ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ಗೆಲ್ಲುವ ಅಭ್ಯರ್ಥಿಗಾಗಿ ದೆಹಲಿಯಲ್ಲಿ ಚರ್ಚೆ

ಗುರುವಾರ , ಏಪ್ರಿಲ್ 25, 2019
29 °C
ಕಗ್ಗಂಟಾಗಿರುವ ಕಾಂಗ್ರೆಸ್‌ ಅಭ್ಯರ್ಥಿ ಆಯ್ಕೆ

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ: ಗೆಲ್ಲುವ ಅಭ್ಯರ್ಥಿಗಾಗಿ ದೆಹಲಿಯಲ್ಲಿ ಚರ್ಚೆ

Published:
Updated:

* 1991ರಿಂದಲೂ ಬಿಜೆಪಿ ಹಿಡಿತದಲ್ಲಿರುವ ಕ್ಷೇತ್ರ

* ಗೆಲ್ಲುವ ಅಭ್ಯರ್ಥಿಗೆ ಮಣೆ ಹಾಕಲು ಕಾಂಗ್ರೆಸ್‌ ಚಿಂತನೆ

* ಮತ್ತೆ ನಳಿನ್‌ಕುಮಾರ್‌ ಕಟೀಲ್‌ಗೆ ಬಿಜೆಪಿ ಟಿಕೆಟ್‌

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರವನ್ನು ವಶಪಡಿಸಿಕೊಳ್ಳಲು ಮುಂದಾಗಿರುವ ಕಾಂಗ್ರೆಸ್‌ ಟಿಕೆಟ್‌ ಹಂಚಿಕೆ ಸಂಬಂಧ ತೀವ್ರ ಚೌಕಾಶಿ ನಡೆಸಿದೆ. ಅಳೆದು ತೂಗಿ ಗೆಲ್ಲುವ ಅಭ್ಯರ್ಥಿಯನ್ನು ಕಣಕ್ಕಿಳಿಸಲು ನಿರ್ಧರಿಸಿದ್ದು, ಇದರಿಂದಾಗಿ ಕ್ಷೇತ್ರದ ಟಿಕೆಟ್‌ ಹಂಚಿಕೆ ಕಗ್ಗಂಟಾಗಿ ಪರಿಣಮಿಸಿದೆ.

ಜಾತಿ ಲೆಕ್ಕಾಚಾರದಲ್ಲಿ ಬಿಜೆಪಿ ಬಂಟರಿಗೆ ಟಿಕೆಟ್‌ ನೀಡಿದರೆ, ಕಾಂಗ್ರೆಸ್‌ನಿಂದ ಬಿಲ್ಲವರಿಗೆ ಟಿಕೆಟ್‌ ನೀಡಬೇಕು ಎನ್ನುವ ವಾದವನ್ನು ಒಂದು ಗುಂಪು ಮುಂದಿಟ್ಟಿದೆ. ಇದರ ಜತೆಗೆ ಹಿಂದುತ್ವವನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿಗೆ ತಕ್ಕ ಸ್ಪರ್ಧೆ ನೀಡಲು, ಹಿಂದುತ್ವದ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿರುವ ಅಭ್ಯರ್ಥಿಗೆ ಟಿಕೆಟ್‌ ನೀಡಬೇಕು ಎನ್ನುವ ಲೆಕ್ಕಾಚಾರವೂ ನಡೆಯುತ್ತಿದೆ. ಇದರ ಜತೆಗೆ ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಪ್ರಾತಿನಿಧ್ಯ ಕೊಡಬೇಕು ಎನ್ನುವ ಬೇಡಿಕೆಯೂ ಎದುರಾಗಿದೆ.

ದಿನೇ ದಿನೇ ಕಗ್ಗಂಟಾಗುತ್ತಿರುವ ಅಭ್ಯರ್ಥಿಯ ಆಯ್ಕೆಯನ್ನು ಅಂತಿಮಗೊಳಿಸಲು ಇದೀಗ ಕಾಂಗ್ರೆಸ್ ವೇದಿಕೆ ನಿರ್ಮಿಸಿದ್ದು, ಎಲ್ಲ ಆಕಾಂಕ್ಷಿಗಳನ್ನು ದೆಹಲಿಗೆ ಕರೆಯಿಸಿಕೊಳ್ಳಲಾಗಿದೆ. ಆಕಾಂಕ್ಷಿಗಳಾಗಿರುವ ಬಿ. ರಮಾನಾಥ ರೈ, ಮಿಥುನ್ ರೈ, ವಿನಯ್ ಕುಮಾರ್ ಸೊರಕೆ, ರಾಜೇಂದ್ರ ಕುಮಾರ್, ಬಿ.ಕೆ. ಹರಿಪ್ರಸಾದ್, ಕಣಚೂರು ಮೋನು, ಮಮತಾ ಗಟ್ಟಿ, ಮೊಹಿಯುದ್ದೀನ್‌ ಬಾವ ಈಗಾಗಲೇ ದೆಹಲಿಗೆ ತೆರಳಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಹಾಗೂ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ. ಹರೀಶ್‌ಕುಮಾರ್‌ ನೇತೃತ್ವ ವಹಿಸಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬಿಲ್ಲವರ ಕೋಟಾದಡಿ ವಿನಯಕುಮಾರ್ ಸೊರಕೆ ಹಾಗೂ ಬಿ.ಕೆ. ಹರಿಪ್ರಸಾದ್‌ ಅವರ ಮಧ್ಯೆ ಸ್ಪರ್ಧೆ ನಡೆಯುತ್ತಿದೆ. ಇನ್ನೊಂದೆಡೆ ಯುವ ನಾಯಕ, ಹಿಂದೂ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಯುವ ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಮಿಥುನ್‌ ರೈ ಬಗ್ಗೆಯೂ ಗಂಭೀರ ಚಿಂತನೆ ನಡೆಯುತ್ತಿದೆ.

ಈ ಮಧ್ಯೆ ಅಲ್ಪಸಂಖ್ಯಾತರ ಕೋಟಾದಡಿ ಈಗಾಗಲೇ ಕಣಚೂರು ಮೋನು ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದು, ಮಾಜಿ ಶಾಸಕ ಮೊಹಿಯುದ್ದೀನ್‌ ಬಾವ ಕೂಡ ಟಿಕೆಟ್‌ಗಾಗಿ ಪೈಪೋಟಿ ನಡೆಸಿದ್ದಾರೆ. ಇನ್ನು ಮಹಿಳೆಯರ ಕೋಟಾದಡಿ ಮಮತಾ ಗಟ್ಟಿ ಅವರನ್ನು ಪರಿಗಣಿಸಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ದಕ್ಷಿಣ ಕನ್ನಡ ಕ್ಷೇತ್ರದಿಂದ ಯಾರಿಗೆ ಟಿಕೆಟ್‌ ನೀಡಿದರೆ ಗೆಲುವು ಸಾಧಿಸಬಹುದು ಎನ್ನುವ ಮಾಹಿತಿಯನ್ನು ಕ್ರೋಡಿಕರಿಸಲಾಗುತ್ತಿದ್ದು, ಟಿಕೆಟ್‌ ಹಂಚಿಕೆಯ ವಿಷಯದಲ್ಲಿ ಯಾರೊಬ್ಬರಿಗೂ ಅಸಮಾಧಾನ ಆಗದಂತೆ ಮುಂಚೆಯೇ ಚರ್ಚಿಸಿ ನಿರ್ಧಾರ ಕೈಗೊಳ್ಳುವ ದೃಷ್ಟಿಯಿಂದ ಎಲ್ಲ ಆಕಾಂಕ್ಷಿಗಳನ್ನು ದೆಹಲಿಗೆ ಕರೆಯಿಸಿಕೊಳ್ಳಲಾಗಿದೆ.

ಈ ಬಾರಿ ದಕ್ಷಿಣ ಕನ್ನಡ ಕ್ಷೇತ್ರವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮತ್ತೆ ಕಾಂಗ್ರೆಸ್‌ ಜಯಗಳಿಸಬೇಕು. ಅದಕ್ಕಾಗಿ ಅಗತ್ಯ ಕಾರ್ಯತಂತ್ರ ರೂಪಿಸಲಾಗುವುದು. ಎಲ್ಲರ ಜತೆಗೆ ಚರ್ಚಿಸಿಯೇ ಅಭ್ಯರ್ಥಿಯನ್ನು ಅಂತಿಮ ಮಾಡಲಾಗುವುದು. ಈ ನಿಟ್ಟಿನಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರ ಜತೆಗೆ ಚರ್ಚಿಸಲು ಎಲ್ಲ ಆಕಾಂಕ್ಷಿಗಳು, ನಾಯಕರು ದೆಹಲಿಗೆ ತೆರಳಿರುವುದಾಗಿ ಸಚಿವ ಯು.ಟಿ. ಖಾದರ್‌ ಹೇಳಿದ್ದಾರೆ.

ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೂಡ ದೆಹಲಿಗೆ ತೆರಳಿದ್ದು, ಶುಕ್ರವಾರ ಅಭ್ಯರ್ಥಿಯ ಆಯ್ಕೆ ಅಂತಿಮವಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !