ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಕಲಾವಿದರಿಗೆ ಸಿರಿಬಾಗಿಲು ಪ್ರತಿಷ್ಠಾನದಿಂದ ಲೇಖನ ಸ್ಫರ್ಧೆ

Last Updated 25 ಏಪ್ರಿಲ್ 2020, 6:15 IST
ಅಕ್ಷರ ಗಾತ್ರ

ಬೆಂಗಳೂರು: ಯಕ್ಷಗಾನದ ಹಲವಾರು ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಗಡಿನಾಡು ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನವು ಇದೀಗ ಕೊರೊನಾ ದಿಗ್ಬಂಧನ ದಿನಗಳ ಅವಧಿಯಲ್ಲಿ, ಈ ಕಲಾ ಪ್ರದರ್ಶನಗಳಿಲ್ಲದೆ ಮನೆಯಲ್ಲೇ ಕುಳಿತಿರುವ ಯಕ್ಷಗಾನ ಕಲಾವಿದರಿಗಾಗಿ ವಿನೂತನ ಸ್ಫರ್ಧೆಯೊಂದನ್ನು ಆಯೋಜಿಸಿದೆ.

ಆಸಕ್ತ ತೆಂಕು ಮತ್ತು ಬಡಗುತಿಟ್ಟಿನ ಕಲಾವಿದರಿಗಾಗಿ "ಕೊರೊನಾ ದಿಗ್ಬಂಧನ - ನಾನು ಕಲಿತ ಪಾಠಗಳು" ಎಂಬ ವಿಷಯದಲ್ಲಿ ಲೇಖನ ಬರೆಯುವ ಸ್ಫರ್ಧೆಯಿದು. ಯಕ್ಷಗಾನದ ವೃತ್ತಿ ಕಲಾವಿದರು, ಹವ್ಯಾಸಿ ಕಲಾವಿದರು ಮತ್ತು ತಾಳಮದ್ದಳೆ ಅರ್ಥಧಾರಿಗಳಿಗಾಗಿ ಪ್ರತ್ಯೇಕವಾದ ಮೂರು ವಿಭಾಗಗಳಲ್ಲಿ ಸ್ಫರ್ಧೆ ನಡೆಯಲಿದ್ದು, ಅನುಕ್ರಮವಾಗಿ 3000, 2000 ಹಾಗೂ 1000 ರೂ. ಬಹುಮಾನಗಳನ್ನು ನೀಡಲಾಗುತ್ತದೆ ಎಂದು ಪ್ರತಿಷ್ಠಾನವು ತಿಳಿಸಿದೆ. ಧರ್ಮಸ್ಥಳ ಯಕ್ಷಗಾನ ಮೇಳದ ಭಾಗವತರಾದ ಸಿರಿಬಾಗಿಲು ರಾಮಕೃಷ್ಣ ಮಯ್ಯ ಅವರ ಮುಂದಾಳುತ್ವದ ಸಿರಿಬಾಗಿಲು ಪ್ರತಿಷ್ಠಾನವು ಇತ್ತೀಚೆಗೆ ಆನ್‌ಲೈನ್ ವೀಕ್ಷಕರಿಗಾಗಿ ಕೊರೊನಾಸುರ ಕಾಳಗ ಎಂಬ ಯಕ್ಷಗಾನವನ್ನು ನಿರ್ಮಿಸಿ ಹೊಸ ಸಾಧ್ಯತೆಯತ್ತ ಗಮನ ಸೆಳೆದಿತ್ತು.

ಲೇಖಕರು ತಮ್ಮ ಯಕ್ಷಗಾನ ಕಲಾ ಅನುಭವದ ಸ್ವ-ಪರಿಚಯದೊಂದಿಗೆ, 1000 ಪದಗಳ ಮಿತಿ ಮೀರದಂತೆ ಲೇಖನಗಳನ್ನು ಸಿರಿಬಾಗಿಲು ಪ್ರತಿಷ್ಠಾನದ ವಾಟ್ಸ್ಆ್ಯಪ್ ನಂಬರ್ ಅಥವಾ ಇಮೇಲ್ ವಿಳಾಸಕ್ಕೆ ಕಳುಹಿಸಬಹುದು. ಅಂತಿಮ ತೀರ್ಮಾನವು ಆಯ್ಕೆ ಸಮಿತಿಯದು. ಲೇಖನಗಳನ್ನು ಮೇ 03, 2020ರ ಸಂಜೆ 5 ಗಂಟೆಯೊಳಗೆ ತಲುಪಿಸುವಂತೆ ಪ್ರತಿಷ್ಠಾನವು ಕೇಳಿಕೊಂಡಿದೆ.

ಸಿರಿಬಾಗಿಲು ಪ್ರತಿಷ್ಠಾನದ ವಾಟ್ಸ್ಆ್ಯಪ್ ಸಂಖ್ಯೆಗಳು 9448344380 ಹಾಗೂ 8073740237. ಇಮೇಲ್ ವಿಳಾಸ siribagilupratishtana@gmail.com.

ವಿವೇಕ್ ರೈ ಮೆಚ್ಚುಗೆ
ಪ್ರತಿಷ್ಠಾನದ ಈ ಕಾರ್ಯವನ್ನು ಸಾಹಿತಿ, ವಿದ್ವಾಂಸ ಡಾ.ವಿವೇಕ್ ರೈ ಮೆಚ್ಚಿಕೊಂಡಿದ್ದಾರೆ. ಯಕ್ಷಗಾನ ಕಲಾವಿದರಿಗೆ ಲಾಕ್‌ಡೌನ್‌ನಿಂದ ಮಾನಸಿಕ ಆಘಾತ ಮತ್ತು ಆರ್ಥಿಕ ಸಂಕಷ್ಟಗಳ ನಡುವೆ ಅವರಿಗೆ ಸಾಂತ್ವನ ಮತ್ತು ಚೇತನ ಕೊಡುವ ಹಾಗೂ ಸೃಜನಶೀಲತೆಯ ಕಡೆಗೆ ಅವರ ಪ್ರತಿಭಾ ಶಕ್ತಿಯನ್ನು ಹರಿಯಗೊಡುವ ಉತ್ತಮ ಕಾರ್ಯಕ್ರಮವಿದಾಗಿದ್ದು, ಫಲಪ್ರದವಾಗಿ ನಡೆಯಲಿ ಎಂದು ಅವರು ಹಾರೈಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT