3
ಅಧಿಕಾರಿಗಳಿಗೆ ಹಂಗಾಮಿ ಸಭಾಪತಿ ಹೊರಟ್ಟಿ ಎಚ್ಚರಿಕೆ

‘ಅಧಿವೇಶನಕ್ಕೆ ಗೈರಾದರೆ ಕ್ರಮ’

Published:
Updated:

ಬೆಂಗಳೂರು: ‘ಅಧಿವೇಶನಕ್ಕೆ ಗೈರು ಹಾಜರಾಗುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಚಿಂತನೆ ಇದೆ’ ಎಂದು ಹಂಗಾಮಿ ಸಭಾಪತಿ ಬಸವರಾಜ ಹೊರಟ್ಟಿ ಎಚ್ಚರಿಕೆ ನೀಡಿದರು.

ಮಾಧ್ಯಮಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘ಕಲಾಪ ಆರಂಭವಾಗುತ್ತಿದ್ದಂತೆ ಹಾಜರಿರಬೇಕಾದ ಮಂತ್ರಿಗಳು ಮತ್ತು ಅಧಿಕಾರಿಗಳ ಹೆಸರು ಕರೆಯಲಾಗುವುದು. ಗೈರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯುತ್ತೇನೆ’ ಎಂದರು.

‌‘ಸಚಿವರು, ಅಧಿಕಾರಿಗಳ ಅನುಪಸ್ಥಿತಿಯಿಂದ ಸದನದ ಗಾಂಭೀರ್ಯಕ್ಕೆ ಧಕ್ಕೆಯಾಗುತ್ತದೆ. ಹೀಗಾಗಿ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಧಿವೇಶನದಲ್ಲಿ ಹಾಜರಿರಬೇಕು’ ಎಂದು ಅವರು ತಿಳಿಸಿದರು‌. 2ರಿಂದ ಅಧಿವೇಶನ: ಹತ್ತು ದಿನಗಳ ಅಧಿವೇಶನ ಇದೇ 2ರಂದು ಮಧ್ಯಾಹ್ನ 12.30ಕ್ಕೆ ಆರಂಭವಾಗಲಿದೆ. ಮೊದಲ ದಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ನಂತರದ ಎರಡು ದಿನ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. 5ರಂದು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಜೆಟ್‌ ಮಂಡಿಸುವರು ಎಂದು ಹೊರಟ್ಟಿ ತಿಳಿಸಿದರು.

6ರಂದು ಇಲಾಖಾವಾರು ಬೇಡಿಕೆಗಳ ಕುರಿತು ಚರ್ಚೆ ಆರಂಭವಾಗಲಿದೆ. ಅಧಿವೇಶನ ಸಮಾವೇಶದ ಕುರಿತು ಶಾಸಕರಿಗೆ ಸಮನ್ಸ್‌ ನೀಡಲು ವಿಳಂಬವಾಗಿದೆ. ಶಾಸಕರು ಕೇಳಿದ ಪ್ರಶ್ನೆಗಳನ್ನು ಇಲಾಖೆಗಳಿಗೆ ಕಳುಹಿಸಿಕೊಡಲಾಗಿದೆ. ಉತ್ತರ ಬರಲು ಕಾಲಾವಕಾಶ ಅಗತ್ಯ ಇರುವುದರಿಂದ ಪ್ರಶ್ನೋತ್ತರ ಅವಧಿ 9ರಿಂದ ಇರಲಿದೆ ಎಂದರು.

ನೂತನ ಸಭಾಪತಿ ಆಯ್ಕೆ: ನೂತನ ಸಭಾಪತಿ ಆಯ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ‘ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು, ಪ್ರಸ್ತಾವವನ್ನು ರಾಜ್ಯಪಾಲರಿಗೆ ಕಳುಹಿಸಬೇಕು. ರಾಜ್ಯಪಾಲರಿಂದ ಮಾಹಿತಿ ಬಂದ ಬಳಿಕ ಈ ಪ್ರಕ್ರಿಯೆ ಆರಂಭವಾಗಲಿದೆ’ ಎಂದರು.

‘ಸದ್ಯ ನಾನು ಹಂಗಾಮಿ ಸಭಾಪತಿ. ಸಭಾಪತಿ ಆಯ್ಕೆಗೆ ನಾಮಪತ್ರ ಸಲ್ಲಿಸಲು ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಬಳಿಕ ಪ್ರೋಟೆಮ್ (ತಾತ್ಕಾಲಿಕ) ಸಭಾಪತಿ ನೇಮಿಸಿ ಚುನಾವಣೆ ನಡೆಸಲಾಗುತ್ತದೆ’ ಎಂದೂ ಹೊರಟ್ಟಿ ವಿವರಿಸಿದರು.
**
ಪಾಟೀಲ– ಸಿದ್ದರಾಮಯ್ಯ ಚರ್ಚೆ
ಬೆಂಗಳೂರು: ಸಮ್ಮಿಶ್ರ ಸರ್ಕಾರದ ಸಂಪುಟದಲ್ಲಿ ಸ್ಥಾನ ಸಿಗದ ಕಾರಣಕ್ಕೆ ಮುನಿಸಿಕೊಂಡಿದ್ದ ಹಿರಿಯ ಶಾಸಕ ಎಂ.ಬಿ. ಪಾಟೀಲ ಅವರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರನ್ನು ಶನಿವಾರ ಭೇಟಿ ಮಾಡಿ ಮಾತುಕತೆ ನಡೆಸಿದರು.

ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವಕಾಶ ನೀಡುವುದಾಗಿ ಪಾಟೀಲ ಅವರಿಗೆ ಈಗಾಗಲೇ ಕಾಂಗ್ರೆಸ್‌ ಹೈಕಮಾಂಡ್‌ ಭರವಸೆ ನೀಡಿದೆ. ಈ ಮಧ್ಯೆ, ಸಿದ್ದರಾಮಯ್ಯ ಅವರ ಜೊತೆ ಚರ್ಚೆ ನಡೆಸಿರುವುದು ಕುತೂಹಲ ಮೂಡಿಸಿದೆ.

ಸಂಪುಟದಲ್ಲಿ ಅವಕಾಶ ನೀಡದ ಕಾರಣಕ್ಕೆ ತಮ್ಮ ನಿವಾಸದಲ್ಲಿ ಅತೃಪ್ತ ಶಾಸಕರ ಜೊತೆ ಸಭೆ ನಡೆಸಿದ್ದ ಪಾಟೀಲರು, ‘ನಾನು ಏಕಾಂಗಿ ಅಲ್ಲ, ಜೊತೆಯಲ್ಲಿ ಹಲವರಿದ್ದಾರೆ’ ಎಂದು ಹೈಕಮಾಂಡ್‍ಗೆ ಸಂದೇಶ ರವಾನಿಸಿದ್ದರು. ಬಳಿಕ ದೆಹಲಿಗೆ ಕರೆಸಿಕೊಂಡು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‍ ಗಾಂಧಿ ಚರ್ಚೆ ನಡೆಸಿದ್ದರು.

ಸಿದ್ದರಾಮಯ್ಯ ಜೊತೆಗಿನ ರಾಜಕೀಯ ಚರ್ಚೆಯ ಕುರಿತು ವಿವರ ನೀಡಲು ನಿರಾಕರಿಸಿದ ಪಾಟೀಲ, ‘ಸಿದ್ದರಾಮಯ್ಯ ಅವರು ಧರ್ಮಸ್ಥಳದ ಶಾಂತಿವನದಲ್ಲಿ ಪ್ರಕೃತಿ ಚಿಕಿತ್ಸೆ ಪಡೆಯುತ್ತಿದ್ದ ಸಂದರ್ಭದಲ್ಲಿ ಭೇಟಿ ಮಾಡಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅವರ ಮನೆಗೆ ತೆರಳಿ ಭೇಟಿ ಮಾಡಿದ್ದೇನೆ. ಯಾವುದೇ ರಾಜಕೀಯ ವಿಷಯ ಚರ್ಚಿಸಿಲ್ಲ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !