ಶನಿವಾರ, ಮೇ 21, 2022
19 °C

ನಟ ದರ್ಶನ್‌ ಪ್ರಯಾಣಿಸುತ್ತಿದ್ದ ಕಾರು ಅಪಘಾತ; ಮೈಸೂರಿನಲ್ಲಿ ಚಿಕಿತ್ಸೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು: ಸೋಮವಾರ ಮುಂಜಾನೆ ನಟ ದರ್ಶನ್‌ ಸೇರಿದಂತೆ ಮೂವರು ನಟರು ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. 

ನಟ ದರ್ಶನ್‌, ದೇವರಾಜ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಪ್ರಯಾಣಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಗುದ್ದಿದ್ದು, ದರ್ಶನ್‌ ಗಾಯಗೊಂಡಿರುವುದಾಗಿ ತಿಳಿದು ಬಂದಿದೆ.

ಮೈಸೂರು ಹೊರವಲಯದ ರಿಂಗ್ ರೋಡ್‌ನ ಹಿನಕಲ್‌ ಬಳಿ ಮುಂಜಾನೆ 3 ಗಂಟೆಗೆ ಅಪಘಾತ ಸಂಭವಿಸಿದೆ. ದರ್ಶನ್ ಅವರ ಕೈಗೆ ಗಾಯವಾಗಿದ್ದು, ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದೇವರಾಜ್‌, ಪ್ರಜ್ವಲ್ ದೇವರಾಜ್ ಹಾಗೂ ಕಾರು ಚಾಲಕ ಸಹ ಅಪಘಾತದಲ್ಲಿ ಗಾಯಗೊಂಡಿದ್ದಾರೆ.

ನಟರು ಒಡೆಯ ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಅರಮನೆಯಲ್ಲಿ ಮಾವುತ ಮತ್ತು ಕಾವಾಡಿಗಳಿಗೆ ಭಾನುವಾರಷ್ಟೇ ಊಟ ಹಾಕಿಸಿದ್ದ ದರ್ಶನ್ ನಸುಕಿನಲ್ಲಿ ಕಾರಿನಲ್ಲಿ ಹೊರಟಿದ್ದರು. 

ಇನ್ನಷ್ಟು: ದಿನವಿಡೀ ವನ್ಯಜೀವಿಗಳ ಒಡನಾಟದಲ್ಲಿ ಸಮಯ ಕಳೆದಿದ್ದ ದರ್ಶನ್

(ಆಸ್ಪತ್ರೆಯಲ್ಲಿ ಕೊಠಡಿಯ ಹೊರಗೆ ಕುಳಿತು ಕಾಯುತ್ತಿರುವ ಪ್ರಣವ್ ದೇವರಾಜ್)

ನಟ ದರ್ಶನ್ ಕಾರು ಅಪಘಾತಕ್ಕೀಡಾಗಿರುವ ಕುರಿತು ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಹಾಗೂ ಮೈಸೂರು ಗ್ರಾಮಾಂತರ, ವಿ.ವಿ.ಪುರಂ ಸಂಚಾರ ಠಾಣಾ ಪೊಲೀಸರಿಗೆ ಯಾವುದೇ ಮಾಹಿತಿ ಇಲ್ಲ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಸಹ ಆಸ್ಪತ್ರೆಗೆ ಬಂದಿದ್ದಾರೆ. 

ದೇವರಾಜ್ ಅವರಿಗೆ ಕುತ್ತಿಗೆ ಹಾಗೂ ಎದೆಯ ಮಧ್ಯೆ ಪೆಟ್ಟಾಗಿದ್ದು, ಮೂಳೆ ಮುರಿದಿದೆ ಎಂದು ಆಪ್ತೆರೊಬ್ಬರು ತಿಳಿಸಿದ್ದಾರೆ. ಶಸ್ತ್ರಚಿಕಿತ್ಸೆ ನಡೆಸಬೇಕಿದೆ ಎಂದು ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ ಭಾರಿ ಗೋಪ್ಯತೆ ಕಾಪಾಡಿಕೊಳ್ಳಲಾಗುತ್ತಿದೆ.

ಯಜಮಾನ ಚಿತ್ರದ ಫಸ್ಟ್ ಲುಕ್‌ನ್ನು ದರ್ಶನ್‌ ಭಾನುವಾರ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಪಘಾತದ ಕುರಿತು ಅಭಿಮಾನಿಗಳಿಗೆ ಯಾವುದೇ ಸಂದೇಶ ಟ್ವೀಟಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು