ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಸಂಗ್ರಹಣೆ ಮೇಲೆ ನಿಗಾ: ಮನೆಗಳಿಗೆ ಆರ್‌ಎಫ್‌ಐಡಿ ಟ್ಯಾಗ್‌

1.10 ಲಕ್ಷ ಮನೆಗಳ ಬಾಗಿಲಿಗೆ ಅಳವಡಿಕೆ
Last Updated 20 ಜೂನ್ 2019, 19:08 IST
ಅಕ್ಷರ ಗಾತ್ರ

ಬೆಳಗಾವಿ: ಪ್ರತಿ ಮನೆಯಿಂದ ಕಸ ಸಂಗ್ರಹಣೆ ನಿಯಮಿತವಾಗಿ ನಡೆಯುತ್ತಿದೆಯೇ ಎನ್ನುವುದನ್ನು ಪತ್ತೆಹಚ್ಚಲು ಬೆಳಗಾವಿ ನಗರದ ಎಲ್ಲ ಮನೆಗಳ ಬಾಗಿಲುಗಳಿಗೆ ಆರ್‌ಎಫ್‌ಐಡಿ (ರೇಡಿಯೊ ಫ್ರಿಕ್ವೆನ್ಸಿ ಐಡೆಂಟಿಫಿಕೇಷನ್‌ ಡಿವೈಸ್‌) ಉಪಕರಣ ಅಳವಡಿಸಲಾಗುತ್ತಿದೆ.

‘ಕೇಂದ್ರ ಸರ್ಕಾರದ ಸ್ಮಾರ್ಟ್‌ ಸಿಟಿ ಯೋಜನೆಯ ಹಲವು ಕಾಮಗಾರಿಗಳು ನಗರದಲ್ಲಿ ಪ್ರಗತಿಯಲ್ಲಿದ್ದು, ಇದರ ಭಾಗವಾಗಿ ಆರಂಭಿಕ ಹಂತದಲ್ಲಿ ರಾಮತೀರ್ಥ ನಗರ, ಭಾಗ್ಯನಗರ, ವಡಗಾಂವ, ಶ್ರೀನಗರ ಹಾಗೂ ಸುತ್ತಮುತ್ತಲ ಪ್ರದೇಶಗಳ 1.10 ಲಕ್ಷ ಮನೆಗಳಿಗೆ ಈ ಉಪಕರಣವನ್ನು ಅಳವಡಿಸಲಾಗಿದೆ. 2–3 ತಿಂಗಳಲ್ಲಿ ಎಲ್ಲ ಮನೆಗಳಿಗೆ ಅಳವಡಿಸಲಾಗುವುದು’ ಎಂದು ಸ್ಮಾರ್ಟ್‌ ಸಿಟಿ ಯೋಜನೆ ಉಪ ಪ್ರಧಾನ ವ್ಯವಸ್ಥಾಪಕ (ಐಟಿ ಘಟಕ) ಆನಂದ ಚೌಧರಿ ತಿಳಿಸಿದ್ದಾರೆ.

ಮನೆ ಬಾಗಿಲುಗಳಿಗೆ ‘ಆರ್‌ಎಫ್‌ಐಡಿ ಟ್ಯಾಗ್‌’ ಅಳವಡಿಸಿದ್ದರೆ, ಇದರ ಇನ್ನೊಂದು ಭಾಗವಾಗಿರುವ ‘ಸ್ವೈಪ್‌ ಕಾರ್ಡ್‌’ ಅನ್ನು ಕಸ ಸಂಗ್ರಹಿಸುವ ಪಾಲಿಕೆಯ ಸಿಬ್ಬಂದಿಗೆ ನೀಡಲಾಗಿರುತ್ತದೆ. ಅವರು ಕಸ ಸಂಗ್ರಹಿಸಿದ ನಂತರ ಆರ್‌ಎಫ್‌ಐಡಿ ಟ್ಯಾಗ್‌ಗೆ ತಮ್ಮ ಬಳಿಯಿರುವ ಕಾರ್ಡ್‌ ಅನ್ನು ಉಜ್ಜುತ್ತಾರೆ. ಆಗ ಅದು ನೀಲಿ ಬಣ್ಣದಿಂದ ಹಸಿರು ಬಣ್ಣಕ್ಕೆ ತಿರುಗುತ್ತದೆ. ಹಸಿರು ಬಣ್ಣ ತೋರಿಸಿದರೆ, ಕಸ ಸಂಗ್ರಹಿಸಿದಂತೆ. ‘ಈ ಮನೆಯಿಂದ ಕಸ ಸಂಗ್ರಹಿಸಲಾಗಿದೆ’ ಎನ್ನುವ ಸಂದೇಶವು ಈ ಉಪಕರಣದಿಂದ ಮುಖ್ಯ ಕಂಟ್ರೋಲ್‌ ರೂಮ್‌ಗೆ ರವಾನೆಯಾಗುತ್ತದೆ.

ಪ್ರತಿದಿನ ಬೆಳಿಗ್ಗೆ ಕಸ ಸಂಗ್ರಹಿಸಲು ಸಮಯ ನಿಗದಿ ಮಾಡಲಾಗಿರುತ್ತದೆ. ಆ ನಿಗದಿತ ಸಮಯದೊಳಗೆ ಕಸ ಸಂಗ್ರಹಿಸದಿದ್ದರೆ ನೀಲಿ ಬಣ್ಣದ ಟ್ಯಾಗ್‌, ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದರರ್ಥ ‘ಈ ಮನೆಯ ಕಸವನ್ನು ಸಂಗ್ರಹಿಸಿಲ್ಲ’ ಎಂದು. ಈ ಸಂದೇಶವು ಮುಖ್ಯ ಕಂಟ್ರೋಲ್‌ ರೂಮ್‌ಗೆ ರವಾನೆಯಾಗುತ್ತದೆ.

ವಿಲೇವಾರಿ ಘಟಕದವರೆಗೂ ನಿಗಾ: ಮನೆಗಳಿಂದ ಸಂಗ್ರಹಿಸಿದ ಕಸವನ್ನು ನಿಗದಿತ ಡಂಪಿಂಗ್‌ ಯಾರ್ಡ್‌ನಲ್ಲಿ ವಿಲೇವಾರಿ ಮಾಡುವ ಬದಲು ಕೆಲವೊಮ್ಮೆ ಗುತ್ತಿಗೆದಾರರು ಎಲ್ಲೆಂದರಲ್ಲಿ ಬೀಸಾಡಿ ಹೋಗುತ್ತಾರೆ. ಇದನ್ನು ತಪ್ಪಿಸಲು ಕಸ ಒಯ್ಯುವ ಲಾರಿ, ಆಟೊಗಳಿಗೂ ಜಿಪಿಎಸ್‌ ಅಳವಡಿಸಲಾಗುತ್ತಿದೆ. ಒಟ್ಟಾರೆ ಕಸವನ್ನು ತ್ಯಾಜ್ಯ ವಿಲೇವಾರಿ ಘಟಕದವರೆಗೆ ತೆಗೆದುಕೊಂಡು ಹೋಗುವವರೆಗೂ ಸಂಪೂರ್ಣವಾಗಿ ನಿಗಾ ವಹಿಸಲಾಗುತ್ತದೆ ಎಂದು ಚೌಧರಿ ಹೇಳಿದರು.

ಆ್ಯಪ್‌ ಅಭಿವೃದ್ಧಿ: ಕಸ ಸಂಗ್ರಹಣೆ ಬಗ್ಗೆ ಆ್ಯಪ್‌ ಅಭಿವೃದ್ಧಿಪಡಿಸುತ್ತಿದ್ದು, ಮುಂದಿನ ದಿನಗಳಲ್ಲಿ ಮನೆ ಮಾಲೀಕರು ತಮ್ಮ ಸ್ಮಾರ್ಟ್‌ ಫೋನ್‌ನಲ್ಲಿ ಇದನ್ನು ಡೌನ್‌ಲೋಡ್‌ ಮಾಡಿಕೊಂಡು ಕಸ ವಿಲೇವಾರಿಯಾಗದ ದಿನ ದೂರು ಕೂಡ ದಾಖಲಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT