ಸೋಮವಾರ, ಜನವರಿ 20, 2020
28 °C
ತಿರಂಗ ಹಿಡಿದು ಪ್ರತಿಭಟನೆಗೆ ಬಂದ ಲಕ್ಷಕ್ಕೂ ಹೆಚ್ಚು ಜನ

ಸಿಎಎ, ಎನ್ಆರ್‌ಸಿ ವಿರೋಧಿಸಿ ಭಾರಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಂಗಳೂರು: ಪೌರತ್ವ (ತಿದ್ದುಪಡಿ) ಕಾಯ್ದೆ, ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಮತ್ತು ರಾಷ್ಟ್ರೀಯ ಜನಸಂಖ್ಯಾ ದಾಖಲೆ (ಎನ್‌ಪಿಆರ್‌) ವಿರೋಧಿಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್‌ ಕಮಿಟಿ ನೇತೃತ್ವದಲ್ಲಿ ಬುಧವಾರ ಇಲ್ಲಿನ ಅಡ್ಯಾರ್‌– ಕಣ್ಣೂರಿನಲ್ಲಿ ಭಾರಿ ಪ್ರತಿಭಟನೆ ನಡೆಯಿತು.

ಶ್ವೇತ ವಸ್ತ್ರಧಾರಿಗಳಾಗಿ, ರಾಷ್ಟ್ರ ಧ್ವಜ ಹಿಡಿದು ಸಾಗರದೋಪಾದಿಯಲ್ಲಿ ರಾಷ್ಟ್ರೀಯ ಹೆದ್ದಾರಿ 75ರ ಪಕ್ಕದಲ್ಲಿರುವ ಶಹಾ ಗಾರ್ಡನ್‌ನತ್ತ ಹರಿದುಬಂದ ಜನರು ‘ಆಝಾದಿ’ ಘೋಷಣೆಗಳನ್ನು ಮೊಳಗಿಸುತ್ತಾ ಪೌರತ್ವ ಸಂಬಂಧಿ ಪರಿಶೀಲನೆಯ ವಿರುದ್ಧ ಬಲ ಪ್ರದರ್ಶನಕ್ಕೆ ಧ್ವನಿಗೂಡಿಸಿದರು. ಪೊಲೀಸ್‌ ಮಾಹಿತಿ ಪ್ರಕಾರವೇ, ಲಕ್ಷಕ್ಕೂ ಹೆಚ್ಚು ಮಂದಿ ಈ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.

ಮಧ್ಯಾಹ್ನ 2.30ಕ್ಕೆ ಆರಂಭವಾದ ಪ್ರತಿಭಟನೆ ಸಂಜೆ 6ರವರೆಗೂ ನಡೆಯಿತು. ಶಹಾ ಗಾರ್ಡನ್‌ ಮತ್ತು ಸುತ್ತಮುತ್ತಲಿನ ಪ್ರದೇಶ ಜನರಿಂದ ಕಿಕ್ಕಿರಿದು ತುಂಬಿಹೋಗಿತ್ತು. ರಾಷ್ಟ್ರೀಯ ಹೆದ್ದಾರಿಯ ಎರಡೂ ಬದಿಗಳಲ್ಲಿ ಕಿಲೋಮೀಟರ್‌ಗಟ್ಟಲೆ ಜನರು ತುಂಬಿದ್ದರು. ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರೋಧಿ ಘೋಷಣೆಗಳುಳ್ಳ ಫಲಕಗಳನ್ನು ಹಿಡಿದ ಪ್ರತಿಭಟನಕಾರರು, ಈ ಕಾಯ್ದೆಗಳ ಜಾರಿಯನ್ನು ರದ್ದು ಮಾಡುವಂತೆ ಆಗ್ರಹಿಸಿದರು. ‘ಸಂವಿಧಾನ ರಕ್ಷಿಸಿ– ದೇಶ ಉಳಿಸಿ’ ಎಂಬ ಕೂಗು ಪ್ರತಿಭಟನಾ ಸ್ಥಳದ ಉದ್ದಗಲಕ್ಕೂ ಮಾರ್ದನಿಸಿತು.

ದಕ್ಷಿಣ ಕನ್ನಡ, ಉಡುಪಿ, ಕಾರವಾರ, ಕೊಡಗು ಹಾಗೂ ಕೇರಳದ ಕಾಸರಗೋಡು ಜಿಲ್ಲೆಯ ಜನರು ಈ ಪ್ರತಿಭಟನಾ ಸಮಾವೇಶದಲ್ಲಿ ಭಾಗಿಯಾದರು. ಮುಸ್ಲಿಂ ಸೆಂಟ್ರಲ್‌ ಕಮಿಟಿ ನೇತೃತ್ವದಲ್ಲಿ ನಡೆದ ಹೋರಾಟದಲ್ಲಿ 28 ಸಂಘಟನೆಗಳು ಸಹಭಾಗಿತ್ವ ವಹಿಸಿದ್ದವು.

ಡಿಸೆಂಬರ್‌ 19ರಂದು ನಗರದಲ್ಲಿ ನಡೆದ ಪೊಲೀಸ್‌ ಗೋಲಿಬಾರ್‌ನಲ್ಲಿ ಮೃತಪಟ್ಟ ಅಬ್ದುಲ್‌ ಜಲೀಲ್‌ ಕಂದಕ್‌ ಮತ್ತು ನೌಶೀನ್‌ ಕುದ್ರೋಳಿ ಅವರ ಹೆಸರಿನ ವೇದಿಕೆಯಲ್ಲಿ ಪ್ರತಿಭಟನಾ ಸಭೆಯ ನಡೆಯಿತು. ನಿವೃತ್ತ ಐಎಎಸ್‌ ಅಧಿಕಾರಿಗಳಾದ ಹರ್ಷ ಮಂದರ್‌, ಕಣ್ಣನ್‌ ಗೋಪಿನಾಥನ್‌, ಹೋರಾಟಗಾರ ಶಿವಸುಂದರ್‌, ವಕೀಲ ಸುಧೀರ್‌ಕುಮಾರ್‌ ಮುರೊಳ್ಳಿ ಪ್ರಧಾನ ಭಾಷಣಕಾರರಾಗಿ ಮಾತನಾಡಿ, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಮುಸ್ಲಿಂ ಸೆಂಟ್ರಲ್‌ ಕಮಿಟಿ ಅಧ್ಯಕ್ಷ ಕೆ.ಎಸ್‌.ಎಮ್‌.ಮಸೂದ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಶಾಸಕ ಯು.ಟಿ.ಖಾದರ್‌, ವಿಧಾನ ಪರಿಷತ್‌ ಸದಸ್ಯ ಬಿ.ಎಂ.ಫಾರೂಕ್‌, ಮಾಜಿ ಶಾಸಕ ಬಿ.ಎ.ಮೊಹಿಯುದ್ದೀನ್‌ ಬಾವಾ ಸೇರಿದಂತೆ ಹಲವು ಮುಖಂಡರು ಸಭೆಯಲ್ಲಿದ್ದರು.

ಎರಡು ಬಾರಿ ಮುಂದೂಡಿಕೆ: ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಡಿಸೆಂಬರ್‌ನಲ್ಲೇ ಪ್ರತಿಭಟನಾ ಸಭೆ ನಡೆಸಲು ಮುಸ್ಲಿಂ ಸೆಂಟ್ರಲ್‌ ಕಮಿಟಿ ಯೋಚಿಸಿತ್ತು. ಆದರೆ, ನಗರ ಪೊಲೀಸ್‌ ಕಮಿಷನರ್‌ ಅನುಮತಿ ನಿರಾಕರಿಸಿದ್ದರು. ಅದರ ಬೆನ್ನಲ್ಲೇ ಡಿ.19ರಂದು ಗಲಭೆ ನಡೆದು, ಗೋಲಿಬಾರ್‌ನಲ್ಲಿ ಇಬ್ಬರು ಮೃತಪಟ್ಟಿದ್ದರು.

ನಂತರವೂ ನಗರದ ನೆಹರೂ ಮೈದಾನದಲ್ಲೇ ಪ್ರತಿಭಟನಾ ಸಮಾವೇಶ ನಡೆಸಲು ಸಂಘಟನೆ ಮುಂದಾಗಿತ್ತು. ಗೃಹ ಸಚಿವರ ಮನವಿ ಮೇರೆಗೆ ಸಭೆ ಮುಂದೂಡಲಾಗಿತ್ತು. ಮತ್ತೆ ಪ್ರತಿಭಟನಾ ಸಭೆಗೆ ಅನುಮತಿ ಕೋರಿದಾಗ ಕಮಿಷನರ್‌ ನಿರಾಕರಿಸಿದ್ದರು. ಅಂತಿಮವಾಗಿ ಅಡ್ಯಾರ್‌ ಕಣ್ಣೂರು ಶಹಾ ಗಾರ್ಡನ್‌ಗೆ ಸಭೆಯನ್ನು ಸ್ಥಳಾಂತರಿಸಲಾಗಿತ್ತು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು