಕೊಟ್ರಪ್ಪ ಒತ್ತಾಯಿಸಿದರು.

-ಆರ್. ರಾಘವೇಂದ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT