ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ.ಟಿ. ರವಿ ಅಪಘಾತ ಪ್ರಕರಣ: ಪ್ರವಾಸಕ್ಕೆ ಹೋದವರು ಹೆಣವಾಗಿ ಬಂದರು

Last Updated 19 ಫೆಬ್ರುವರಿ 2019, 12:02 IST
ಅಕ್ಷರ ಗಾತ್ರ

ರಾಮನಗರ: ಪ್ರವಾಸಕ್ಕೆಂದು ತೆರಳಿದ್ದ ಇಬ್ಬರು ಯುವಕರು ಮಂಗಳವಾರ ಶವವಾಗಿ ಊರಿಗೆ ಬಂದಿದ್ದು, ಕನಕಪುರ ತಾಲ್ಲೂಕಿನ ಸೂರನಹಳ್ಳಿ ಗ್ರಾಮದಲ್ಲಿ ಸ್ಮಶಾನ ಮೌನ ಮನೆ ಮಾಡಿತ್ತು.

ಕುಣಿಗಲ್‌ ತಾಲ್ಲೂಕಿನ ಉರ್ಕೇಹಳ್ಳಿ ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೋಮವಾರ ತಡರಾತ್ರಿ ಚಿಕ್ಕಮಗಳೂರು ಶಾಸಕ ಸಿ.ಟಿ. ರವಿ ಅವರ ಕಾರ್ ಡಿಕ್ಕಿಯಾಗಿ ಮೃತಪಟ್ಟ ಸುನಿಲ್‌ ಗೌಡ (28) ಹಾಗೂ ಶಶಿಕುಮಾರ್‌ (30) ಇದೇ ಗ್ರಾಮದವರು.

ಆತ್ಮೀಯರಾಗಿದ್ದ ಈ ಇಬ್ಬರು ಉಳಿದ ಸ್ನೇಹಿತರ ಜೊತೆಗೂಡಿ ಪ್ರವಾಸಕ್ಕೆ ತೆರಳಿದ್ದರು. ಶೃಂಗೇರಿ, ಹೊರನಾಡು, ಕುಂದಾಪುರ ಪ್ರವಾಸ ಮುಗಿಸಿಕೊಂಡು ಕುಣಿಗಲ್ ಬಳಿ ಕಾರು ನಿಲ್ಲಿಸಿದ್ದಾಗ ಈ ಅಪಘಾತ ಸಂಭವಿಸಿತು.

ಸುನಿಲ್ ಸೂರನಹಳ್ಳಿ ಗ್ರಾಮದ ಹಾಲಿನ ಡೇರಿ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಅವರ ತಂದೆ ಪುಟ್ಟ ಬಸವೇಗೌಡ, ತಾಯಿ ಜಯಮ್ಮ. ಸುನಿಲ್‌ಗೆ ಇಬ್ಬರು ಸಹೋದರಿಯರೂ ಇದ್ದಾರೆ. ಕೃಷಿಯನ್ನೇ ನಂಬಿ ಈ ಕುಟುಂಬ ಬದುಕು ಸಾಗಿಸುತ್ತಿದೆ.
ಶಶಿಕುಮಾರ್ ತಂದೆ ಕೆಎಸ್‌ಆರ್‌ಟಿಸಿ ನಿವೃತ್ತ ನೌಕರ ಜಯರಾಮ್ ಹಾಗೂ ತಾಯಿ ಪಂಕಜಾ. ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಶಶಿಕುಮರ್ ಮನೆಗೆ ಹಿರಿಯ ಮಗನಾಗಿದ್ದರು.

‘ಮಗ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಸ್ನೇಹಿತರ ಜೊತೆಗೂಡಿ ಪ್ರವಾಸಕ್ಕೆ ಹೋಗಿದ್ದ. ದೇವಸ್ಥಾನಕ್ಕೆ ಹೋದವನು ಹೆಣವಾಗಿ ಬರುತ್ತಾನೆ ಎಂದು ಕನಸು–ಮನಸಿನಲ್ಲೂ ಎಣಿಸಿರಲಿಲ್ಲ. ಇಂತಹ ಮಕ್ಕಳ ಮೇಲೆ ಕಾರು ಹರಿಸಿದ ಶಾಸಕರು ಹೊಟ್ಟೆಗೆ ಏನು ತಿನ್ನುತ್ತಾರೆ’ ಎಂದು ಶಶಿಕುಮಾರ್ ತಂದೆ ಜಯರಾಂ ಸಿಟ್ಟು ಹೊರಹಾಕಿದರು.

‘ಶಶಿಕುಮಾರ್ ಹಾಗೂ ನಮ್ಮಣ್ಣ ಇಬ್ಬರು ಸ್ನೇಹಿತರು. ನಮ್ಮ ಮನೆಯಲ್ಲಿ ಊಟ ಮಾಡಿಕೊಂಡೇ ಶಶಿಕುಮಾರ್ ಬೆಳೆದಿದ್ದರು. ಈಗ ಇಬ್ಬರೂ ಒಟ್ಟಿಗೆ ತೀರಿಕೊಂಡಿದ್ದು, ನಮ್ಮ ಮನೆ ಸ್ಮಶಾನವಾಗಿದೆ. ನನಗೆ ನನ್ನ ಅಣ್ಣ ಬೇಕು. ಅಪಘಾತ ಮಾಡಿದವರಿಗೆ ಶಿಕ್ಷೆಯಾಗಬೇಕು’ ಎಂದು ಸನುಲ್‌ ಸಹೋದರಿ ಅನುಷಾ ಕಣ್ಣೀರು ಹಾಕಿದರು.

ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಶವಗಳನ್ನು ಗ್ರಾಮಕ್ಕೆ ತರಲಾಯಿತು. ಸಂಜೆ ಅಂತ್ಯಕ್ರಿಯೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT