ಮಂಗಳವಾರ, ಮಾರ್ಚ್ 2, 2021
31 °C
ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ವೆಚ್ಚಕ್ಕೂ ಲೆಕ್ಕಕ್ಕೂ ತಾಳೆಯಾಗದ ಮೊತ್ತ: ಬಿಜೆಪಿ ಆರೋಪ

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿ: ಲೆಕ್ಕಕ್ಕೇ ಸಿಗದ ₹35 ಸಾವಿರ ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಮಾಡಲಾಗಿರುವ ₹35 ಸಾವಿರ ಕೋಟಿ ವೆಚ್ಚದ ಲೆಕ್ಕವೇ ಸಿಗುತ್ತಿಲ್ಲ. ಈ ಬಗ್ಗೆ ತನಿಖೆ ನಡೆಸಿ ಜನರ ಮುಂದೆ ಸತ್ಯಾಂಶ ಇಡಬೇಕು ಎಂದು ಬಿಜೆಪಿ ಆಗ್ರಹಿಸಿದೆ.

‘ಸಿಎಜಿ ವರದಿ–ಭ್ರಷ್ಟ ಕಾಂಗ್ರೆಸ್‌ ಸರ್ಕಾರದ ಲೂಟಿ ಅವಧಿ’ ಎಂಬ ಕಿರು ಹೊತ್ತಗೆ ಬಿಡುಗಡೆ ಮಾಡಿ ಮಾತನಾಡಿದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್, ‘2016–17ರಲ್ಲಿ ಮಾಡಿರುವ ಖರ್ಚು ಹಾಗೂ ಸ್ವೀಕೃತಿಗೆ ತಾಳೆಯೇ ಆಗುತ್ತಿಲ್ಲ. ₹1.86 ಲಕ್ಷ ಕೋಟಿ ಬಜೆಟ್‌ನಲ್ಲಿ ಶೇ 19ರಷ್ಟು ಮೊತ್ತಕ್ಕೆ ಲೆಕ್ಕವೇ ಇಲ್ಲ ಎಂದು ಭಾರತದ ಲೆಕ್ಕ ನಿಯಂತ್ರಕರು ಹಾಗೂ ಮಹಾ ಲೆಕ್ಕ ಪರಿಶೋಧಕರ(ಸಿಎಜಿ) ವರದಿ ಉಲ್ಲೇಖಿಸಿದೆ. ಭಾರಿ ಮೊತ್ತದ ಭ್ರಷ್ಟಾಚಾರ, ಅವ್ಯವಹಾರ ನಡೆದಿರುವ ಬಗ್ಗೆ ಅನುಮಾನ ಇದೆ’ ಎಂದು ಹೇಳಿದರು.

‘2016ರಲ್ಲಿ ವಿರೋಧ ಪಕ್ಷದಲ್ಲಿದ್ದ ಎಚ್‌.ಡಿ.ಕುಮಾರಸ್ವಾಮಿ ಅಂದಿನ ಮುಖ್ಯಮಂತ್ರಿ ಹಾಗೂ ಈಗಿನ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ಮೋಸ, ವಂಚನೆ, ಲಂಚ ಪ್ರಕರಣಗಳ ಪ್ರಸ್ತಾಪ ಮಾಡಿದ್ದರು. ಹುಬ್ಲೋಟ್‌ ವಾಚ್‌ ಬಗ್ಗೆಯೂ ಟೀಕಿಸಿದ್ದರು. ಇದೇ ಅವಧಿಯಲ್ಲಿ ಅಂದಿನ ಸರ್ಕಾರ ಮಾಡಿದ ಖರ್ಚುಗಳ ಲೆಕ್ಕವೇ ಇಲ್ಲ ಎಂದು ಉಲ್ಲೇಖಿಸಿರುವ ಸಿಎಜಿ ವರದಿಯನ್ನು ಕುಮಾರಸ್ವಾಮಿಯವರೇ ಇತ್ತೀಚೆಗೆ ಸದನದಲ್ಲಿ ಮಂಡಿಸಿದ್ದಾರೆ’ ಎಂದರು.

‘2015–16ರಲ್ಲಿ 1ರಿಂದ 10ನೇ ತರಗತಿಯವರೆಗೆ 47.45 ಲಕ್ಷ ಮಕ್ಕಳು ಓದುತ್ತಿದ್ದರು. ಆದರೆ, 52.73 ಲಕ್ಷ ಸಮವಸ್ತ್ರ ಖರೀದಿಸಲಾಗಿದೆ. 5.72 ಲಕ್ಷ ಮಕ್ಕಳೇ ಇಲ್ಲದಿದ್ದರೂ ಸಮವಸ್ತ್ರ ಖರೀದಿಸಿ ₹1.72 ಕೋಟಿ ವ್ಯಯ ಮಾಡಲಾಗಿದೆ. ಈ ಹಣ ಎಲ್ಲಿಗೆ, ಯಾರಿಗೆ ಹೋಯಿತು’ ಎಂದು ರವಿಕುಮಾರ್ ಪ್ರಶ್ನಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಶಾಸಕ ಸಿ.ಎನ್. ಅಶ್ವತ್ಥನಾರಾಯಣ, ಸಹ ವಕ್ತಾರ ಎ.ಎಸ್‌. ಆನಂದ್ ಇದ್ದರು.

ಸಿಗದ ಲೆಕ್ಕದ ವಿವರ ಯಾವುದು?

* ₹11,994ಕೋಟಿ–ಬಳಕೆಯೂ ಆಗದೇ, ಖಜಾನೆಗೆ ಮರು ಜಮೆ ಮಾಡದ ಮೊತ್ತ. ಇದು ಯಾರ ಹಣ, ಯಾವ ಬ್ಯಾಂಕ್ ಖಾತೆಯಲ್ಲಿದೆ ಎಂಬುದು ನಿಗೂಢ

* ₹1,433 ಕೋಟಿ–ಕುಡಿಯುವ ನೀರಿನ ಯೋಜನೆಯಡಿ 788 ಕೆರೆಗಳನ್ನು ತುಂಬಿಸಲು ಮಾಡಿದ ವೆಚ್ಚ; ಆದರೆ ಕೆರೆಗಳೇ ತುಂಬಿಲ್ಲ

* ₹7,378 ಕೋಟಿ– ತಾಂತ್ರಿಕ ಅನುಮೋದನೆ ಪಡೆಯದೇ ಮಾಡಿರುವ ವೆಚ್ಚ

* ₹612 ಕೋಟಿ–ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಬ್ಯಾಂಕ್‌ನಲ್ಲಿ ಠೇವಣಿ; ಬಡ್ಡಿ ಯಾರ ಖಾತೆಗೆ ಎಂಬ ಅನುಮಾನ?

* ₹6,057 ಕೋಟಿ–ಶಾಸಕಾಂಗದ ಅನುಮೋದನೆ ಇಲ್ಲದೇ ಬಿಡುಗಡೆ

* 40 ಲೀಟರ್ ಡೀಸೆಲ್‌ಗೆ ₹21,944 ಪಾವತಿ

* ನಮ್ಮ ಸರ್ಕಾರದ ಅವಧಿಯಲ್ಲಿ ಯಾವುದೇ ಅಕ್ರಮವೂ ನಡೆದಿಲ್ಲ. ಯಾವ ಸಚಿವರೂ ಜೈಲಿಗೆ ಹೋಗಿ ಬಂದಿಲ್ಲ. ಸಿಎಜಿ ವರದಿ ಬಗ್ಗೆ ಗೊತ್ತಿಲ್ಲ
-ಸಿದ್ದರಾಮಯ್ಯ, ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು