31ರಂದು ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

7
ಮಠದ ಆವರಣದಲ್ಲಿರುವ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಉದ್ಘಾಟಿಸಲಿದ್ದಾರೆ

31ರಂದು ಶಿವಕುಮಾರ ಸ್ವಾಮೀಜಿ ಪುಣ್ಯಸ್ಮರಣೆ

Published:
Updated:

ತುಮಕೂರು: ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆ ಸಮಾರಂಭವನ್ನು ಜನವರಿ 31ರಂದು ಆಯೋಜಿಸಲಾಗಿದೆ ಎಂದು ಸಿದ್ಧಗಂಗಾಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಜ.31ರಂದು ಬೆಳಿಗ್ಗೆ 10.30ಕ್ಕೆ ಮಠದ ಆವರಣದಲ್ಲಿರುವ ಗೋಸಲ ಸಿದ್ದೇಶ್ವರ ವೇದಿಕೆಯಲ್ಲಿ ಸಮಾರಂಭ ನಡೆಯಲಿದ್ದು, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮಾರಂಭ ಉದ್ಘಾಟಿಸುವರು. ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಧ್ಯಕ್ಷತೆ ವಹಿಸಲಿದ್ದಾರೆ’ ಎಂದರು.

ಸಿರಿಗೆರೆ ತರಳಬಾಳು ಸಂಸ್ಥಾನಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆದಿಚುನಂಚನಗಿರಿ ಮಹಾ ಸಂಸ್ಥಾನಮಠದ ನಿರ್ಮಲಾನಂದನಾಥ ಸ್ವಾಮೀಜಿ, ಬೆಂಗಳೂರಿನ ಆರ್ಟ್ ಆಫ್ ಲಿವಿಂಗ್‌ನ ರವಿಶಂಕರ್ ಗುರೂಜಿ,  ಕನಕಪುರ ದೇಗುಲಮಠದ  ಮುಮ್ಮಡಿ ನಿರ್ವಾಣ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದಾರೆ ಎಂದು ಹೇಳಿದರು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಂ, ವಿಧಾನಸಭಾ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ, ಉಪಮುಖ್ಯಮಂತ್ರಿ


ಸಿದ್ಧಲಿಂಗ ಸ್ವಾಮೀಜಿ

ಡಾ.ಜಿ.ಪರಮೇಶ್ವರ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ಧರಾಮಯ್ಯ, ಗೃಹ ಸಚಿವ ಎಂ.ಬಿ.ಪಾಟೀಲ್, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ಶಾಸಕ ವಿ.ಸೋಮಣ್ಣ, ಸಂಸದ ಎಂ.ವೀರಪ್ಪ ಮೊಯಿಲಿ ಅವರು ‘ನುಡಿನಮನ’ ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.

‘ಸಂಸದ ಕೆ.ಎಚ್.ಮುನಿಯಪ್ಪ, ಅಹಾರ ಮತ್ತು ನಾಗರೀಕ ಪೂರೈಕೆ ಸಚಿವ ಜಮೀರ್ ಅಹ್ಮದ್‌ಖಾನ್, ಶಾಸಕರಾದ ಬಸವರಾಜ ಹೊರಟ್ಟಿ, ಶಾಮನೂರು ಶಿವಶಂಕರಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಿಲ್ಲೆಯ ಸಚಿವರು, ಶಾಸಕರು, ಸಂಸದರು ಪಾಲ್ಗೊಳ್ಳಲಿದ್ದಾರೆ. ಸಮಾರಂಭದ ಪ್ರಾಸ್ತಾವಿಕ ನುಡಿಗಳನ್ನು ಡಾ.ಗೊ.ರು.ಚನ್ನಬಸಪ್ಪ ಆಡಲಿದ್ದಾರೆ’ ಎಂದು ಹೇಳಿದರು.

ಎಷ್ಟೇ ಭಕ್ತರು ಬಂದರೂ ವ್ಯವಸ್ಥೆ: ಪುಣ್ಯಸ್ಮರಣೆ ಸಮಾರಂಭಕ್ಕೆ ಎಷ್ಟೇ ಭಕ್ತರೂ ಬಂದರೂ ಅದಕ್ಕೆ ತಕ್ಕ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಈ ದಿಶೆಯಲ್ಲಿ ಮಠವು ಸಿದ್ಧತೆಯಲ್ಲಿ ತೊಡಸಿಕೊಂಡಿದೆ ಎಂದರು.

ಮಠ ಸಂಪೂರ್ಣ ಸಶಕ್ತ

‘ನಮ್ಮ ಗುರುಗಳು (ಶಿವಕುಮಾರ ಸ್ವಾಮೀಜಿ) ಮಠ ನಡೆಸಿಕೊಂಡು ಹೋಗಲು ಏನೂ ತೊಂದರೆಗಳಿಲ್ಲ. ನಡೆಸಿಕೊಂಡು ಹೋಗು ಎಂದು ಹೇಳಿದ್ದಾರೆ. ಸಿದ್ಧಗಂಗಾಮಠವು ಎಲ್ಲ ಪರಿಸ್ಥಿತಿ ನಿಭಾಯಿಸಲು ಸಶಕ್ತವಾಗಿದೆ. ಶ್ರೀಗಳ ಆಶೀರ್ವಾದ, ಭಕ್ತರ ಸಹಕಾರವಿದೆ. ಯಾವುದೇ ತೊಂದರೆಗಳಿಲ್ಲ’ ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

‘ಮಠದ ಈಗಾಗಲೇ ಕೆಲ ಅಪೂರ್ವ ಮತ್ತು ಅಪೂರ್ಣ ಕೆಲ ಯೋಜನೆಗಳಿವೆ. ಅವುಗಳನ್ನು ಆದ್ಯತೆಯನುಸಾರ ಪೂರ್ಣಗೊಳಿಸುವುದಕ್ಕೆ ಆದ್ಯತೆ ನೀಡಲಾಗುವುದು. ಬೇರೆ ಯೋಜನೆಗಳಿಲ್ಲ. ಶಾಮನೂರು ಶಿವಶಂಕರಪ್ಪ ಅವರು ಮಾಡಿಸಿಕೊಟ್ಟ ಶಿವಕುಮಾರ ಸ್ವಾಮೀಜಿ ಅವರ ಕಂಚಿನ ಪುತ್ಥಳಿಯನ್ನು ವಸ್ತುಪ್ರದರ್ಶನ ಆವರಣದಲ್ಲಿನ ಉದ್ಯಾನದಲ್ಲಿ ಸ್ಥಾಪಿಸಲಾಗುವುದು’ ಎಂದು ಹೇಳಿದರು.

‘ಮಠದ ಚಟುವಟಿಕೆಗಳಲ್ಲಿ, ಕಾರ್ಯಕ್ರಮಗಳಲ್ಲಿ ಯಾವುದೇ ಬದಲಾವಣೆಗಳಿಲ್ಲ. ಪ್ರತಿ ವರ್ಷ ಯಾವ ರೀತಿ ಕಾರ್ಯಕ್ರಮ ನಡೆದುಕೊಂಡು ಬಂದವೊ ಅದೇ ರೀತಿ ಮುಂದುವರಿಯುತ್ತವೆ. ಯಾವುದನ್ನು ರದ್ದು ಪಡಿಸಿಲ್ಲ. ನಮ್ಮ ಗುರುಗಳ ಅಪೇಕ್ಷೆಯೂ ಅದೇ ಆಗಿದೆ’ ಎಂದು ನುಡಿದರು.

‘ಸ್ವಾಮೀಜಿಯವರ ಬೃಹತ್ ಮೂರ್ತಿ ನಿರ್ಮಾಣಕ್ಕೆ ಸಂಪನ್ಮೂಲ, ಸಮಯ ಬೇಕು. ಸದ್ಯಕ್ಕೆ ಆ ಬಗ್ಗೆ ಮಠ ಯಾವುದೇ ರೀತಿ ಚಿಂತನೆ ಮಾಡಿಲ್ಲ’ ಎಂದರು.

ದೈನಂದಿನ ಸ್ಥಿತಿಗೆ ಮಠ

ಸ್ವಾಮೀಜಿಯವರ ಅಗಲಿಕೆಯ ನೋವಿನಲ್ಲಿದ್ದ ಸಿದ್ಧಗಂಗಾಮಠ ಗುರುವಾರ ದೈನಂದಿನ ಸ್ಥಿತಿಗೆ ಮರಳಿತು. ನಾಡಿನ ವಿವಿಧ ಕಡೆಯಿಂದ ಬಂದ ಭಕ್ತರು ಶಿವಕುಮಾರ ಸ್ವಾಮೀಜಿಯವರ ಸಮಾಧಿ ಮಂಟಪದ ದರ್ಶನ ಪಡೆದರು.

ಮಠದ ಸಿಬ್ಬಂದಿ ದೈನಂದಿನ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ವಸತಿ ಶಾಲೆಯ ಕೆಲ ಮಕ್ಕಳು ಅಡಿಕೆ ಸಿಪ್ಪೆ ಮೂಟೆ ಹೊತ್ತು ಅಡುಗೆ ಮನೆಗೆ ಸಾಗಿಸಿದರೆ ಮತ್ತೊಂದಿಷ್ಟು ಮಕ್ಕಳು ಚರಂಡಿ ಸ್ವಚ್ಛತೆ ಕಾರ್ಯದಲ್ಲಿ ತೊಡಗಿಸಿಕೊಂಡರು. ಅನೇಕ ಮಕ್ಕಳು ವಾಲಿಬಾಲ್, ಥ್ರೋಬಾಲ್ ಆಟ ಆಡುತ್ತಿದ್ದುದು ಕಂಡು ಬಂದಿತು.

ಡಾ.ಎಂ.ಎನ್.ಚನ್ನಬಸಪ್ಪ, ಟಿ.ಕೆ.ನಂಜುಂಡಪ್ಪ, ಆಡಳಿತಾಧಿಕಾರಿ ವಿಶ್ವನಾಥಯ್ಯ ಗೋಷ್ಠಿಯಲ್ಲಿದ್ದರು.


ಸಿದ್ಧಗಂಗಾಮಠದ ಆವರಣದಲ್ಲಿ ವಸತಿ ಶಾಲೆ ಮಕ್ಕಳು ಗುರುವಾರ ಚೆಂಡಿನಾಟ ಆಡಿದರು

* ಇದನ್ನೂ ಓದಿ: ಅವರೆಂದೂ ಭಾರತ ರತ್ನ ಬಯಸಿದವರಲ್ಲ

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !