ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡಿಮೆ ದರದಲ್ಲಿ ಮದ್ಯ ಪೂರೈಕೆ: ಹೇಳಿಕೆ ಅಲ್ಲಗಳೆದ ಸಚಿವ ಎಚ್‌.ನಾಗೇಶ್‌

Last Updated 31 ಡಿಸೆಂಬರ್ 2019, 20:49 IST
ಅಕ್ಷರ ಗಾತ್ರ

ಬೆಂಗಳೂರು: ‘ಬಡ ಜನರಿಗೆ ಗುಣಮಟ್ಟದ ಮದ್ಯವನ್ನು ಕಡಿಮೆ ದರದಲ್ಲಿ ಪೂರೈಕೆ ಮಾಡುವ ಚಿಂತನೆ ಇದೆ’ ಎಂದುಅಬಕಾರಿ ಸಚಿವ ಎಚ್‌.ನಾಗೇಶ್‌ ಹೇಳಿಕೆ ನೀಡಿದ ಕೆಲವೇ ಸಮಯದ ಬಳಿಕ ತಮ್ಮ ಹೇಳಿಕೆಯಿಂದ ಅವರು ಹಿಂದಕ್ಕೆ ಸರಿದಿದ್ದಾರೆ.

‘ಕಡಿಮೆ ಗುಣಮಟ್ಟದ ಮದ್ಯ ಸೇವನೆ ಮಾಡಿ ಆರೋಗ್ಯ ಹಾಳು ಮಾಡಿಕೊಳ್ಳುವುದನ್ನು ತಡೆಯಲು ಗುಣಮಟ್ಟದ ಮದ್ಯ ಪೂರೈಕೆ ಮಾಡಬೇಕು ಎಂಬ ಚಿಂತನೆ ಇದೆ’ ಎಂದು ಅವರು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳಿಗೆ ಮಂಗಳವಾರ ಹೇಳಿದರು.

ಆ ಬಳಿಕ ಸ್ಪಷ್ಟನೆ ನೀಡಿದ ಅವರು, ‘ಕಡಿಮೆ ದರದಲ್ಲಿ ಉತ್ತಮ ಗುಣಮಟ್ಟದ ಮದ್ಯ ಪೂರೈಕೆಯ ಪ್ರಸ್ತಾಪ ಸರ್ಕಾರದ ಮುಂದಿಲ್ಲ’ ಎಂದು
ಸ್ಪಷ್ಟಪಡಿಸಿದ್ದಾರೆ.

ಹೊಸದಾಗಿ ಮದ್ಯದಂಗಡಿ ಆರಂಭಿಸಲು ಪರವಾನಗಿ ನೀಡಬೇಕು ಎಂಬ ಬೇಡಿಕೆ ಇದೆ. ಅಂತಹ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದರು.

ಈ ಸಾಲಿನಲ್ಲಿ ₹20,950 ಕೋಟಿ ಆದಾಯ ಸಂಗ್ರಹದ ಗುರಿ ನಿಗದಿ ಮಾಡಲಾಗಿತ್ತು. ಇಲ್ಲಿಯವರೆಗೆ ₹16,100 ಕೋಟಿ ಸಂಗ್ರಹವಾಗಿದೆ. ವಿತ್ತೀಯ ವರ್ಷದ ಮುಕ್ತಾಯದ ವೇಳೆಗೆ ಗುರಿಯನ್ನು ಮುಟ್ಟುವ ನಿರೀಕ್ಷೆ ಇದೆ. ಡಿಸೆಂಬರ್‌ನಲ್ಲಿ ಇಲ್ಲಿಯವರೆಗೆ ₹ 1,700 ಕೋಟಿ ಆದಾಯ ಬಂದಿದೆ ಎಂದರು.

‘ಆದಾಯ ಹೆಚ್ಚಿಸುವ ಉದ್ದೇಶದಿಂದ ಹಾಟ್‌ ಲಿಕ್ಕರ್‌ ಮಾರಾಟಕ್ಕೆ ಉತ್ತೇಜನ ನೀಡಲಾಗುತ್ತಿದೆ ಎಂಬ ದೂರಿನಲ್ಲಿ ಯಾವುದೇ ಹುರುಳಿಲ್ಲ. ಕೆಲವು ಅಧಿಕಾರಿಗಳು ಒತ್ತಡ ಹೇರುತ್ತಿದ್ದಾರೆ ಎಂಬ ಆರೋಪ ನನ್ನ ಗಮನಕ್ಕೂ ಬಂದಿದೆ. ಸರ್ಕಾರ ಒತ್ತಡ ಹೇರಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸಚಿವರ ಸ್ಪಷ್ಟನೆ: 'ಅಗ್ಗದ ಮದ್ಯ ಅಥವಾ ಸಬ್ಸಿಡಿ ದರದಲ್ಲಿ ಮದ್ಯ ಮಾರಾಟ ಮಾಡುವ ಯಾವುದೇ ಪ್ರಸ್ತಾವ ಸರ್ಕಾರದ ಮುಂದಿಲ್ಲ. ಇದಕ್ಕೆ ಹಿಂದಿನಿಂದಲೂ ಒತ್ತಾಯ ಇದೆ. ಮಾಧ್ಯಮಗೋಷ್ಠಿಯಲ್ಲಿ ನಾನು ಹೇಳಿದ ಮಾತುಗಳನ್ನು ಬೇರೆಯದೇ ರೀತಿಯಲ್ಲಿ ಬಿಂಬಿಸಲಾಗಿದೆ' ಎಂದು ಹೇಳಿದರು.

ಮಾರಾಟ ಸಮಯದಲ್ಲೂ ಯಡವಟ್ಟು
ಇನ್ನು ಮುಂದೆ ಮದ್ಯದಂಗಡಿಗಳು ರಾತ್ರಿ 2 ಗಂಟೆವರೆಗೆ ಕಾರ್ಯ ನಿರ್ವಹಿಸುತ್ತವೆ ಎಂದು ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದರು. ಬಳಿಕ ಹೇಳಿಕೆಯಲ್ಲಿ ಸಮಯ ಬದಲಿಸುವ ಪ್ರಸ್ತಾವನೆ ಇಲ್ಲ ಎಂದು ಸಮಜಾಯಿಷಿ ನೀಡಿದ್ದಾರೆ.

ಅಬಕಾರಿ ಇಲಾಖೆ ನಿಯಮದ ಪ್ರಕಾರ, ಸಿಎಲ್‌–2(ಎಂಆರ್‌ಪಿ ಔಟ್‌ಲೆಟ್‌ ಮತ್ತು ವೈನ್‌ ಸ್ಟೋರ್‌ಗಳು) ರಾತ್ರಿ 10.30 ರವರೆಗೆ, ಸಿಎಲ್‌ 9(ಬಾರ್‌ ಮತ್ತು ರೆಸ್ಟೋರೆಂಟ್‌ಗಳು) ಬೆಂಗಳೂರು ಕಮಿಷನರೇಟ್‌ ವ್ಯಾಪ್ತಿಯಲ್ಲಿ ರಾತ್ರಿ 1 ಗಂಟೆಯವರೆಗೆ ಮತ್ತು ಉಳಿದ ಕಡೆಗಳಲ್ಲಿ ರಾತ್ರಿ 11.30 ರವರೆಗೆ ತೆರೆಯಲು ಅವಕಾಶ ಇದೆ ಎಂದು ನಾಗೇಶ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT