‘ಬಿಜೆಪಿಯ ಬಹುದೊಡ್ಡ ಆಸ್ತಿ’: ಅನಂತಕುಮಾರ್ ಸೇವೆ ನೆನಪಿಸಿಕೊಂಡ ರಾಷ್ಟ್ರ ನಾಯಕರು

7

‘ಬಿಜೆಪಿಯ ಬಹುದೊಡ್ಡ ಆಸ್ತಿ’: ಅನಂತಕುಮಾರ್ ಸೇವೆ ನೆನಪಿಸಿಕೊಂಡ ರಾಷ್ಟ್ರ ನಾಯಕರು

Published:
Updated:

ಬೆಂಗಳೂರು: ‘ಅನಂತಕುಮಾರ್ ಬಿಜೆಪಿ ಪಾಲಿಗೆ ಬಹುದೊಡ್ಡ ಆಸ್ತಿಯಾಗಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿದಂತೆ ಹಲವು ರಾಷ್ಟ್ರನಾಯಕರು ನೆನಪಿಸಿಕೊಂಡಿದ್ದಾರೆ.

‘ಅನಂತಕುಮಾರ್ ಅದ್ವಿತೀಯ ನಾಯಕರಾಗಿದ್ದರು. ಸಮಾಜದ ಬಗ್ಗೆ ಅಪಾರ ಪ್ರೀತಿ ಮತ್ತು ಕಾಳಜಿ ಹೊಂದಿದ್ದರು’ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

ಮತ್ತೊಂದು ಟ್ವಿಟ್‌ನಲ್ಲಿ ‘ಅನಂತಕುಮಾರ್ ಬಿಜೆಪಿಗೆ ಬಹುದೊಡ್ಡ ಆಸ್ತಿಯಾಗಿದ್ದರು’ ಎಂದು ಹೇಳಿದ್ದಾರೆ.

‘ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅವರೊಂದಿಗೆ ಮಾತನಾಡಿದೆ. ಕುಟುಂಬ ಸದಸ್ಯರ ದುಃಖ ನನಗೆ ಅರ್ಥವಾಗುತ್ತೆ’ ಎಂದು ಮೋದಿ ಹೇಳಿದ್ದಾರೆ.

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸಹ ಅನಂತಕುಮಾರ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ‘ಹಿರಿಯ ಸಂಸದೀಯ ಪಟುವಿನ ನಿಧನ ದೇಶದ ಮತ್ತು ಕರ್ನಾಟಕದ ಸಾರ್ವಜನಿಕ ಬದುಕಿಗೆ ಆದ ಬಹುದೊಡ್ಡ ನಷ್ಟ’ ಎಂದು ಟ್ವಿಟ್ ಮಾಡಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಹ ‘ಅನಂತಕುಮಾರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಟ್ವಿಟ್ ಮಾಡಿದ್ದಾರೆ.

ಬಿಜೆಪಿ ರಾಷ್ಟ್ರ ಘಟಕದ ಅಧ್ಯಕ್ಷ ಅಮಿತ್‌ ಶಾ ‘ವಿವಿಧ ಇಲಾಖೆಗಳ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಅನಂತಕುಮಾರ್ ಅತ್ಯುತ್ತಮ ಆಡಳಿತಗಾರರಾಗಿದ್ದರು. ಅವರ ನಿರ್ಗಮನದಿಂದ ಉಂಟಾಗಿರುವ ಖಾಲಿತನವನ್ನು ಪಕ್ಷ ಮತ್ತು ದೇಶ ತಡೆದುಕೊಳ್ಳಲು ಬಹಳ ಕಾಲ ಬೇಕು’ ಎಂದು ನೆನಪಿಸಿಕೊಂಡಿದ್ದಾರೆ.

ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ‘ಅನಂತಕುಮಾರ್ ನಿಧನದಿಂದ ನಿಜಕ್ಕೂ ಆಘಾತವಾಯಿತು, ಬಹಳ ನೋವಾಯಿತು. ಜನರ ಕಲ್ಯಾಣಕ್ಕಾಗಿ ಅವರಿಗಿದ್ದ ಬದ್ಧತೆ ಶ್ಲಾಘನೀಯ’ ಎಂದು ಟ್ವಿಟ್ ಮಾಡಿದ್ದಾರೆ.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ‘ಅನಂತಕುಮಾರ್ ಅವರ ಮಿದುಳು ಮತ್ತು ಹೃದಯದಲ್ಲಿ ಸದಾ ಬೆಂಗಳೂರು ತುಂಬಿತ್ತು’ ಎಂದು ಟ್ವಿಟ್ ಮಾಡಿದ್ದಾರೆ.

ಕೇಂದ್ರ ಸಚಿವ ಸದಾನಂದಗೌಡ, ‘ಅನಂತಕುಮಾರ್‌ ನನ್ನ ಗೆಳೆಯ, ಸೋದರ’ ಎಂದು ನೆನಪಿಸಿಕೊಂಡಿದ್ದಾರೆ.

‘ನನ್ನ ಆತ್ಮೀಯ ಗೆಳೆಯ ಅನಂತಕುಮಾರ್ ನಿಧನದ ಸುದ್ದಿ ಕೇಳಿ ಆಘಾತವಾಯಿತು, ಅಪಾರ ದುಃಖವಾಯಿತು’ ಎಂದು ಕೇಂದ್ರ ರೈಲ್ವೆ ಸಚಿವ ಸುರೇಶ್‌ಪ್ರಭು ಸಂತಾಪ ಸೂಚಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !