ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಐಎ: ಎರಡನೇ ರನ್‌ವೇ ಅಕ್ಟೋಬರ್‌ಗೆ ಸಿದ್ಧ

ವಿಮಾನ ನಿಲ್ದಾಣ ಅಭಿವೃದ್ಧಿಗೆ ₹13,000 ಕೋಟಿ ಯೋಜನೆ l 2ನೇ ಟರ್ಮಿನಲ್ 2021ಕ್ಕೆ ಸೇವೆಗೆ ಲಭ್ಯ
Last Updated 10 ಜನವರಿ 2019, 20:01 IST
ಅಕ್ಷರ ಗಾತ್ರ

ಬೆಂಗಳೂರು: ಕೆಂಪೇಗೌಡಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ವಿಮಾನಗಳ ಹಾರಾಟದ ದಟ್ಟಣೆ ತಗ್ಗಿಸುವ ಉದ್ದೇಶದಿಂದ ನಿರ್ಮಿಸಲಾಗುತ್ತಿರುವ ಎರಡನೇ ರನ್‌ವೇ ಕಾಮಗಾರಿ ಮುಕ್ತಾಯ ಹಂತದಲ್ಲಿದ್ದು, ಅಲ್ಲಿ ಅಕ್ಟೋಬರ್‌ 1ರಿಂದ ವಿಮಾನಗಳ ಟೇಕಾಫ್ ಹಾಗೂ ಲ್ಯಾಂಡಿಂಗ್‌ ಶುರುವಾಗಲಿದೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದಕೆಐಎ ಸಿಇಒ ಹರಿ ಮರಾರ್‌ ಅವರು ಈ ಮಾಹಿತಿ ನೀಡಿದರು. ‘ಎರಡನೇ ರನ್‌ವೇ ಆರಂಭವಾದರೆ, ವಿಮಾನಗಳ ಹಾರಾಟದ ಸಂಖ್ಯೆ ಹೆಚ್ಚಾಗಲಿದೆ. ಮೋಡ ಕವಿದ ವಾತಾವರಣದ ವೇಳೆಯಲ್ಲಿ ಈಗ ಆಗುತ್ತಿರುವ ವ್ಯತ್ಯಯವನ್ನೂ ತಪ್ಪಿಸಲು ಸಾಧ್ಯವಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.

‘2008ರಲ್ಲಿ 90 ಲಕ್ಷ ಪ್ರಯಾಣಿಕರು ನಿಲ್ದಾಣದಿಂದ ಪ್ರಯಾಣಿಸಿದ್ದರು. 2018ರಲ್ಲಿ ಆ ಸಂಖ್ಯೆ 2.70 ಕೋಟಿಗೆ ಏರಿದೆ.2028ರ ಹೊತ್ತಿಗೆ 8 ಕೋಟಿ ಪ್ರಯಾಣಿಕರು ನಿಲ್ದಾಣ ಬಳಸುವ ಸಾಧ್ಯತೆ ಇದೆ. ಹೀಗಾಗಿ, ನಿಲ್ದಾಣ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ ₹13,000 ಕೋಟಿ ವ್ಯಯಿಸಲಾಗುತ್ತಿದೆ’ ಎಂದು ತಿಳಿಸಿದರು.

ಮಾದರಿ ಟರ್ಮಿನಲ್–2:‘ಮೊದಲ ಟರ್ಮಿನಲ್ ಪಕ್ಕದಲ್ಲಿ 2ನೇ ಟರ್ಮಿನಲ್ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 2021ರ ಮಾರ್ಚ್‌ನಲ್ಲಿ ಆ ಟರ್ಮಿನಲ್ ಸೇವೆಗೆ ಲಭ್ಯವಾಗಲಿದೆ. 2ನೇ ಟರ್ಮಿನಲ್‌ನಲ್ಲಿ ಸಣ್ಣ ಅರಣ್ಯವನ್ನು ಸೃಷ್ಟಿಸುತ್ತಿದ್ದೇವೆ. ಕಾಮಗಾರಿ ಸ್ಥಳದಲ್ಲಿದ್ದ ಮರಗಳನ್ನು ಬುಡಸಮೇತ ತೆಗೆದು ಬೇರೆಡೆ ನೆಡಲಾಗಿದೆ’ ಎಂದು ಹೇಳಿದರು.

‘ನಿಲ್ದಾಣದಲ್ಲಿ ಮಳೆ ನೀರು ಸಂಗ್ರಹದ ವ್ಯವಸ್ಥೆ ಮಾಡಿದ್ದೇವೆ. ಸದ್ಯ ಶೇ 20ರಷ್ಟು ಮಳೆ ನೀರು ಬಳಕೆ ಆಗುತ್ತಿದೆ. ಟರ್ಮಿನಲ್‌–2 ಕಾರ್ಯಾರಂಭ ಮಾಡಿದ ಮೇಲೆ ನಿಲ್ದಾಣಕ್ಕೆ ಶೇ 100ರಷ್ಟು ಮಳೆ ನೀರನ್ನೇ ಬಳಸಲಿದ್ದೇವೆ. ಜೊತೆಗೆ, 70 ಎಕರೆ ಜಾಗದಲ್ಲಿ ಕೆರೆ ನಿರ್ಮಿಸಲಾಗುತ್ತಿದೆ. ಸೋಲಾರ್ ವ್ಯವಸ್ಥೆ ಸಹ ಇರಲಿದೆ’ ಎಂದು ಮರಾರ್‌ ವಿವರಿಸಿದರು.

‘ಸದ್ಯ 25 ಸಾವಿರ ಮಂದಿ ಕೆಐಎನಲ್ಲಿ ಕೆಲಸ ಮಾಡುತ್ತಿದ್ದಾರೆ. ಟರ್ಮಿನಲ್– 2 ಸಿದ್ಧವಾದರೆ, ಮತ್ತೆ 20 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿವೆ’ ಎಂದು ಹೇಳಿದರು.

ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ವ್ಯವಸ್ಥೆ: ‘ಟರ್ಮಿನಲ್–2 ಸೇವೆಗೆ ಲಭ್ಯವಾಗಲು ಎರಡು ವರ್ಷ ಬೇಕು. ಅಲ್ಲಿಯವರೆಗೂ ಪ್ರಯಾಣಿಕರ ದಟ್ಟಣೆ ನಿಯಂತ್ರಣಕ್ಕೆ ಹಲವು ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಬ್ಯಾಗ್‌ ಪರಿಶೀಲನೆಗಾಗಿ ಪ್ರಯಾಣಿಕರು ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸಲು, ಕೇವಲ 45 ಸೆಕೆಂಡ್‌ನಲ್ಲೇ ಬ್ಯಾಗ್‌ ಪರಿಶೀಲನೆ ಮಾಡುವ ವ್ಯವಸ್ಥೆ ಜಾರಿಗೆ ತರಲಾಗಿದೆ’ ಎಂದು ತಿಳಿಸಿದರು.

‘ಬೋರ್ಡಿಂಗ್ ಪಾಸ್‌ ಇಲ್ಲದೇ ನಿಲ್ದಾಣದೊಳಗೆ ಹೋಗಲು ಇ– ಗೇಟ್‌ ಹಾಕಲಾಗಿದೆ. ಜೊತೆಗೆ, ಪ್ರಯಾಣಿಕರ ತಪಾಸಣೆಗಾಗಿ ‘ಸ್ಮಾರ್ಟ್ ಸೆಕ್ಯುರಿಟಿ ಲೈನ್’ ವ್ಯವಸ್ಥೆಯನ್ನು ಸದ್ಯದಲ್ಲೇ ಜಾರಿಗೆ ತರಲಿದ್ದೇವೆ. ಅದರಿಂದ ತಪಾಸಣಾ ಸಮಯ ಶೇ 70ರಷ್ಟು ಕಡಿಮೆ ಆಗಲಿದೆ’ ಎಂದು ಹೇಳಿದರು.

‘ದಕ್ಷಿಣ ದಿಕ್ಕಿನಿಂದ ನಿಲ್ದಾಣಕ್ಕೆ ಬರುವ ಮಾರ್ಗದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ ವೈಟ್‌ಫೀಲ್ಡ್‌ ಹಾಗೂ ಸುತ್ತಮುತ್ತಲ ಪ್ರದೇಶಗಳ ಪ್ರಯಾಣಿಕರು ಸುತ್ತಿ ಬಳಸಿ ಬರುವುದು ತಪ್ಪಲಿದೆ’ ಎಂದು ತಿಳಿಸಿದರು.

ಎಕ್ಸ್‌ಪ್ರೆಸ್‌ ಕಾರ್ಗೊ: ‘ಇ–ಕಾಮರ್ಸ್ ವ್ಯವಹಾರ ಜಾಸ್ತಿ ಆಗಿದೆ. ಕಾರ್ಗೊ ವ್ಯವಸ್ಥೆಯಲ್ಲಿ ಎಕ್ಸ್‌ಪ್ರೆಸ್‌ ಸೇವೆಯನ್ನು ಪರಿಚಯಿಸಲಾಗುತ್ತಿದ್ದು, ಸದ್ಯದಲ್ಲೇ ಸೇವೆ ಆರಂಭವಾಗಲಿದೆ. ಇದರಿಂದ ಒಂದು ನಿಲ್ದಾಣದಿಂದ ಮತ್ತೊಂದು ನಿಲ್ದಾಣಕ್ಕೆ ತ್ವರಿತವಾಗಿ ವಸ್ತುಗಳು ಪೂರೈಕೆ ಆಗಲಿವೆ’ ಎಂದು ಅವರು ಹೇಳಿದರು.

**

‘ರೈಲು ನಿಲ್ದಾಣ ನಿರ್ಮಿಸಲು ನಾವು ಸಿದ್ಧ’

‘ಸಬ್‌ ಅರ್ಬನ್ ರೈಲು ಮಾರ್ಗವು ವಿಮಾನ ನಿಲ್ದಾಣ ಜಾಗದ ಗಡಿಗೆ ಹೊಂದಿಕೊಂಡು ಹಾದು ಹೋಗುತ್ತದೆ. ಆ ಭಾಗದಲ್ಲಿ ರೈಲು ನಿಲ್ದಾಣ ನಿರ್ಮಿಸಲು ನಾವು ಸಿದ್ಧರಿದ್ದೇವೆ’ ಎಂದು ಮರಾರ್‌ ಹೇಳಿದರು.

‘ಸಬ್‌ ಅರ್ಬನ್ ರೈಲು ಮಾರ್ಗ ಹಾಗೂ ನಿಲ್ದಾಣ ಅಭಿವೃದ್ಧಿಗಾಗಿ 5 ವರ್ಷಗಳ ಹಿಂದೆಯೇ ನಾವು ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ. ರೈಲು ನಿಲ್ದಾಣದಿಂದ ಟರ್ಮಿನಲ್‌ವರೆಗೆ ಬಸ್‌ ವ್ಯವಸ್ಥೆ ಕಲ್ಪಿಸಲು ಸಹ ಒಪ್ಪಿಗೆ ಸೂಚಿಸಿದ್ದೇವೆ. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದ ಆ ಯೋಜನೆ ನನೆಗುದಿಗೆ ಬಿದ್ದಿದೆ’ ಎಂದರು.

ಮೆಟ್ರೊಗೆ ₹1,000 ಕೋಟಿ ಬೇಕಂತೆ: ‘ನಿಲ್ದಾಣಕ್ಕೆ ಮೆಟ್ರೊ ಮಾರ್ಗ ಕಲ್ಪಿಸಿದರೆ ಪ್ರಯಾಣಿಕರಿಗೆ ಅನುಕೂಲ ಆಗಲಿದೆ. ಕೆಐಎ ಅಧೀನದ ಜಾಗದಲ್ಲಿ ಮೆಟ್ರೊ ನಿಲ್ದಾಣ ನಿರ್ಮಾಣಕ್ಕೆ ನಾವೇ ಹಣ ಕೊಡಲು ಸಿದ್ಧರಿದ್ದೇವೆ’ ಎಂದು ಹೇಳಿದರು.

‘ನಿಲ್ದಾಣಗಳ ನಿರ್ಮಾಣಕ್ಕೆ ₹1,000 ಕೋಟಿ ಬೇಕೆಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಅದಕ್ಕೆ ₹600 ಕೋಟಿ ಸಾಕು ಎಂಬುದು ನಮ್ಮ ಅಭಿಪ್ರಾಯ. ಅವರು ಕೇಳಿದಷ್ಟು ಹಣ ಹೇಗೆ ಕೊಡುವುದು’ ಎಂದು ಅವರು ಪ್ರಶ್ನಿಸಿದರು.

**

ಗಿಡಗಳ ಪೋಷಣೆ

2ನೇ ಟರ್ಮಿನಲ್‌ನಲ್ಲಿ ಸಾವಿರಾರು ಗಿಡಗಳನ್ನು ನೆಡಲಾಗುತ್ತಿದೆ. ಭವಿಷ್ಯದಲ್ಲಿ ಪಕ್ಷಿಗಳ ಕಾಟ ಹೆಚ್ಚಾಗಿ ನಿಲ್ದಾಣ ಗಲೀಜಾಗಬಹುದು. ಅದರ ಸ್ವಚ್ಛತೆಗೆ ಹೆಚ್ಚು ಖರ್ಚಾಗಬಹುದೆಂಬ ಕಾರಣಕ್ಕೆ ಹಣ್ಣು ಬಿಡದ ಗಿಡಗಳನ್ನಷ್ಟೇ ನೆಡಲು ಕೆಐಎ ಆಡಳಿತ ಮಂಡಳಿ ತೀರ್ಮಾನಿಸಿದೆ.

‘ಹಣ್ಣು ಬಿಡದ ಸ್ಥಳೀಯ ತಳಿಗಳ ಗಿಡಗಳನ್ನಷ್ಟೇ ನೆಡಲಿದ್ದೇವೆ’ ಎಂದು ಮರಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT