ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯ ಸಮ್ಮೇಳನ ವಸತಿ ವ್ಯವಸ್ಥೆಗೆ ಸಿದ್ಧತೆ; 15 ಸಾವಿರ ನೋಂದಣಿ ನಿರೀಕ್ಷೆ

84 ಹೋಟೆಲ್‌ಗಳ ಪಟ್ಟಿ
Last Updated 5 ಡಿಸೆಂಬರ್ 2018, 20:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: 84ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬರಲಿರುವ ಗಣ್ಯ ಅತಿಥಿಗಳು ಹಾಗೂ ನೋಂದಾಯಿತ ಸದಸ್ಯರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಜಿಲ್ಲಾಡಳಿತ ಸಿದ್ಧತೆ ಆರಂಭಿಸಿದೆ. ಆದರೆ, ಮೈ ನಡುಗಿಸುವ ಚಳಿ ಜಿಲ್ಲಾಡಳಿತಕ್ಕೆ ಸವಾಲೊಡ್ಡಿದೆ.

‘ಅಂದಾಜು 2,500 ಕೊಠಡಿಗಳು ಬೇಕಾಗುತ್ತವೆ’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಈಗಾಗಲೇ ಜಿಲ್ಲಾಡಳಿತಕ್ಕೆ ತಿಳಿಸಿದೆ. ಸಮ್ಮೇಳನಕ್ಕೆ ಬರುವವರಲ್ಲಿ ಸಾಹಿತಿಗಳು, ಆಹ್ವಾನಿತರು, ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ, ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳಿದ್ದಾರೆ. ಅವರಿಗೆ ಎ.ಸಿ, ನಾನ್‌ ಎ.ಸಿ, ಡಬಲ್‌– ಸಿಂಗಲ್‌ ಬೆಡ್‌ ರೂಮ್‌ ಹೀಗೆ ವಿವಿಧ ದರ್ಜೆಯ ಕೊಠಡಿಗಳನ್ನು ಒದಗಿಸುವಂತೆ ಕೋರಲಾಗಿದೆ.

ಹುಬ್ಬಳ್ಳಿ– ಧಾರವಾಡದಲ್ಲಿ 84 ಹೋಟೆಲ್‌ಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ ಎಷ್ಟು ಕೊಠಡಿಗಳಿವೆ? ಎಷ್ಟನ್ನು ಸಮ್ಮೇಳನದ ಪ್ರತಿನಿಧಿಗಳಿಗಾಗಿ ನೀಡಲು ಸಾಧ್ಯ ಎಂಬುದನ್ನು ತಿಳಿಸುವಂತೆ ಆಯಾ ಹೋಟೆಲ್‌ ಮಾಲೀಕರಿಗೆ ಈಗಾಗಲೇ ಪತ್ರ ಬರೆಯಲಾಗಿದೆ.

ವಸತಿ ಸಮಿತಿಯು ಹೋಟೆಲ್‌ ಮಾಲೀಕರ ಜತೆ ನಡೆಸಿದ ಸಭೆಯಲ್ಲಿ, ಕೊಠಡಿಗಳನ್ನು ಉಚಿತವಾಗಿ ನೀಡುವಂತೆ ಮನವಿ ಮಾಡಲಾಗಿತ್ತು. ಆದರೆ, ಸಂಪೂರ್ಣ ಉಚಿತವಾಗಿ ಕೊಡುವುದು ಕಷ್ಟ ಎಂದು ಮಾಲೀಕರು ಹೇಳಿದ್ದು, ರಿಯಾಯ್ತಿ ದರದಲ್ಲಿ ನೀಡುವುದಕ್ಕೆ ಸಮ್ಮತಿಸಿದ್ದಾರೆ ಎಂದು ಸಮ್ಮೇಳನದ ವಸತಿ ಮತ್ತು ಸಾರಿಗೆ ಸಮಿತಿ ಕಾರ್ಯಾಧ್ಯಕ್ಷ ಇಬ್ರಾಹಿಂ ಮೈಗೂರ ತಿಳಿಸಿದರು.

15 ಸಾವಿರ ನೋಂದಣಿ ನಿರೀಕ್ಷೆ: ಅಂದಾಜು 15 ಸಾವಿರ ಸಾಹಿತ್ಯಾಸಕ್ತರು ಹೆಸರು ನೋಂದಾಯಿಸಿಕೊಳ್ಳುವ ನಿರೀಕ್ಷೆ ಇದೆ. ಹೀಗಾಗಿ ಅಷ್ಟೂ ಮಂದಿಗೆ ಹೋಟೆಲ್‌ ಬದಲಿಗೆ, ಹಾಸ್ಟೆಲ್‌ಗಳಲ್ಲಿ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ, ಅವಳಿ ನಗರದ ಪ್ರಮುಖ ಕಲ್ಯಾಣ ಮಂಟಪಗಳಲ್ಲಿಯೂ ವಾಸ್ತವ್ಯಕ್ಕೆ ಅನುಕೂಲ ಮಾಡಲಾಗುತ್ತದೆ. ಎಲ್ಲೆಲ್ಲಿ ಎಷ್ಟು ಮಂದಿಗೆ ವ್ಯವಸ್ಥೆ ಮಾಡಬಹುದು ಎಂಬುದರ ಮಾಹಿತಿಯನ್ನೂ ಕಲೆಹಾಕ
ಲಾಗುತ್ತಿದೆ ಎಂದು ಮೈಗೂರ ತಿಳಿಸಿದರು.

ಚಳಿಯ ಸವಾಲು: ಜನವರಿ ಎರಡನೇ ವಾರದವರೆಗೂ ಚಳಿ ಇರುವುದರಿಂದ ವಸತಿ ವ್ಯವಸ್ಥೆ ಮಾಡುವ ಸವಾಲು ವಸತಿ ಸಮಿತಿ ಮುಂದಿದೆ. ಆ ವೇಳೆ, ತಾಪಮಾನ 15 ರಿಂದ 16 ಡಿಗ್ರಿ ಸೆಲ್ಸಿಯಸ್‌ ಇರಬಹುದು ಎಂದು ಹವಾಮಾನ ಇಲಾಖೆ ಮೂಲಗಳು ತಿಳಿಸಿವೆ.

ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವವರಿಗೆ ಚಳಿಯ ತೊಂದರೆ ಅಷ್ಟೊಂದು ಬಾಧಿಸದು. ಆದರೆ, ಹಾಸ್ಟೆಲ್ ಹಾಗೂ ಕಲ್ಯಾಣ ಮಂಟಪಗಳಲ್ಲಿ ವಾಸ್ತವ್ಯ ಮಾಡುವವರಿಗೆ ಹಾಸಿಗೆ, ಹೊದಿಕೆಯನ್ನೂ ಹೊಂದಿಸಬೇಕು. ಈ ಕುರಿತು ಮಾಡಬೇಕಾದ ವ್ಯವಸ್ಥೆ ಬಗ್ಗೆ ಇನ್ನಷ್ಟೇ ನಿರ್ಧಾರ ಆಗಬೇಕಿದೆ ಎಂದು ಅವರು ತಿಳಿಸಿದರು.

**

ಸಾಹಿತ್ಯ ಸಮ್ಮೇಳನ ನಮ್ಮೂರ ಹಬ್ಬವಾಗಿರುವುದರಿಂದ ರಿಯಾಯ್ತಿ ದರದಲ್ಲಿ ಕೊಠಡಿ ನೀಡಲು ಸಿದ್ಧರಿದ್ದೇವೆ. ಯಾವುದೇ ಕಾರಣಕ್ಕೂ ಕೊಠಡಿಗಳು ಖಾಲಿ ಉಳಿಸಬಾರದು
- ಕೃಷ್ಣಮೂರ್ತಿ ಉಚ್ಚಿಲ, ಅಧ್ಯಕ್ಷರು, ಹುಬ್ಬಳ್ಳಿ ಹೋಟೆಲ್‌ ಮಾಲೀಕರ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT