ಲೋಕಸಭಾ ಚುನಾವಣೆ: ರಾಜ್ಯ ನಾಯಕರಿಗೆ ಗುರಿ ನಿಗದಿಪಡಿಸಿದ ಶಾ

7
ಅಮಿತ್‌ ಶಾ ವಿಡಿಯೊ ಕಾನ್ಫರೆನ್ಸ್‌

ಲೋಕಸಭಾ ಚುನಾವಣೆ: ರಾಜ್ಯ ನಾಯಕರಿಗೆ ಗುರಿ ನಿಗದಿಪಡಿಸಿದ ಶಾ

Published:
Updated:

ಬೆಂಗಳೂರು: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರು ಎಲ್ಲ ರಾಜ್ಯ ಘಟಕಗಳ ಪ್ರಮುಖರ ಜತೆಗೆ ಗುರುವಾರ ವಿಡಿಯೊ ಕಾನ್ಫರೆನ್ಸ್‌ ನಡೆಸಿ ಲೋಕಸಭಾ ಚುನಾವಣೆಗೆ ಸಿದ್ಧತೆಯನ್ನು ಚುರುಕುಗೊಳಿಸುವಂತೆ ಸೂಚಿಸಿದರು.

ಸುಮಾರು ಒಂದು ಗಂಟೆ ನಡೆದ ವಿಡಿಯೊ ಕಾನ್ಫರೆನ್ಸ್‌ ವೇಳೆ ರಾಜ್ಯದ ಪ್ರತಿನಿಧಿಗಳಾಗಿ ಕೆ.ಎಸ್‌.ಈಶ್ವರಪ್ಪ, ಸಿ.ಟಿ.ರವಿ, ಎನ್‌. ರವಿಕುಮಾರ್‌, ಕೋಟ ಶ್ರೀನಿವಾಸ ಪೂಜಾರಿ, ಭಾರತಿ ಶೆಟ್ಟಿ, ವಾಮನ ಆಚಾರ್ಯ, ಗೋ.ಮಧುಸೂದನ್‌ ಇದ್ದರು.

ಬಿಜೆಪಿ ರಾಜ್ಯ ಘಟಕ ನಡೆಸಿದ ಮಿಸ್ಡ್‌ ಕಾಲ್‌ ಅಭಿಯಾನದ ವೇಳೆ 86 ಲಕ್ಷ ಜನರು ಪಕ್ಷದ ಜತೆಗೆ ಗುರುತಿಸಿಕೊಂಡಿದ್ದರು. ಇವರಲ್ಲಿ 62 ಲಕ್ಷ ಜನರ ವಿಳಾಸ ಸಿಕ್ಕಿದೆ. ರಾಜ್ಯದಲ್ಲಿ 58,126 ಬೂತ್‌ಗಳಿದ್ದು, 12 ಲಕ್ಷ ಕಾರ್ಯಕರ್ತರು ಇದ್ದಾರೆ ಎಂದು ಅಂದಾಜಿಸಲಾಗಿದೆ.

‘ಸಾಧ್ಯವಾದಷ್ಟು ಜನರನ್ನು ಕಾರ್ಯಕರ್ತರನ್ನಾಗಿ ಮಾಡಬೇಕು. 75 ಲಕ್ಷ ಮನೆಗಳ ಮೇಲೆ ಬಿಜೆಪಿ ಬಾವುಟ ಹಾರಿಸಬೇಕು ಎಂಬ ಗುರಿ ನೀಡಿದರು’ ಎಂದು ನಾಯಕರೊಬ್ಬರು ಮಾಹಿತಿ ನೀಡಿದರು.

ಆಯುಷ್ಮಾನ್‌, ಮುದ್ರಾ, ದೀನ್ ದಯಾಳ್ ಗ್ರಾಮ ಜ್ಯೋತಿ ಯೋಜನೆಗಳ ಫಲಾನುಭವಿಗಳನ್ನು ಸಂಪರ್ಕಿಸಿ ಬಿಜೆಪಿಗೆ ಮತ ನೀಡುವಂತೆ ಮಾಡಬೇಕು ಎಂದೂ ಸೂಚಿಸಿದರು ಎಂದರು.

ಪಕ್ಷದ ಚುನಾವಣೆ ಚಟುವಟಿಕೆಗಾಗಿ ಕಾರ್ಯಕರ್ತರಿಂದಲೇ ಧನ ಸಂಗ್ರಹಿಸುವ ಮೂಲಕ ತಮ್ಮ ಪಕ್ಷ ಎಂಬ ಭಾವನೆ ಮೂಡಿಸಲು ದೇಣಿಗೆ ಸಂಗ್ರಹಕ್ಕೆ ಪಕ್ಷ ನಿರ್ಧರಿಸಿದೆ. ಬೂತ್ ಮಟ್ಟದಿಂದ ರಾಜ್ಯಮಟ್ಟದವರೆಗೆ ಯಾವುದೇ ಕಾರ್ಯಕರ್ತರು ₹5ರಿಂದ ₹1 ಸಾವಿರದ ವರೆಗೆ ದೇಣಿಗೆ ನೀಡಬಹುದು. ನಮೋ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಡಿಜಿಟಲ್ ಮಾಧ್ಯಮದ ಮೂಲಕ ಮಾತ್ರ ದೇಣಿಗೆ ನೀಡಬೇಕು ಎಂಬ ಷರತ್ತನ್ನು ಅಮಿತ್ ಶಾ ವಿಧಿಸಿದ್ದಾರೆ ಎಂದು ಅವರು ತಿಳಿಸಿದರು.

ಗೆಲುವಿಗೆ ಹತ್ತಾರು ಕಾರ್ಯಕ್ರಮ

ಲೋಕಸಭೆ ಚುನಾವಣೆ ಗೆಲುವಿಗೆ ಹಮ್ಮಿಕೊಂಡಿರುವ ಹತ್ತಾರು ಕಾರ್ಯಕ್ರಮಗಳ ಯಶಸ್ಸಿಗೆ ಏನು ಮಾಡಬೇಕು ಎಂಬ ಬಗ್ಗೆ ಶಾ ಸಲಹೆ ನೀಡಿದರು. 

ಸಮರ್ಪಣಾ ದಿನ (ಫೆ.11), ಮೇರಾ ಪರಿವಾರ್-ಬಿಜೆಪಿ ಪರಿವಾರ್ (ಫೆ.12), ಮನ್ ಕಿ ಬಾತ್ (ಫೆ.24), ಕಮಲಜ್ಯೋತಿ ಸಂಕಲ್ಪ ದಿವಸ (ಫೆ.26), ಕಮಲ ಸಂದೇಶ ಬೈಕ್ ರ‍್ಯಾಲಿ (ಮಾರ್ಚ್‌ 2), ಶಕ್ತಿಕೇಂದ್ರ ಸಮಾವೇಶಗಳು, ಪ್ರಬುದ್ಧರ ಗೋಷ್ಠಿ, ಯುವ ಪಾರ್ಲಿಮೆಂಟ್, ಭಾರತ್ ಕೆ ಮನ್ ಕಿ ಬಾತ್- ಮೋದಿ ಕೆ ಸಾಥ್, ಮೇರಾ ಬೂತ್ ಸಬ್ ಸೆ ಮಜಬೂತ್, ಬೂತ್ ಮಟ್ಟದ ಕಾರ್ಯಕರ್ತರೊಂದಿಗೆ ಪ್ರಧಾನಿಗಳ ವೀಡಿಯೊ ಸಂವಾದ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಯಶಸ್ಸಿಗೆ ನಡೆದಿರುವ ಸಿದ್ಧತೆಗಳ ಕುರಿತು ರಾಷ್ಟ್ರೀಯ ಅಧ್ಯಕ್ಷರು ರಾಜ್ಯದ ಮುಖಂಡರಿಂದ ಮಾಹಿತಿ ಪಡೆದುಕೊಂಡರು.

ಬರಹ ಇಷ್ಟವಾಯಿತೆ?

 • 6

  Happy
 • 3

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !