ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖರ್ಚಾಗದೆ ಉಳಿದ 30 ಲಕ್ಷ ಟನ್‌ ಅದಿರು

ವರ್ಷದಲ್ಲಿ ಎಂಎಂಎಲ್ ಮಾರಿದ್ದು 23.5 ಸಾವಿರ ಟನ್‌ ಮಾತ್ರ l ಉಳಿದ ಅದಿರಿನ ಮೌಲ್ಯ ₹600 ಕೋಟಿ
Last Updated 8 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್‌ ಲಿಮಿಟೆಡ್‌ (ಎಂಎಂಎಲ್ ಈಗ ಕೆಎಸ್‌ಎಂಸಿಎಲ್‌) ಕಳೆದೊಂದು ವರ್ಷದಲ್ಲಿ ಮಾರಾಟ ಮಾಡಿದ್ದು ಬರೀ 23,500 ಟನ್‌ ಅದಿರು ಮಾತ್ರ! ₹600 ಕೋಟಿ ಮೌಲ್ಯದ ಸುಮಾರು 30 ಲಕ್ಷ ಟನ್‌ ಅದಿರು ಕೇಳುವವರಿಲ್ಲದೆ ಗಣಿಗಳಲ್ಲಿ ಬಿದ್ದಿದೆ.

ಕರ್ನಾಟಕದಲ್ಲಿರುವ ಉಕ್ಕು ಕಾರ್ಖಾನೆಗಳಿಗೆ ವರ್ಷಕ್ಕೆ 35ರಿಂದ 40 ದಶ ಲಕ್ಷ ಟನ್‌ ಅದಿರು ಅಗತ್ಯವಿದೆ. ಒಂದು ತಿಂಗಳ ಉತ್ಪಾದನೆಗೆ ಸಾಕಾಗುವಷ್ಟು ಅದಿರು ಎಂಎಂಎಲ್‌ ಗಣಿಗಳಲ್ಲೇ ಬಿದ್ದಿದೆ. ಆದರೆ, ಭಾರತೀಯ ಖನಿಜ ಉದ್ಯಮಗಳ ಒಕ್ಕೂಟ (ಫಿಮಿ) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, 21 ಲಕ್ಷ ಟನ್‌ ಅದಿರು ಎಂಎಂಎಲ್‌ ಬಳಿ ಇದೆ. ಇದೇ ಸಂಸ್ಥೆ, 2015–16ರಲ್ಲಿ 36 ಲಕ್ಷ ಟನ್‌ ಅದಿರು ಮಾರಾಟ ಮಾಡಿ ₹ 423 ಕೋಟಿ ಗಳಿಸಿತ್ತು. 16–17ರಲ್ಲಿ 35 ಲಕ್ಷ ಟನ್‌ ಅದಿರನ್ನು ₹564 ಕೋಟಿಗೆ ಹರಾಜು ಹಾಕಿತ್ತು. 17–18ರಲ್ಲಿ 25 ಲಕ್ಷ ಟನ್‌ ಅದಿರನ್ನು ₹ 542 ಕೋಟಿಗೆ ಮಾರಾಟ ಮಾಡಿತ್ತು.

ಸತತ 3 ವರ್ಷ ಅತ್ಯಧಿಕ ಪ್ರಮಾಣದ ಅದಿರು ಮಾರಾಟ ಮಾಡಿದ್ದ ಎಂಎಂಎಲ್‌ 18–19ನೇ ಸಾಲಿನಲ್ಲಿ ಅದಿರು ಮಾರಾಟ ಮಾಡಲು ಸಂಪೂರ್ಣ ವಿಫಲವಾಗಿದೆ. ಹಿಂದಿನ ವರ್ಷ ಅದಿರು ಮಾರಾಟದಿಂದ ಸಂಸ್ಥೆಗೆ ಕೇವಲ ₹ 19 ಕೋಟಿ ಆದಾಯ ಮಾತ್ರ ಬಂದಿದೆ.

ಕೇಂದ್ರ ಸರ್ಕಾರಿ ಸ್ವಾಮ್ಯದ ರಾಷ್ಟ್ರೀಯ ಖನಿಜ ಅಭಿವೃದ್ಧಿ ನಿಗಮ (ಎನ್‌ಎಂಡಿಸಿ) ಮತ್ತು ಮಾರುಕಟ್ಟೆ ದರಗಳಿಗೆ ಹೋಲಿಸಿದರೆ ಎಂಎಂಎಲ್‌ ದರ ದುಬಾರಿ. 2018ರ ಜನವರಿಯಲ್ಲಿ ಟನ್‌ಗೆ ₹ 3,609 ಇದ್ದ ದರ, 2019 ಜೂನ್‌ನಲ್ಲಿ ₹3,467 ಆಗಿತ್ತು. ಈ ಅವಧಿಯಲ್ಲಿ ಅಲ್ಪಸ್ವಲ್ಪ ಏರಿಳಿತವನ್ನೂ ಕಂಡಿದೆ. ಎನ್‌ಎಂಡಿಸಿ ದರ ಇದೇ ಸಮಯದಲ್ಲಿ ₹3,159 ಮತ್ತು ₹2,669 ಇತ್ತು. ದರ ನಿಗದಿ ವಿಷಯದಲ್ಲಿ ಎನ್‌ಎಂಡಿಸಿ ತೀರ್ಮಾನ ಅಂತಿಮ. ಉಳಿದ ಉದ್ಯಮಗಳು ಮತ್ತು ಸಂಸ್ಥೆಗಳು ಅದನ್ನೇ ಅನುಸರಿಸುತ್ತವೆ. ಆದರೆ, ಎಂಎಂಎಲ್‌ ಮಾತ್ರ ಎನ್‌ಎಂಡಿಸಿಗೂ ತನಗೂ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದೆ ಎಂಬುದು ಉದ್ಯಮಿಗಳ ಆರೋಪ.

ಎಂಎಂಎಲ್‌ ಬೇರೆ ಕೆಲವು ಖನಿಜಗಳನ್ನು ಮಾರಾಟ ಮಾಡುವುದರಿಂದ ಸಮಸ್ಯೆಯಾಗಿಲ್ಲ. ಇದರಿಂದಾಗಿ ಅದಿರು ಖರ್ಚಾಗದೆ ಉಳಿದಿದ್ದರೂ ಅದು ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ಅದಿರು ಬಿದ್ದಿರುವುದರಿಂದ ಸಂಸ್ಥೆಗೆ ನಷ್ಟವಿಲ್ಲ ಎಂದು ಅಧಿಕಾರಿಗಳು ಪ್ರತಿಪಾದಿಸುತ್ತಿದ್ದರೂ, ವಾಸ್ತವದಲ್ಲಿ ಆದಾಯಕ್ಕೆ ಕತ್ತರಿ ಬಿದ್ದಿದೆ. ಸರ್ಕಾರಕ್ಕೆ ಬರಬೇಕಾದ ರಾಜಧನಕ್ಕೂ ಹೊಡೆತ ಬಿದ್ದಿದೆ. ಜಿಲ್ಲಾ ಖನಿಜ ನಿಧಿ ಸೇರಿದಂತೆ ಬೇರೆ ಬೇರೆ ನಿಧಿಗಳಿಗೂ ಹಣ ಬರುತ್ತಿಲ್ಲ.

ಎಂಎಂಎಲ್‌ ದರ ಕಡಿಮೆ ಮಾಡಲು ಆಡಳಿತ ಮಂಡಳಿ ಒಪ್ಪಿಗೆ ಕಡ್ಡಾಯ. ಅಲ್ಲದೆ, ದರ ಕಡಿಮೆ ಮಾಡಿದರೆ ಮಹಾಲೇಖ‍ಪಾಲರ ಆಕ್ಷೇಪಣೆಗೆ ಗುರಿಯಾಗಬೇಕಾಗುತ್ತದೆ ಎಂಬ ಭಯ ಅಧಿಕಾರಗಳಲ್ಲಿದೆ. ಈಗಾಗಲೇ ಎಂಎಂಎಲ್‌ಗೆ ₹ 642 ಕೋಟಿ ನಷ್ಟ ಉಂಟುಮಾಡಿದ ಆರೋಪಕ್ಕೆ ಅರ್ಧ ಡಜನ್‌ ಐಎಎಸ್‌, ಐಪಿಎಸ್‌ ಅಧಿಕಾರಿಗಳು ಒಳಗಾಗಿದ್ದಾರೆ. ಈ ಕಾರಣಕ್ಕೆ ಈಗಿನ ಅಧಿಕಾರಿಗಳು ದರ ಇಳಿಸುವ ಗೋಜಿಗೆ ಹೋಗಿಲ್ಲ ಎಂದು ಸಂಸ್ಥೆ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT