ಆಪರೇಷನ್‌ ಆಡಿಯೊ ಪ್ರಕರಣ: ಎಸ್‌ಐಟಿಗೆ?

7
ವಿಧಾನಸಭಾಧ್ಯಕ್ಷರ ಹೆಸರು ಪ್ರಸ್ತಾಪ– 15 ದಿನಗಳಲ್ಲಿ ವರದಿಗೆ ರಮೇಶ್‌ ಕುಮಾರ್ ರೂಲಿಂಗ್‌

ಆಪರೇಷನ್‌ ಆಡಿಯೊ ಪ್ರಕರಣ: ಎಸ್‌ಐಟಿಗೆ?

Published:
Updated:

ಬೆಂಗಳೂರು: ‘ಆಪರೇಷನ್‌ ಕಮಲ’ದ ಆಡಿಯೊದಲ್ಲಿ ತಮ್ಮ ಹೆಸರು ಉಲ್ಲೇಖವಾಗಿರುವುದರಿಂದ ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ತನಿಖೆ ನಡೆಸಿ 15 ದಿನಗಳಲ್ಲಿ ವರದಿ ಸಲ್ಲಿಸಬೇಕು ಎಂದು ವಿಧಾನಸಭಾಧ್ಯಕ್ಷ ಕೆ.ಆರ್‌.ರಮೇಶ್‌ ಕುಮಾರ್‌ ರೂಲಿಂಗ್‌ ನೀಡಿದರು.

ತನಿಖಾ ಸ್ವರೂಪ, ತಂಡ ರಚನೆ ಬಗ್ಗೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಹಾಗೂ ಹಿರಿಯ ಸಚಿವರ ಜತೆ ಸಂಜೆ ಸಮಾಲೋಚನೆ ನಡೆಸಿದರು. ತಂಡ ರಚನೆಯ ಆದೇಶ ಸೋಮವಾರ ರಾತ್ರಿಯವರೆಗೆ ಹೊರಬಿದ್ದಿಲ್ಲ.

ವಿಧಾನಸಭಾ ಕಲಾ‍ಪ ಆರಂಭವಾಗುತ್ತಿದ್ದಂತೆ ವಿಷಯ ಪ್ರಸ್ತಾಪಿಸಿದ ರಮೇಶ್‌ ಕುಮಾರ್, ‘ಶಾಸಕರ ರಾಜೀನಾಮೆ ಒಪ್ಪಿಕೊಳ್ಳಲು ವಿಧಾನಸಭಾಧ್ಯಕ್ಷರಿಗೆ ₹50 ಕೋಟಿ ಕೊಡಲಾಗಿದೆ ಎಂಬ ಮಾತು ಆಡಿಯೊದಲ್ಲಿದೆ. ಒಂದು ವೇಳೆ ಒಪ್ಪಿಕೊಳ್ಳದಿದ್ದರೆ ನ್ಯಾಯಾಲಯದಲ್ಲಿ ನೋಡಿಕೊಳ್ಳುತ್ತೇವೆ ಎಂದೂ ಹೇಳಿದ್ದಾರೆ. ಆ ಧ್ವನಿ ಯಾರದ್ದು ಎಂಬುದು ನನಗೆ ಗೊತ್ತಿಲ್ಲ. ವಿಧಾನಸಭಾಧ್ಯಕ್ಷರು ತೊಂದರೆ ಮಾಡಿದರೂ ಏನೇನು ಮಾಡಬೇಕು ಎಂಬುದು ಗೊತ್ತಿದೆ ಎನ್ನುವ ಆ ಧ್ವನಿ, ಈ ಹಿಂದೆ ಆ ರೀತಿ ಆದಾಗ ಕೋರ್ಟ್‌ ಮೊರೆ ಹೋಗಿ ನಾವು ಆಯ್ಕೆಯಾಗಿ ಬಂದಿದ್ದೇವೆ ಎಂದೂ ಹೇಳಿದೆ. ಹೀಗಾಗಿ, ಆ ವ್ಯಕ್ತಿ ಈ ಸದನದಲ್ಲಿರುವವರೇ ಆಗಿರಬೇಕು’ ಎಂದು ಶಂಕೆ ವ್ಯಕ್ತಪಡಿಸಿದರು.

‘ತುಂಬಾ ದಿನಗಳ ಕಾಲ ಸಂಶಯಾಸ್ಪದವಾಗಿ ಉಳಿಯುವುದು ನನಗೆ ಕಷ್ಟ. ನಿಜ ಏನು ಎಂದು ಬೇಗ ಗೊತ್ತಾಗಬೇಕಾದರೆ ಎಸ್‌ಐಟಿ ರಚಿಸಿ ತನಿಖೆ ನಡೆಸುವುದು ಸೂಕ್ತ. ಈ ಬಗ್ಗೆ ಸೂಕ್ತ ತೀರ್ಮಾನ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಅವರಿಗೆ ಸಲಹೆ ನೀಡುತ್ತೇನೆ. ನಿರ್ಧಾರ ಅವರಿಗೆ ಬಿಟ್ಟಿದ್ದು’ ಎಂದು ರಮೇಶ್ ಕುಮಾರ್ ಹೇಳಿದರು.

ಆಡಿಯೊದ ಬಗ್ಗೆ ಸಮಗ್ರ ತನಿಖೆ ನಡೆಯಬೇಕು ಎಂದು ಆಡಳಿತ ಪಕ್ಷದ ಸದಸ್ಯರು ಆಗ್ರಹಿಸಿದರು. ವಿಧಾನಸಭಾಧ್ಯಕ್ಷರ ಪ್ರಕರಣಕ್ಕೆ ಸೀಮಿತವಾಗಿ ತನಿಖೆ ನಡೆಸಬೇಕು ಎಂದು ವಿರೋಧ ಪಕ್ಷ ಬಿಜೆಪಿ ಸದಸ್ಯರು ಪಟ್ಟು ಹಿಡಿದರು. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಹ ಆರೋಪಿಯಾಗಿದ್ದು, ಸರ್ಕಾರ ನಡೆಸುವ ತನಿಖೆ ಮೇಲೆ ತಮಗೆ ವಿಶ್ವಾಸ ಇಲ್ಲ ಎಂದು ಬಿಜೆಪಿ ಸದಸ್ಯರು ಪ್ರತಿಪಾದಿಸಿದರು. ಇದಕ್ಕೆ ವಿಧಾನಸಭಾಧ್ಯಕ್ಷರು ಒಪ್ಪಲಿಲ್ಲ.

ಮಧ್ಯಾಹ್ನದ ಬಳಿಕ ಕಲಾಪ ಆರಂಭವಾದಾಗ ರಮೇಶ್‌ ಕುಮಾರ್‌ ಅವರು ತಮ್ಮ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಪಟ್ಟು ಸಡಿಲಿಸದ ಬಿಜೆಪಿ ಸದಸ್ಯರು, ‘ನಿಮ್ಮ ರೂಲಿಂಗ್‌ ಮರುಪರಿಶೀಲಿಸಬೇಕು. ಈ ಪ್ರಕರಣದ ವಿಚಾರಣೆಗೆ ಸದನ ಸಮಿತಿ ರಚಿಸಬೇಕು ಅಥವಾ ನ್ಯಾಯಾಂಗ ವಿಚಾರಣೆಗೆ ಒಪ್ಪಿಸಬೇಕು’ ಎಂದು ಆಗ್ರಹಿಸಿದರು.

ಇದನ್ನೂಓದಿ: ‘ಆಪರೇಷನ್‌ ಕಮಲ’ ಆಡಿಯೊದಲ್ಲಿ ಹೆಸರು, ಹುದ್ದೆಗೆ ಕಳಂಕ: ರಮೇಶ್‌ ಕುಮಾರ್‌ ಭಾವುಕ

‘ನ್ಯಾಯಾಂಗ ವಿಚಾರಣೆಗೆ ಒಪ್ಪಿಸಿದರೆ ಸತ್ಯಾಸತ್ಯತೆ ಹೊರಬರಲು ವಿಳಂಬವಾಗುತ್ತದೆ ಎಂಬ ಕಾರಣಕ್ಕೆ ಈ ತೀರ್ಮಾನಕ್ಕೆ ಬಂದಿದ್ದೇನೆ’ ಎಂದು ಸಭಾಧ್ಯಕ್ಷರು ಸಮರ್ಥನೆ ನೀಡಿದರು. ಆದರೆ, ಅದನ್ನು ಬಿಜೆಪಿ ಸದಸ್ಯರು ಒಪ್ಪಲಿಲ್ಲ.

ಅತೃಪ್ತರ ವಿರುದ್ಧ ಅನರ್ಹತೆ ಅಸ್ತ್ರ

ಪಕ್ಷದ ಅತೃಪ್ತ ನಾಲ್ವರು ಶಾಸಕರನ್ನು ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಅನರ್ಹಗೊಳಿಸುವಂತೆ ಕಾಂಗ್ರೆಸ್‌ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಸಿದ್ದರಾಮಯ್ಯ ಅವರು ವಿಧಾನಸಭಾಧ್ಯಕ್ಷ ಕೆ.ಆರ್‌. ರಮೇಶ್ ಕುಮಾರ್‌ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

ಸಿಎಲ್‌ಪಿ ಸಭೆಗೆ ಗೈರಾದ ಶಾಸಕರಾದ ರಮೇಶ ಜಾರಕಿಹೊಳಿ, ಬಿ. ನಾಗೇಂದ್ರ, ಮಹೇಶ ಕುಮಠಳ್ಳಿ ಮತ್ತು ಉಮೇಶ ಜಾಧವ ಸದಸ್ಯತ್ವ ರದ್ದುಪಡಿಸುವಂತೆ ಕೋರಲಾಗಿದೆ.

ಸಭೆಗೆ ಹಾಜರಾಗದಿರುವುದಕ್ಕೆ ಕಾರಣ ನೀಡುವಂತೆ ನೀಡಿದ ನೋಟಿಸ್‌, ಅದಕ್ಕೆ ನಾಲ್ವರೂ ನೀಡಿದ ಸ್ಪಷ್ಟೀಕರಣ, ಖುದ್ದು ಹಾಜರಾಗುವಂತೆ ಸೂಚಿಸಿ ನೀಡಿದ ಷೋಕಾಸ್‌ ನೋಟಿಸ್‌, ಸಂಬಂಧಿಸಿದ ಸುಮಾರು80 ಪುಟಗಳ ದಾಖಲೆಗಳ ಸಮೇತ ಸಿದ್ದರಾಮಯ್ಯ ಮನವಿ ಸಲ್ಲಿಸಿದ್ದಾರೆ.

ಜಾರಕಿಹೊಳಿಗೆ ಹೈಕೋರ್ಟ್ ನೋಟಿಸ್

‘ಶಾಸಕ ಮಹೇಶ ಕುಮಠಳ್ಳಿ ನಾಪತ್ತೆಯಾಗಿದ್ದು, ಹುಡುಕಿಕೊಡಬೇಕು’ ಎಂದು ಕೋರಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್, ಶಾಸಕ ರಮೇಶ ಜಾರಕಿಹೊಳಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿದೆ.

ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ನೇತೃತ್ವದ ವಿಭಾಗೀಯ ನ್ಯಾಯಪೀಠ ಸೋಮವಾರ ಈ ಅರ್ಜಿ ವಿಚಾರಣೆ ನಡೆಸಿತು.

ಪ್ರತಿವಾದಿಯಾದ ರಾಜ್ಯ ಗೃಹ ಇಲಾಖೆಯ ಕಾರ್ಯದರ್ಶಿ ಮತ್ತು ಅಥಣಿ ಪೊಲೀಸ್‌ ಠಾಣಾಧಿಕಾರಿ ಪ್ರಕರಣದ ವಸ್ತುಸ್ಥಿತಿ ವರದಿ ಮತ್ತು ಆಕ್ಷೇಪಣೆ ಸಲ್ಲಿಸಲು ನ್ಯಾಯಪೀಠ ಸೂಚಿಸಿತು. ಇದೇ 20ಕ್ಕೆ ಅರ್ಜಿ ವಿಚಾರಣೆ ಮುಂದೂಡಲಾಗಿದೆ.

*

ತನಿಖೆ ನಡೆಸಬೇಕಾದರೆ ಕ್ರಿಮಿನಲ್‌ ಪ್ರಕ್ರಿಯೆ ಅಗತ್ಯ. ಹೀಗಾಗಿ ಸದನ ಸಮಿತಿ ತನಿಖೆ ಸರಿಯಾಗದು. ನ್ಯಾಯಾಂಗ ಪ್ರಕ್ರಿಯೆ ಸುದೀರ್ಘ ಆಗಲಿದೆ. ಶೀಘ್ರ ಆರೋಪ ಮುಕ್ತನಾಗಬೇಕಿದೆ

- ಕೆ.ಆರ್.ರಮೇಶ್‌ ಕುಮಾರ್‌, ವಿಧಾನಸಭಾಧ್ಯಕ್ಷ

*

ಈ ಪ್ರಕರಣದಲ್ಲಿ ಮುಖ್ಯಮಂತ್ರಿಯೇ ಆರೋಪಿ. ಎಸ್‌ಐಟಿ ತನಿಖೆಯನ್ನು ಜನರು ಒ‍‍ಪ್ಪುವುದಿಲ್ಲ. ನಿಲುವು ಮರುಪರಿಶೀಲಿಸವಂತೆ ಸಭಾಧ್ಯಕ್ಷರಿಗೆ ಮನವಿ ಮಾಡುತ್ತೇವೆ

- ಬಿ.ಎಸ್‌.ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ

*

ಎಸ್‌ಐಟಿ ತನಿಖೆಗೆ ಅನುಮತಿ ನೀಡುತ್ತೇನೆ. ಬಿಜೆಪಿ ಆಕ್ಷೇಪಿಸಿದೆ. ತನಿಖೆ ಯಾವ ರೀತಿಯಲ್ಲಿ ನಡೆಯಬೇಕು ಎಂಬುದನ್ನು ವಿಧಾನಸಭಾಧ್ಯಕ್ಷರೇ ನಿರ್ಧರಿಸಲಿ  

-ಎಚ್‌.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 1

  Sad
 • 1

  Frustrated
 • 1

  Angry

Comments:

0 comments

Write the first review for this !