‘ಅಕ್ಷರ ದೇಗುಲ’ ಉಳಿಸಲು ಆಡಳಿತ ಮಂಡಳಿ ಪಣ

7
ವಾನಳ್ಳಿಯ ಗಜಾನನ ಮಾಧ್ಯಮಿಕ ಶಾಲೆ: ಹಿಂದುಳಿದ ಹಳ್ಳಿಯ ಪ್ರೌಢಶಾಲೆ ಮಕ್ಕಳಿಗೆ ವಾಹನ ವ್ಯವಸ್ಥೆ

‘ಅಕ್ಷರ ದೇಗುಲ’ ಉಳಿಸಲು ಆಡಳಿತ ಮಂಡಳಿ ಪಣ

Published:
Updated:
Deccan Herald

ಶಿರಸಿ: ಕುಗ್ರಾಮಗಳ ಮಕ್ಕಳು ಶಿಕ್ಷಣ ವಂಚಿತರಾಗಬಾರದೆಂಬ ಸದುದ್ದೇಶದಿಂದ ಶಾಲೆಯೊಂದನ್ನು ಉಳಿಸಿಕೊಳ್ಳಲು ಆಡಳಿತ ಮಂಡಳಿ ಪಣತೊಟ್ಟು ನಿಂತಿದೆ. ನಿತ್ಯ ಶಾಲೆಗೆ ಬರುವ ಮಕ್ಕಳಿಗೆ ಉಚಿತ ವಾಹನ ಸೌಲಭ್ಯ ಕಲ್ಪಿಸಿ, ಪಾಲಕರನ್ನು ನಿರಾಳಗೊಳಿಸಿದೆ.

ತಾಲ್ಲೂಕು ಕೇಂದ್ರದಿಂದ 22 ಕಿ.ಮೀ ದೂರದಲ್ಲಿರುವ ವಾನಳ್ಳಿಯಲ್ಲಿ ಮಹಾತ್ಮ ಗಾಂಧಿ ಶತಾಬ್ದಿ ಶಿಕ್ಷಣ ಸಂಸ್ಥೆಯು ಗಜಾನನ ಮಾಧ್ಯಮಿಕ ಶಾಲೆ ನಡೆಸುತ್ತಿದೆ. ‘49 ವರ್ಷಗಳ ಹಿಂದೆ ಆರಂಭವಾದ ಶಾಲೆ, ಕಳೆದ ವರ್ಷ ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸಿತು. 8ನೇ ತರಗತಿಯಲ್ಲಿ 24 ಮಕ್ಕಳಿದ್ದರು. ಸರ್ಕಾರದ ನಿಯಮದಂತೆ ಅನುದಾನಿತ ಶಾಲೆಗಳಲ್ಲಿ ಒಂದು ತರಗತಿಗೆ ಕನಿಷ್ಠ 25 ಮಕ್ಕಳಿರಬೇಕು. ಹಿರಿಯರು ಆರಂಭಿಸಿರುವ ಶಾಲೆ ಮುಚ್ಚಲು ಬಿಡಬಾರದೆಂಬ ಆಶಯದಿಂದ ಆಡಳಿತ ಮಂಡಳಿಯವರು ಮಕ್ಕಳ ಸಂಖ್ಯೆ ಹೆಚ್ಚಿಸಲು ಮುಂದಾಗಿ, ಪ್ರಾಥಮಿಕ ಶಾಲೆಗಳಿರುವ ಸುತ್ತಲಿನ ಊರುಗಳಲ್ಲಿ ಅಭಿಯಾನ ನಡೆಸಿದರು’ ಎನ್ನುತ್ತಾರೆ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಆರ್.ಎ. ಹೆಗಡೆ.

‘ಹಳ್ಳಿಗಳಿಗೆ ಹೋಗಿ ಪಾಲಕರನ್ನು ಭೇಟಿ ಮಾಡಿದಾಗ, ಶ್ರಮಿಕ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಪಾಲಕರು ಹಣ ತೆತ್ತು ಮಕ್ಕಳನ್ನು ಕಳುಹಿಸಲು ಸಾಧ್ಯವಿಲ್ಲವೆಂದರು. ರಸ್ತೆ ದುಃಸ್ಥಿತಿಯ ಕಾರಣಕ್ಕೆ ತೀರಾ ಹಿಂದುಳಿದ ಕಕ್ಕಳ್ಳಿ, ಧೋರಣಗಿರಿಗೆ ಬಸ್ ಸಹ ಹೋಗುವುದಿಲ್ಲ. ಅಲ್ಲಿನ ಮಕ್ಕಳನ್ನು ಶಾಲೆಗೆ ಕರೆತರಲು ವಾಹನ ನಿಗದಿಪಡಿಸುವುದೆಂದು ಆಡಳಿತ ಮಂಡಳಿಯ ಸಭೆಯಲ್ಲಿ ನಿರ್ಧಾರವಾಯಿತು. ಇದೇ ಊರಿನ ವ್ಯಕ್ತಿಯೊಬ್ಬರು ಇದಕ್ಕಾಗಿಯೇ ಸೆಕೆಂಡ್ ಹ್ಯಾಂಡ್ ವಾಹನವನ್ನೂ ಖರೀದಿಸಿದರು. ಈಗ ಈ ವಾಹನದಲ್ಲಿ ನಾಲ್ಕೈದು ಹಳ್ಳಿಗಳ 31 ಮಕ್ಕಳು ಶಾಲೆಗೆ ಬರುತ್ತಾರೆ. ಸಂಘ– ಸಂಸ್ಥೆಗಳು, ಹಳೆ ವಿದ್ಯಾರ್ಥಿಗಳ ಸಹಾಯ ಪಡೆದು ವ್ಯವಸ್ಥೆ ಮುಂದುವರಿಸುವ ಯೋಚನೆ ನಮ್ಮದಾಗಿದೆ. ವಾಹನವಿರುವ ಕಾರಣಕ್ಕೆ ಈ ವರ್ಷ 8ನೇ ತರಗತಿಯಲ್ಲಿ 44 ಮಕ್ಕಳಿದ್ದಾರೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಯ ಮುಖ್ಯ ಶಿಕ್ಷಕರಾಗಿದ್ದ ದಿವಂಗತ ಜಿ.ಆರ್.ಭಟ್ಟ ಕುಂಬಾರ ಕೊಟ್ಟಿಗೆ ಶಾಲೆಯ ಏಳ್ಗೆಗೆ ವಿಶೇಷ ಶ್ರಮವಹಿಸಿದ್ದರು. ಅವರ ಹೆಸರಿನಲ್ಲಿರುವ ದತ್ತಿನಿಧಿಯ ಬಡ್ಡಿ ಹಣದಲ್ಲಿ ಮಕ್ಕಳ ವಾರ್ಷಿಕ ಶುಲ್ಕ ಭರಣ ಮಾಡಿ, ಉಚಿತ ಶಿಕ್ಷಣ ನೀಡಲಾಗುತ್ತಿದೆ. ಈ ಪ್ರೌಢಶಾಲೆ ಮುಚ್ಚಿದರೆ ಸಮೀಪದಲ್ಲಿ ಬೇರೆ ಶಾಲೆಯಿಲ್ಲ. ಸುಮಾರು 20 ಕಿ.ಮೀ ದೂರದ ಧೋರಣಗಿರಿ, ಗೊಣ್ಸರ ಭಾಗದ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯುವ ಸಾಧ್ಯತೆಯಿದೆ. ಹೀಗಾಗಿ, ಶಾಲೆ ಉಳಿಸುವ ಕೊನೆಯ ಪ್ರಯತ್ನ ನಮ್ಮದು’ ಎನ್ನುತ್ತಾರೆ ಆಡಳಿತ ಮಂಡಳಿಯ ಅಧ್ಯಕ್ಷ ಎನ್.ಎಸ್.ಹೆಗಡೆ ಕೋಟಿಕೊಪ್ಪ.

***

ಮಕ್ಕಳ ಕರೆತರಲು ಪ್ರತಿ ದಿನ 104 ಕಿ.ಮೀ ಸಂಚರಿಸುವ ವಾಹನಕ್ಕೆ ತಿಂಗಳಿಗೆ ₹40 ಸಾವಿರ ಖರ್ಚು ಬರುತ್ತದೆ. ದೇಣಿಗೆ ಹಣದಿಂದ ಸದ್ಯಕ್ಕೆ ಈ ವೆಚ್ಚ ಭರಿಸಲಾಗುತ್ತಿದೆ.

- ಆರ್.ಎ.ಹೆಗಡೆ ,ಮುಖ್ಯ ಶಿಕ್ಷಕ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !