ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳೂರು| ರನ್‌ವೇಯಿಂದ ಜಾರಿದ ವಿಮಾನ, ಸ್ವಲ್ಪದರಲ್ಲೇ ತಪ್ಪಿದ ದುರಂತ

ಆಂತರಿಕ ತನಿಖೆಗೆ ಆದೇಶ
Last Updated 1 ಜುಲೈ 2019, 0:59 IST
ಅಕ್ಷರ ಗಾತ್ರ

ಮಂಗಳೂರು: ದುಬೈನಿಂದ ಬಂದಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ, ಭಾನುವಾರ ಸಂಜೆ 5.40ಕ್ಕೆ ರನ್‌ವೇಯಿಂದ ಜಾರಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.

ದುಬೈಯಿಂದ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್-308 ವಿಮಾನ, ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಸಂಜೆ 5.40ರ ವೇಳೆಗೆ ಸುಮಾರಿಗೆ ರನ್‍ವೇ ಬಿಟ್ಟು ಪಕ್ಕಕ್ಕೆ ಚಲಿಸಿದ್ದು, ಗಾಲಿಗಳು ಮಣ್ಣಲ್ಲಿ ಸಿಕ್ಕಿದ್ದವು. ಸಂಭಾವ್ಯ ಅನಾಹುತ ತಪ್ಪಿದಂತಾಗಿದೆ.

ಇದೀಗ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಸುರಕ್ಷಿತ ಹಾರಾಟದ ಕುರಿತು ಆತಂಕ ವ್ಯಕ್ತವಾಗುತ್ತಿದೆ. ಈ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಒತ್ತಾಯಿಸಿದ್ದಾರೆ. ಈ ಕುರಿತು ಏರ್‌ ಇಂಡಿಯಾ ಆಂತರಿಕ ತನಿಖೆಗೆ ಆದೇಶಿಸಿದೆ.

‘ವಿಮಾನದಲ್ಲಿ 183 ಪ್ರಯಾಣಿಕರು ಹಾಗೂ 6 ಜನ ಸಿಬ್ಬಂದಿ ಸೇರಿದಂತೆ ಒಟ್ಟು 189 ಜನರಿದ್ದರು. ಎಲ್ಲರನ್ನೂ ಸುರಕ್ಷಿತವಾಗಿ ವಿಮಾನ ನಿಲ್ದಾಣಕ್ಕೆ ಕರೆ ತರಲಾಗಿದೆ’ ಎಂದು ವಿಮಾನ ನಿಲ್ದಾಣದ ನಿರ್ದೇಶಕ ವಿ.ವಿ. ರಾವ್‌ ತಿಳಿಸಿದ್ದಾರೆ.

‘ವಿಮಾನ ಸುರಕ್ಷಿತವಾಗಿ ರನ್‌ವೇನಲ್ಲಿ ಇಳಿದಿದ್ದು, ಟ್ಯಾಕ್ಸಿ ವೇ ಮೂಲಕ ಟರ್ಮಿನಲ್‍ನತ್ತ ಸಾಗುತ್ತಿದ್ದಾಗ ಏಕಾಏಕಿಯಾಗಿ ರನ್‍ವೇ ಬಿಟ್ಟು ಪಕ್ಕಕ್ಕೆ ಸರಿದಿದೆ. ಅತಿಯಾದ ವೇಗದಿಂದ ಈ ರೀತಿಯಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ವಿಮಾನಕ್ಕೂ ಯಾವುದೇ ಹಾನಿಯಾಗಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಏರ್‌ ಟ್ರಾಫಿಕ್‌ ಕಂಟ್ರೋಲ್‌ರ ತಪಾಸಣೆ ನಡೆಸಿದ್ದು, ಯಾವುದೇ ವಿಮಾನಗಳ ಹಾರಾಟಕ್ಕೆ ತೊಂದರೆ ಉಂಟಾಗಿಲ್ಲ ಎಂದು ತಿಳಿಸಿದ್ದಾರೆ.

ತನಿಖೆಗೆ ಆದೇಶ: ಏರ್‌ ಇಂಡಿಯಾ ವಿಮಾನ ರನ್‌ವೇಯಿಂದ ಜಾರಿರುವ ಕುರಿತು ಆಂತರಿಕ ತನಿಖೆಗೆ ಆದೇಶ ನೀಡಲಾಗಿದೆ ಎಂದು ಏರ್‌ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ಘಟನೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯದ ಮಹಾ ನಿರ್ದೇಶಕರ ಗಮನಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.

2010 ಮೇ 22ರಂದು ದುಬೈಯಿಂದ ಬಂದಿದ್ದ ವಿಮಾನ ದುರಂತಕ್ಕೀಡಾಗಿ, ಅದರಲ್ಲಿದ್ದ 158 ಮಂದಿ ಮೃತಪಟ್ಟಿದ್ದರು. 8 ಮಂದಿ ಪಾರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT