ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಲ್ಲಿ ಈಜಾಡುತ್ತಿದ್ದ ಹುಲಿ ಸೆರೆ

ಬಾಳೆಲೆ ಬಳಿಯ ಸುಳುಗೋಡು: ಮೈಸೂರು ಮೃಗಾಲಯಕ್ಕೆ ರವಾನೆ
Last Updated 16 ಮಾರ್ಚ್ 2020, 14:57 IST
ಅಕ್ಷರ ಗಾತ್ರ

ಗೋಣಿಕೊಪ್ಪಲು: ಬಾಳೆಲೆ ಬಳಿಯ ಸುಳುಗೋಡಿನ ಅರಣ್ಯದಂಚಿನ ಕೆರೆಯಲ್ಲಿ ನೀರು ಕುಡಿಯುತ್ತಿದ್ದ ಹುಲಿಯನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ಸೆರೆ ಹಿಡಿದು ಮೈಸೂರಿನ ಮೃಗಾಲಯಕ್ಕೆ ಸಾಗಿಸಿದ್ದಾರೆ.

ಹುಲಿಯ ಸೊಂಟದ ಭಾಗಕ್ಕೆ ಪೆಟ್ಟಾಗಿದ್ದು ಮೃಗಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿತಿಮತಿ ಎಸಿಎಫ್ ಶ್ರೀಪತಿ ತಿಳಿಸಿದ್ದಾರೆ.

ನಾಗರಹೊಳೆ ಅರಣ್ಯದ ಅಂಚಿನಲ್ಲಿರುವ ಕಾಫಿ ತೋಟದ ಕೆರೆಯಲ್ಲಿ ಹುಲಿ ಈಜಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿತ್ತು ಎನ್ನಲಾಗಿದೆ. ಈ ಸಂದರ್ಭದಲ್ಲಿ ಹಸು
ವನ್ನು ಶನಿವಾರ ಬೆಳಿಗ್ಗೆ 10 ಗಂಟೆ ವೇಳೆಯಲ್ಲಿ ಗದ್ದೆಗೆ ಮೇಯಲು ಕಟ್ಟಿ ಹಾಕುತ್ತಿದ್ದ ಪಾಸುರ ಕಾಶಿ ಕಾರ್ಯಪ್ಪ ನೋಡಿದ್ದಾರೆ.

ಹುಲಿ ಕಂಡು ಭಯಭೀತರಾದ ಕಾರ್ಯಪ್ಪ ಹಸುವನ್ನು ಗದ್ದೆಯಲ್ಲಿ ಕಟ್ಟಿ ಹಾಕದೆ ಕೊಟ್ಟಿಗೆಗೆ ಮರಳಿ ತಂದಿದ್ದಾರೆ. ಬಳಿಕ ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ. ಸ್ಥಳಕ್ಕೆ ಧಾವಿಸಿದ ತಿತಿಮತಿ ಎಸಿಎಫ್ ಶ್ರೀಪತಿ, ಮತ್ತಿಗೋಡು ವನ್ಯಜೀವಿ ವಿಭಾಗದ ವಲಯ ಅರಣ್ಯಾಧಿಕಾರಿ ಶಿವಾನಂದ್ ಲಿಂಗಾಣಿ, ತಿತಿಮತಿ ವಲಯ ಅರಣ್ಯಾಧಿಕಾರಿ ಅಶೋಕ್ ಹುನುಗುಂದ ಹಾಗೂ ಸಿಬ್ಬಂದಿ ವರ್ಗದವರು ಹುಲಿ ಸೆರೆ ಹಿಡಿಯಲು ಮುಂದಾದರು.

ಅರಣ್ಯ ಸಿಬ್ಬಂದಿಗಳನ್ನು ನೋಡಿದ ಹುಲಿ ಕೆರೆಯಿಂದ ಮೇಲೆ ಬಂದು ಕಾಫಿ ತೋಟದೊಳಗೆ ಮರೆಯಾಯಿತು. ಬಹಳ ಸೂಕ್ಷ್ಮತೆಯಿಂದ ಕಾರ್ಯಾಚರಣೆ ನಡೆಸಿದ ಅರಣ್ಯಾಧಿಕಾರಿಗಳು ಕಾಫಿ ತೋಟದೊಳಗೆ ಸುಳಿದಾಡುತ್ತಿದ್ದ ಹುಲಿಗೆ ಅರವಳಿಕೆ ಚುಚ್ಚು ಮದ್ದು ನೀಡಿ ಪ್ರಜ್ಞೆ ತಪ್ಪಿಸಿದರು. ಬಹಳ ಹೊತ್ತಿನ ಬಳಿಕ ಬಿದ್ದ ಹುಲಿಯನ್ನು ಅರಣ್ಯ ಸಿಬ್ಬಂದಿಗಳು ನೆಟ್‌ನಲ್ಲಿ ಬಂಧಿಸಿ ಹೊರಗೆ ಹೊತ್ತು ತಂದರು.

ಅಂದಾಜು 8ವರ್ಷ ಗಂಡು ಹುಲಿ ಇದಾಗಿದೆ. ಹುಲಿಯ ಸೊಂಟಕ್ಕೆ ಗಾಯವಾಗಿದ್ದು ಪ್ರಾಯಶಃ ಗಾಯ ವಾಸಿ ಮಾಡಿಕೊಳ್ಳಲು ಕೆರೆಯಲ್ಲಿ ಬಿದ್ದಿತ್ತು ಎನ್ನಲಾಗಿದೆ ಎಂದರು.

ನಾಗರಹೊಳೆ ಅರಣ್ಯದಿಂದ ಕಾಫಿ ತೋಟದತ್ತ ಬರುವ ಹುಲಿಗಳು ಮೂರು ತಿಂಗಳಿನಿಂದ 30ಕ್ಕೂ ಹೆಚ್ಚಿನ ಜಾನುವಾರುಗಳನ್ನು ಬಲಿ ತೆಗೆದುಕೊಂಡಿವೆ. ಕಾನೂರು, ನಾಲ್ಕೇರಿ, ಬಿರುನಾಣಿ, ಟಿ. ಶೆಟ್ಟಿಗೇರಿ, ಶ್ರೀಮಂಗಲ ಭಾಗಗಳಲ್ಲಿ ಹುಲಿ ದಾಳಿ ಅತಿಯಾಗಿದ್ದು ಅರಣ್ಯ ಇಲಾಖೆ ಸಿಬ್ಬಂದಿಗಳು ಹುಲಿ ಸೆರೆಗೆ ಬೋನಿಟ್ಟು ಹಗಲು ರಾತ್ರಿ ಕಾಯುತ್ತಿವೆ. ಆದರೆ, ಹುಲಿ ಮಾತ್ರ ಬೋನಿಗೆ ಬೀಳುತ್ತಿಲ್ಲ. ಇದೀಗ ಸರೆಯಾಗಿರುವ ಹುಲಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿತ್ತು ಎಂಬುದರ ಬಗ್ಗೆ ಮಾಹಿತಿಯಿಲ್ಲ ಎಂದು ಅರಣ್ಯಾಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT