ಆನಂದ್‌ ಸಿಂಗ್‌ ಬಿಜೆಪಿ ಸೇರುವುದು ಪಕ್ಕಾ?

ಗುರುವಾರ , ಜೂಲೈ 18, 2019
24 °C

ಆನಂದ್‌ ಸಿಂಗ್‌ ಬಿಜೆಪಿ ಸೇರುವುದು ಪಕ್ಕಾ?

Published:
Updated:
Prajavani

ಹೊಸಪೇಟೆ: ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಆನಂದ್‌ ಸಿಂಗ್‌ ಅವರು ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ಈ ವಿಷಯವನ್ನು ಖಚಿತ ಮೂಲಗಳು ‘ಪ್ರಜಾವಾಣಿ’ಗೆ ದೃಢಪಡಿಸಿವೆ.

ಇದುವರೆಗೆ ಆನಂದ್‌ ಸಿಂಗ್‌ ಅವರು, ‘ಬಿಜೆಪಿ ಸೇರುತ್ತೇನೆ’ ಎಂದು ಎಲ್ಲಿಯೂ ಬಹಿರಂಗವಾಗಿ ಹೇಳಿಕೊಂಡಿಲ್ಲ. ಆದರೆ, ವಿಜಯನಗರ ಕ್ಷೇತ್ರದಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಅವರು ಬಿಜೆಪಿ ಸೇರುವುದು ಪುಷ್ಟೀಕರಿಸುವಂತಿದೆ.

ಸಿಂಗ್‌ ಅವರು ಒಂದುವರೆ ವರ್ಷದ ಹಿಂದೆ ಕಾಂಗ್ರೆಸ್‌ ಸೇರಿದ್ದರು. ಅಂದಿನಿಂದ ಇತ್ತೀಚಿನವರೆಗೆ ಅವರಿಗೆ ಸೇರಿದ ಇಲ್ಲಿನ ಪಟೇಲ್‌ ನಗರದಲ್ಲಿನ ವಿಶಾಲ ಜಾಗದಲ್ಲಿ ಕಾಂಗ್ರೆಸ್‌ ಕಚೇರಿ ತೆರೆದು, ಪಕ್ಷದ ಎಲ್ಲ ಚಟುವಟಿಕೆಗಳು ಅಲ್ಲಿಯೇ ನೆರವೇರುತ್ತಿದ್ದವು. ರಾಜ್ಯ ಹಾಗೂ ರಾಷ್ಟ್ರೀಯ ಮುಖಂಡರು ಯಾರೆ ಬಂದರೂ ಅಲ್ಲಿಯೇ ಸಭೆ, ಸಮಾರಂಭಗಳನ್ನು ಮಾಡುತ್ತಿದ್ದರು. ಆದರೆ, ಕೆಲವು ದಿನಗಳಿಂದ ಈ ಚಟುವಟಿಕೆಗಳು ನಿಂತಿವೆ. ಕಾರ್ಯಕರ್ತರಿಲ್ಲದೆ ಕಚೇರಿ ಬಿಕೋ ಎನ್ನುತ್ತಿದೆ.

ಇತ್ತೀಚೆಗೆ ನಡೆದ ಬಳ್ಳಾರಿ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯ ಸೋಲಿನ ಕಾರಣ ತಿಳಿಯಲು ಕೆ.ಪಿ.ಸಿ.ಸಿ. ಸತ್ಯಶೋಧನಾ ಸಮಿತಿ ಮಂಗಳವಾರ (ಜು.9) ಸಭೆ ಆಯೋಜಿಸಿದೆ. ಈ ಸಭೆಯು ಆನಂದ್‌ ಸಿಂಗ್‌ ಅವರಿಗೆ ಸೇರಿದ ಜಾಗದ ಬದಲಾಗಿ ಬೇರೊಂದು ಕಡೆ ನಿಗದಿಪಡಿಸಲಾಗಿದೆ. ಅಷ್ಟೇ ಅಲ್ಲ, ಸಭೆ ಕುರಿತು ಸಿಂಗ್‌ ಹಾಗೂ ಅವರ ಬೆಂಬಲಿಗರಿಗೆ ತಿಳಿಸಿಲ್ಲ. ಈ ವಿಷಯವನ್ನು ಸಿಂಗ್‌ ಅವರ ನಿಕಟವರ್ತಿಯೊಬ್ಬರು ಸೋಮವಾರ ‘ಪ್ರಜಾವಾಣಿ’ಗೆ ಖಚಿತಪಡಿಸಿದರು.

ಈ ಕುರಿತು ಆನಂದ್‌ ಸಿಂಗ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಬಿಜೆಪಿ ಸೇರುವುದರ ಬಗ್ಗೆ ಸದ್ಯ ನಾನೇನೂ ಹೇಳಲಾರೆ. ಇನ್ನೂ ಕೆಲವು ದಿನಗಳ ವರೆಗೆ ಕಾದು ನೋಡಿ. ಎಲ್ಲವೂ ಗೊತ್ತಾಗಲಿದೆ’ ಎಂದಷ್ಟೇ ಹೇಳಿದ್ದಾರೆ ಹೊರತು ಬಿಜೆಪಿ ಸೇರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಲ್ಲ.

‘ಆನಂದ್‌ ಸಿಂಗ್‌ ಅವರು ರಾಜೀನಾಮೆ ಹಿಂಪಡೆಯಬೇಕು. ಪಕ್ಷದಲ್ಲಿಯೇ ಇರಬೇಕು ಎಂದು ಒತ್ತಾಯಿಸಿ ಜು.8ರಂದು ನಗರದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ’ ಎಂದು ಬಳ್ಳಾರಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್‌ ಅಧ್ಯಕ್ಷ ಬಿ.ವಿ. ಶಿವಯೋಗಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !