ಅಧ್ಯಕ್ಷ ಸ್ಥಾನಕ್ಕೆ ಮಧು ಬಂಗಾರಪ್ಪ ನೇಮಿಸಿ| ಶಾಸಕ ಎಚ್‌. ವಿಶ್ವನಾಥ್ ಸಲಹೆ

ಗುರುವಾರ , ಜೂಲೈ 18, 2019
29 °C
ಗ್ರಾಮ ವಾಸ್ತವ್ಯಕ್ಕೆ ಮೆಚ್ಚುಗೆ

ಅಧ್ಯಕ್ಷ ಸ್ಥಾನಕ್ಕೆ ಮಧು ಬಂಗಾರಪ್ಪ ನೇಮಿಸಿ| ಶಾಸಕ ಎಚ್‌. ವಿಶ್ವನಾಥ್ ಸಲಹೆ

Published:
Updated:
Prajavani

ಬೆಂಗಳೂರು: ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಧು ಬಂಗಾರಪ್ಪ ಅವರನ್ನು ನೇಮಕ ಮಾಡುವಂತೆ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್.ವಿಶ್ವನಾಥ್ ಅವರು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದಾರೆ.

‘ಪಕ್ಷ ಸಂಘಟಿಸುವ ದೃಷ್ಟಿಯಿಂದ ಯುವಕರಿಗೆ ಅವಕಾಶ ನೀಡುವುದು ಒಳ್ಳೆಯದು. ಮಧು ಅವರಿಗೆ ನೀಡಿದರೆ ಹಿಂದುಳಿದ ವರ್ಗಕ್ಕೆ ಅವಕಾಶ ನೀಡಿದಂತಾಗುತ್ತದೆ. ಹಿಂದಿನ ಅಧ್ಯಕ್ಷರು ಹೊಸ ಅಧ್ಯಕ್ಷರಿಗೆ ಪಕ್ಷದ ಬಾವುಟ ಕೊಡುವುದು ವಾಡಿಕೆ. ಈ ಕೆಲಸವನ್ನು ನಾನು ಮಾಡುತ್ತೇನೆ’ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರ ಗ್ರಾಮ ವಾಸ್ತವ್ಯವನ್ನು ಸಮರ್ಥಿಸಿಕೊಂಡರು. ಜಡಗೊಂಡಿರುವ ಆಡಳಿತ, ಅಧಿಕಾರಿಗಳನ್ನು ಎಚ್ಚರಿಸಲು ಇದು ಸಹಕಾರಿಯಾಗುತ್ತದೆ. ಅಧಿಕಾರಿಗಳೂ ಗ್ರಾಮ ವಾಸ್ತವ್ಯ ಮಾಡುವ ಮೂಲಕ ಜನರ ಸಮಸ್ಯೆ ಪರಿಹರಿಸಬೇಕು. ದೇವರಾಜ ಅರಸು ಮುಖ್ಯಮಂತ್ರಿ ಆಗಿದ್ದಾಗ ಜನರು ದೂರು ಹೇಳಿಕೊಂಡು ಬಂದರೆ ಅಂತಹ ಅಧಿಕಾರಿಯನ್ನೇ ಎತ್ತಂಗಡಿ ಮಾಡುತ್ತಿದ್ದರು ಎಂದು ನೆನಪು ಮಾಡಿಕೊಂಡರು.

ಮುಖ್ಯಮಂತ್ರಿ ಗ್ರಾಮ ವಾಸ್ತವ್ಯದ ಬಗ್ಗೆ ಬಿಜೆಪಿಯವರು ಅನಾವಶ್ಯಕವಾಗಿ ಟೀಕಿಸುತ್ತಿದ್ದಾರೆ. ಬಿಜೆಪಿಯವರು ಉಪಮುಖ್ಯಮಂತ್ರಿ ಆಗಿದ್ದಾಗಲೇ ಕುಮಾರಸ್ವಾಮಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದರು. ಈಗ ಟೀಕಿಸುವುದರಲ್ಲಿ ಅರ್ಥವಿಲ್ಲ ಎಂದರು.

ಸಾರ್ವಜನಿಕ ಲೆಕ್ಕಪತ್ರ ಸಮಿತಿ ನೀಡುವ ಶಿಫಾರಸು ಅನುಷ್ಠಾನಗೊಳಿಸಲು ಪ್ರತ್ಯೇಕ ಹಣಕಾಸು ಸಚಿವರು ಇರಬೇಕು. ಆದರೆ ಇತ್ತೀಚಿನ ವರ್ಷಗಳಲ್ಲಿ ಮುಖ್ಯಮಂತ್ರಿಗಳೇ ಹಣಕಾಸು ಖಾತೆ ಇಟ್ಟುಕೊಳ್ಳುವುದರಿಂದ ಈ ಕೆಲಸ ಸಮರ್ಥವಾಗಿ ನಡೆಯುತ್ತಿಲ್ಲ ಎಂದರು.

ಆ.20ರಂದು ಪಾದಯಾತ್ರೆ ಆರಂಭ

ಬೆಂಗಳೂರು: ಜೆಡಿಎಸ್‌ ಪಕ್ಷದ ಸಂಘಟನೆ ಮತ್ತು ಬಲವರ್ಧನೆಗಾಗಿ ದೇವರಾಜ ಅರಸು ಅವರ ಜನ್ಮದಿನವಾದ ಆಗಸ್ಟ್‌ 20ರಂದು ನಂಜನಗೂಡಿನಿಂದ ಮೊದಲ ಹಂತದ ಪಾದಯಾತ್ರೆ ಆರಂಭವಾಗಲಿದೆ ಎಂದು ಪಕ್ಷದ ಹಿರಿಯ ಮುಖಂಡ ವೈ.ಎಸ್‌.ವಿ.ದತ್ತ ಹೇಳಿದರು.

‘ಮೊದಲ ಹಂತದಲ್ಲಿ ಕಾವೇರಿಯಿಂದ ತುಂಗಭದ್ರಾವರೆಗೆ ಹಾಗೂ ಎರಡನೇ ಹಂತದಲ್ಲಿ ತುಂಗಭದ್ರಾದಿಂದ ಮಲಪ್ರಭಾದವರೆಗೆ ಪಾದಯಾತ್ರೆ ನಡೆಯಲಿದೆ. ಇದರ ಬಗ್ಗೆ ಸಮಾಲೋಚನೆ ನಡೆಸಲು ಜೂನ್‌ 29ರಂದು ಬೆಳಿಗ್ಗೆ 11ಕ್ಕೆ ನಗರದ ಮ್ಯಾರಿಯೆಟ್‌ ಹೋಟೆಲ್‌ನಲ್ಲಿ ಸಭೆ ನಡೆಯಲಿದೆ’ ಎಂದು ಅವರು ಮಂಗಳವಾರ ಇಲ್ಲಿ ಪತ್ರಕರ್ತರಿಗೆ ತಿಳಿಸಿದರು.

‘ವಿಚಾರ, ವಿಕಾಸ ಮತ್ತು ವಿಶ್ವಾಸ ಎಂಬ ಮೂರು ಪರಿಕಲ್ಪನೆಯೊಂದಿಗೆ ಪಾದಯಾತ್ರೆ ನಡಯಲಿದೆ. ಪ್ರಾದೇಶಿಕ ಹಿತಾಸಕ್ತಿ ಕಾಪಾಡುವುದಕ್ಕೆ ಬಲಿಷ್ಠ ಪ್ರಾದೇಶಿಕ ಪಕ್ಷದ ಅಗತ್ಯ ಇದೆ ಎಂಬುದನ್ನು ಜನತೆಗೆ ಮನವರಿಕೆ ಮಾಡುವ ಪ್ರಯತ್ನ ಮಾಡಲಾಗುತ್ತದೆ. ಕರ್ನಾಟಕದ ಆಡಳಿತ ಕರ್ನಾಟಕದಿಂದಲೇ ಎಂಬುದನ್ನೂ ತಿಳಿಸುವ ಕೆಲಸ ಆಗಲಿದೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !