ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎರಡನೇ ಬಾರಿ ಶಾಸಕಿಯಾಗಿ ಆಯ್ಕೆಯಾದರು ಅನಿತಾ ಕುಮಾರಸ್ವಾಮಿ

Last Updated 6 ನವೆಂಬರ್ 2018, 6:55 IST
ಅಕ್ಷರ ಗಾತ್ರ

ರಾಮನಗರ: ಅನಿತಾ ಕುಮಾರಸ್ವಾಮಿ ಅವರು ರಾಮನಗರ ಜಿಲ್ಲೆಯಲ್ಲಿ ಸತತ ಎರಡು ಸೋಲುಗಳ ಬಳಿಕ ಮೂರನೇ ಪ್ರಯತ್ನದಲ್ಲಿ ಗೆಲುವು ಕಂಡಿದ್ದಾರೆ. ಅನಿತಾ ಮೊದಲ ಬಾರಿಗೆ ಶಾಸಕಿಯಾಗಿ ಆಯ್ಕೆಯಾಗಿದ್ದು ಮಧುಗಿರಿ ಕ್ಷೇತ್ರದಲ್ಲಿ. 2008ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಅವರು ಆ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕಿಯಾದರು. ಆದರೆ ಮುಂದಿನ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರಕ್ಕೆ ವಲಸೆ ಬಂದರು.

2013ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅನಿತಾ ಗೆಲ್ಲುವ ಕನಸು ಹೊಂದಿದ್ದರು. ಆದರೆ ಚನ್ನಪಟ್ಟಣದ ಮತದಾರರ ಪೂರ್ಣ ಬೆಂಬಲ ಸಿಗಲಿಲ್ಲ. ಸೈಕಲ್ ಚಿಹ್ನೆಯಡಿ ಸ್ಪರ್ಧಿಸಿದ್ದ ಸಿ.ಪಿ. ಯೋಗೇಶ್ವರ್‌ 80,099 ಮತಗಳೊಂದಿಗೆ ಆಯ್ಕೆಯಾದರೆ, ಜೆಡಿಎಸ್ ಅಭ್ಯರ್ಥಿ 73,635 ಮತ ಪಡೆದು ನಿರಾಸೆ ಅನುಭವಿಸಿದರು.

2013ರಲ್ಲಿ ರಾಜ್ಯ ರಾಜಕಾರಣಕ್ಕೆ ಮರಳಿದ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಸಂಸದರಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಅನಿತಾ ಅವರು ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧೆ ಒಡ್ಡಿದರು. ಅವರ ಪ್ರತಿಸ್ಪರ್ಧಿಯಾಗಿದ್ದ ಡಿ.ಕೆ. ಸುರೇಶ್‌ 5.78 ಲಕ್ಷ ಮತಗಳಿಕೆಯ ಮೂಲಕ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾದರು. ಅನಿತಾ 4.41 ಲಕ್ಷ ಮತ ಪಡೆದು ನಿರಾಸೆ ಅನುಭವಿಸಿದರು.

ಬಿ.ಇ. ಪದವೀಧರೆ

54 ವರ್ಷ ವಯಸ್ಸಿನ ಅನಿತಾ ಕುಮಾರಸ್ವಾಮಿ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ತಳಗವಾರ ಗ್ರಾಮದವರು. ಅವರ ತಂದೆ ಡಾ. ಸೀತಾರಾಮ್, ತಾಯಿ ವಿಮಲಾ.ಬಿ.ಇ. ಪದವೀಧರೆ ಆಗಿರುವ ಅನಿತಾ 1986ರ ಮಾರ್ಚ್‌ 13ರಂದು ಎಚ್‌.ಡಿ. ಕುಮಾರಸ್ವಾಮಿ ಅವರನ್ನು ವರಿಸುವ ಮೂಲಕ ಹಾಸನದ ಸೊಸೆಯಾಗಿ ಹೋದರು. ಈ ದಂಪತಿಗೆ ನಿಖಿಲ್‌ಕುಮಾರ್ ಏಕಮಾತ್ರ ಪುತ್ರ.

ಜೆಡಿಎಸ್‌ಗೆ ಸತತ ಆರನೇ ಗೆಲುವು

ಅನಿತಾ ಕುಮಾರಸ್ವಾಮಿ ಗೆಲುವಿನ ಮೂಲಕ ಜೆಡಿಎಸ್ ರಾಮನಗರ ವಿಧಾನಸಭೆ ಕ್ಷೇತ್ರದಲ್ಲಿ ಸತತ ಆರನೇ ಬಾರಿಗೆ ಗೆಲುವು ದಾಖಲಿಸಿದೆ. ಮೂರು ಉಪ ಚುನಾವಣೆಗಳೂ ಸೇರಿ ಒಟ್ಟು 17 ಬಾರಿ ನಡೆದ ಚುನಾವಣೆಗಳಲ್ಲಿ ಆರು ಬಾರಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಜನತಾ ಪರಿವಾರ ಮತ್ತು ಜನತಾದಳದಿಂದ ಮೂವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಕಳೆದ ಐದು ಚುನಾವಣೆಗಳಿಂದ ಜೆಡಿಎಸ್ ಸತತವಾಗಿ ಇಲ್ಲಿ ಗೆಲ್ಲುತ್ತಾ ಬಂದಿತ್ತು. ಎಚ್‌.ಡಿ. ಕುಮಾರಸ್ವಾಮಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT