ಗುರುವಾರ , ಡಿಸೆಂಬರ್ 5, 2019
20 °C
ಸಿಸಿಬಿಯಿಂದ ದೋಷಾರೋಪ ಪಟ್ಟಿ ಸಲ್ಲಿಕೆ

ಆ್ಯಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಯ ‘ಪಾರಿಜಾತ’ ಜ‍ಪ್ತಿಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗಣಿ ಉದ್ಯಮಿಯೂ ಆಗಿರುವ ಬಿಜೆಪಿ ಮುಖಂಡ ಗಾಲಿ ಜನಾರ್ದನ ರೆಡ್ಡಿಗೆ ಸೇರಿದ ₹5 ಕೋಟಿ ಮೌಲ್ಯದ ‘ಪಾರಿಜಾತ’ ನಿವಾಸವನ್ನು ‘ಆ್ಯಂಬಿಡೆಂಟ್ ಕಂಪನಿ ವಂಚನೆ’ ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಳ್ಳಲು ಸಿಸಿಬಿ ಮುಂದಾಗಿದೆ.

‘ಆ್ಯಂಬಿಡೆಂಟ್ ಕಂಪನಿ ವಂಚನೆ’ ಪ್ರಕರಣ ಸಂಬಂಧ ಸಿಸಿಬಿ, 1ನೇ ಸಿಸಿಎಚ್ ನ್ಯಾಯಾಲಯಕ್ಕೆ ಮಂಗಳವಾರ ದೋಷಾರೋಪ ಪಟ್ಟಿ ಸಲ್ಲಿಸಿದೆ.

ಕಂಪನಿಯಲ್ಲಿ ಹಣ ಹೂಡಿಕೆ ಮಾಡಿ ವಂಚನೆಗೀಡಾಗಿದ್ದ ಗ್ರಾಹಕರು ನೀಡಿದ್ದ ದೂರಿನನ್ವಯ ಡಿ.ಜೆ.ಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣದ ತನಿಖೆ ನಡೆಸಿದ್ದ ಸಿಸಿಬಿ ಪೊಲೀಸರು, ಆರೋಪಿಗಳಾದ ಕಂಪನಿಯ ನಿರ್ದೇಶಕರಾದ ಫರೀದ್‌, ಅಫಾಕ್, ಗಾಲಿ ಜನಾರ್ದನ ರೆಡ್ಡಿ ಸೇರಿದಂತೆ 10 ಮಂದಿ ವಿರುದ್ಧ ಪುರಾವೆಗಳನ್ನು ಸಂಗ್ರಹಿಸಿ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ.

‘ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದ 10,564 ಮಂದಿಗೆ 120 ಕೋಟಿ ವಂಚನೆ ಆಗಿದೆ’ ಎಂದು ಪೊಲೀಸರು ಹೇಳಿದ್ದು, ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು 12 ಸಂಪುಟಗಳಲ್ಲಿರುವ 4,800 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಲಗತ್ತಿಸಿದ್ದಾರೆ.

‘ಕಂಪನಿಯಲ್ಲಿ ಹಣ ಹೂಡಿಕೆ ಮಾಡಿದ್ದ ಹೂಡಿಕೆದಾರರ ಮಾಹಿತಿ ಸಂಗ್ರಹಿಸುವ ಕೆಲಸ ನಡೆದಿದೆ. ಇದುವರೆಗೂ 4,800 ಹೂಡಿಕೆದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದ್ದು, ಮತ್ತಷ್ಟು ಪುರಾವೆಗಳನ್ನು ಸಂಗ್ರಹಿಸಿ ಹೆಚ್ಚುವರಿ ದೋಷಾರೋಪ ಪಟ್ಟಿ ಸಲ್ಲಿಸಲಾಗುವುದು’ ಎಂದು ಹೇಳಿದ್ದಾರೆ. 

ಆರೋಪಿಗಳ ₹60 ಕೋಟಿ ಆಸ್ತಿ ಪತ್ತೆ: ‘ಆರೋಪಿಗಳಾದ ಇರ್ಫಾನ್ ಮಿರ್ಜಾ, ಗಾಲಿ ಜನಾರ್ದನ ರೆಡ್ಡಿ, ಮೆಹಫೂಜ್ ಅಲಿಖಾನ್, ಬಳ್ಳಾರಿ ರಮೇಶ್, ಇನಾಯತ್ ಉಲ್ಲಾ ವಹಾಬ್ ಮತ್ತು ಅಶ್ರಫ್ ಅಲಿ ಅವರನ್ನು ಬಂಧಿಸಲಾಗಿತ್ತು. ಅವರು ಜಾಮೀನು ಮೇಲೆ ಹೊರಬಂದಿದ್ದಾರೆ. ಪ್ರಮುಖ ಆರೋಪಿಗಳಾದ ಫರೀದ್ ಹಾಗೂ ಅಫಾಕ್, ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು’ ಎಂದು ಪೊಲೀಸರು ದೋಷಾರೋಪ ಪಟ್ಟಿಯಲ್ಲಿ ಹೇಳಿದ್ದಾರೆ.

‘ಆರೋಪಿಗಳ ₹60 ಕೋಟಿ ಆಸ್ತಿಯನ್ನು ಪತ್ತೆ ಹಚ್ಚಲಾಗಿದೆ. ‘ಕರ್ನಾಟಕ ಠೇವಣಿದಾರರ ಹಿತರಕ್ಷಣಾ ಕಾಯ್ದೆ’ ಅಡಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಕೋರಿ ಬೆಂಗಳೂರು ನಗರ ಉತ್ತರ ಉಪವಿಭಾಗದ ಸಹಾಯಕ ಆಯುಕ್ತ ನಾಗರಾಜು ಅವರಿಗೆ ವರದಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ್ದ ಆಯುಕ್ತರು, ಮುಟ್ಟುಗೋಲಿಗೆ ಒಪ್ಪಿಗೆ ನೀಡಿ ಜ. 31ರಂದು ಆದೇಶ ಹೊರಡಿಸಿದ್ದಾರೆ. ಅದು ರಾಜ್ಯಪತ್ರದಲ್ಲೂ ಪ್ರಕಟವಾಗಿದೆ’ ಎಂದು ತಿಳಿಸಿದ್ದಾರೆ.

‘ಆರೋಪಿಗಳಿಗೆ ಸಂಬಂಧಪಟ್ಟ 37 ಬ್ಯಾಂಕ್‌ ಖಾತೆಗಳನ್ನು ಜಪ್ತಿ ಮಾಡಲಾಗಿದ್ದು, ಅದರಲ್ಲಿದ್ದ ₹3.45 ಕೋಟಿಯನ್ನು ಡಿ.ಡಿ ರೂಪದಲ್ಲಿ ನ್ಯಾಯಾಲಯದ ಖಾತೆಗೆ ಜಮೆ ಮಾಡಲಾಗಿದೆ’ ಎಂದು ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ.

ಆಸ್ತಿ ವಿವರ
ಫರೀದ್ ಹಾಗೂ ಅಫಾಕ್: ಸಾರಾಯಿಪಾಳ್ಯದಲ್ಲಿ 3 ನಿವೇಶನ, ಅಂಬೇಡ್ಕರ್ ಕಾಲೇಜ್ ಬಡಾವಣೆಯಲ್ಲಿ 1 ಫ್ಲ್ಯಾಟ್‌, ಜಿಗಣಿಯ ಕೆಬಿಎಚ್‌ಸಿ ಎಕ್ಸೋಟಿಕಾದಲ್ಲಿ 14 ಫ್ಲ್ಯಾಟ್‌, ಆನೇಕಲ್ ತಾಲ್ಲೂಕಿನ ಸೊಣ್ಣನಾಯಕನಹಳ್ಳಿಯಲ್ಲಿ 17 ಗುಂಟೆ ಜಮೀನು, ದಿ ಗ್ರೀನ್ಸ್ ಪ್ರಾಜೆಕ್ಟ್‌ನಲ್ಲಿ 11 ಫ್ಲ್ಯಾಟ್‌, ದೇವನಹಳ್ಳಿ ಸ್ಕೈವ್ಯೂ ಪ್ರಾಜೆಕ್ಟ್‌ನಲ್ಲಿ 71 ಫ್ಲ್ಯಾಟ್‌ (ಮೌಲ್ಯ ₹54 ಕೋಟಿ).

ಅಶ್ರಫ್‌ಅಲಿ:ಬಾಗಲೂರಿನಲ್ಲಿ 2 ಎಕರೆ ಜಮೀನು, ಚಿಕ್ಕ ತಾತ ಮಂಗಲದಲ್ಲಿ 1 ನಿವೇಶನ (ಮೌಲ್ಯ ₹1 ಕೋಟಿ) .

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು