ಗುರುವಾರ , ನವೆಂಬರ್ 14, 2019
19 °C
ಎಂ.ಎ., ಪಿಎಚ್‌.ಡಿ. ಪದವಿ ಹಿಂಪಡೆದ ಆದೇಶ ರದ್ದತಿ ಕೋರಿ ಅರ್ಜಿ

ಪತ್ರಕರ್ತ ಹಕೀಂ ಮನವಿ ವಜಾ

Published:
Updated:
Prajavani

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯವು ಎಂ.ಎ., ಪಿಎಚ್‌.ಡಿ. ಪದವಿ ಹಿಂಪಡೆದ ಆದೇಶ ರದ್ದುಗೊಳಿಸುವಂತೆ ಕೋರಿ ಪತ್ರಕರ್ತ ಅಬ್ದುಲ್‌ ಹಕೀಂ ಅವರು ಸಲ್ಲಿಸಿದ್ದ ಮನವಿಯನ್ನು ರಾಜ್ಯಪಾಲರು  ವಜಾಗೊಳಿಸಿದ್ದಾರೆ.

‘ಹಂಪಿ ಕನ್ನಡ ವಿಶ್ವವಿದ್ಯಾಲಯವು ಸ್ವಾಯತ್ತ ಸಂಸ್ಥೆಯಾಗಿದ್ದು, ತನ್ನದೇ ಆದ ಕಾಯ್ದೆ ಹೊಂದಿದೆ. ಹೀಗಿರುವಾಗ ನಿಮ್ಮ ಮನವಿ ಪರಿಶೀಲಿಸಲು ಆಗುವುದಿಲ್ಲ’ ಎಂದು ರಾಜ್ಯಪಾಲರ ಸಚಿವಾಲಯದ ಅಧೀನ ಕಾರ್ಯದರ್ಶಿ ಪ್ರತಿಭಾ ಡಿ. ಹಬ್ಬು ಅವರು ಅಬ್ದುಲ್‌ ಹಕೀಂ ಅವರ ಮನವಿಗೆ ಕೊಟ್ಟಿರುವ ಹಿಂಬರಹದಲ್ಲಿ ಪ್ರತಿಕ್ರಿಯಿಸಿದ್ದಾರೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಹಕೀಂ ಅವರು ಖೊಟ್ಟಿ ಅಂಕ ಪಟ್ಟಿ ಸಲ್ಲಿಸಿ ಹಂಪಿ ಕನ್ನಡ ವಿಶ್ವವಿದ್ಯಾಲಯದಿಂದ ಎಂ.ಎ., ಪಿಎಚ್‌.ಡಿ. ಪೂರ್ಣಗೊಳಿಸಿದ್ದಾರೆ ಎಂದು ಕುಲಸಚಿವ ಎ. ಸುಬ್ಬಣ್ಣ ರೈ ಅವರು ಜೂ. 28ರಂದು ತಾಲ್ಲೂಕಿನ ಕಮಲಾಪುರ ಪೊಲೀಸ್‌ ಠಾಣೆಗೆ ಕೊಟ್ಟಿರುವ ದೂರಿನ ಅನ್ವಯ ಐ.ಪಿ.ಸಿ. ಕಲಂ 464, 465, 468, 470, 474, 417, 420, 504, 506ರ ಅಡಿ ಪ್ರಕರಣ ದಾಖಲಾಗಿದೆ.

ಹಕೀಂ ಅವರು ಉತ್ತರ ಪ್ರದೇಶದ ಝಾನ್ಸಿ ಬುಂದೇಲ್‌ ಖಂಡ್‌ ವಿಶ್ವವಿದ್ಯಾಲಯದ ಪದವಿ ಖೊಟ್ಟಿ ದಾಖಲೆಗಳನ್ನು ಕನ್ನಡ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿ, 2012–13ರಲ್ಲಿ ಎಂ.ಎ ಪತ್ರಿಕೋದ್ಯಮ (ದೂರಶಿಕ್ಷಣ) ಹಾಗೂ 2014–15ರಲ್ಲಿ ಅಭಿವೃದ್ಧಿ ಅಧ್ಯಯನ ವಿಭಾಗದಲ್ಲಿ ಪಿಎಚ್‌.ಡಿ. ಮುಗಿಸಿದ್ದರು. ಕುವೆಂಪು ವಿಶ್ವವಿದ್ಯಾಲಯದಲ್ಲಿ ಇದೇ ಖೊಟ್ಟಿ ದಾಖಲೆಗಳನ್ನು ಕೊಟ್ಟು ಎಂ.ಎ. ಪೂರ್ಣಗೊಳಿಸಿದ್ದರು.

ಈ ವಿಷಯದ ಕುರಿತು ಕನ್ನಡ ವಿಶ್ವವಿದ್ಯಾಲಯದ ಸಿಂಡಿಕೇಟ್‌ ಸಭೆಯಲ್ಲಿ ಚರ್ಚಿಸಿ, ಜೂ.28ರಂದು ಹಕೀಂ ವಿರುದ್ಧ ಠಾಣೆಗೆ ದೂರು ಕೊಡಲಾಯಿತು. ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ಎಂ.ಎ., ಪಿಎಚ್‌.ಡಿ. ಪದವಿಯನ್ನು ರದ್ದುಗೊಳಿಸಲಾಯಿತು.

ಪ್ರತಿಕ್ರಿಯಿಸಿ (+)