ಶುಕ್ರವಾರ, ನವೆಂಬರ್ 22, 2019
25 °C
ಸ್ವಪಕ್ಷೀಯರ ಅಸಹಕಾರ: ಯಡಿಯೂರಪ್ಪ ಕೆಂಡದ ಮಳೆ

‘ಸಿ.ಎಂ ಆಗಿ ಅಪರಾಧ ಮಾಡಿದೆ’

Published:
Updated:
Prajavani

ಬೆಂಗಳೂರು: ಅನರ್ಹ ಶಾಸಕರ ವಿಚಾರದಲ್ಲಿ ಸ್ವಪಕ್ಷೀಯರ ಅಸಹಕಾರದಿಂದ ಕುದಿಯುತ್ತಿರುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಸರ್ಕಾರಕ್ಕೆ 100 ದಿನಗಳು ತುಂಬುತ್ತಿರುವ ಸಂದರ್ಭದಲ್ಲೇ ತಮ್ಮ ಪಕ್ಷದ ನಾಯಕರು ಮತ್ತು ಹಿರಿಯ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದು, ಮಾತಿನಲ್ಲೇ ಕೆಂಡದ ಮಳೆ ಸುರಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಪಕ್ಷದ ಪ್ರಮುಖರ ಸಭೆಗೂ ಮುನ್ನ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಯಡಿಯೂರಪ್ಪ ಆಡಿರುವ ಆಕ್ರೋಶ ಭರಿತ ಮಾತುಗಳ ಧ್ವನಿ ಮುದ್ರಣ ಶನಿವಾರ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

‘ನೀವು ಮಾತನಾಡಿದ ಧಾಟಿ ನೋಡಿದರೆ ಸರ್ಕಾರ ಉಳಿಸುವಂತೆ ಇದೆ ಅಂತ ಅನ್ನಿಸುತ್ತಿಲ್ಲ. 17 ಶಾಸಕರ ರಾಜೀನಾಮೆ ತೀರ್ಮಾನ ನಾನು ತೆಗೆದುಕೊಂಡಿದ್ದಲ್ಲ. ರಾಷ್ಟ್ರೀಯ ಅಧ್ಯಕ್ಷರಿಗೆ ಗೊತ್ತಿದ್ದೇ ಎರಡೂವರೆ ತಿಂಗಳು ಶಾಸಕರನ್ನು ಮುಂಬೈಯಲ್ಲಿ ಇಟ್ಟಿದ್ದು ನಿಮಗೆಲ್ಲ ಗೊತ್ತಿದೆಯಲ್ಲವೆ’ ಎಂದು ಯಡಿಯೂರಪ್ಪ ಪ್ರಶ್ನಿಸಿದ್ದಾರೆ.

‘ನನಗೇನು ಮುಖ್ಯಮಂತ್ರಿಗಿರಿ ಬೇಕಾಗಿಲ್ಲ. 3–4 ಬಾರಿ ಸಿ.ಎಂ ಆಗಿದ್ದೇನೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬಂದು ಉತ್ತಮ ಕೆಲಸ ಮಾಡಬೇಕು ಎಂಬುದಷ್ಟೇ ನನ್ನ ಅಪೇಕ್ಷೆ ಆಗಿತ್ತು. ದೊಡ್ಡತನ, ಧಾರಾಳತನ ನಿಮಗೆ ಇಲ್ಲವಲ್ಲ. ವಾಸ್ತವಿಕ ಸ್ಥಿತಿಯನ್ನು ತಿಳಿದುಕೊಳ್ಳದೇ ಒಬ್ಬೊಬ್ಬರು ಒಂದೊಂದು ರೀತಿ ಮಾತನಾಡುತ್ತೀರಿ’ ಎಂದು ಮಾತಿನ ಚಾಟಿ ಬೀಸಿದ್ದಾರೆ.

‘ಎರಡು ಕ್ಷೇತ್ರಗಳ (ಅಥಣಿ, ಕಾಗವಾಡ) ಬಗ್ಗೆ ನಿಮ್ಮಿಂದ ಇಂತಹ ಅಭಿಪ್ರಾಯ ನಿರೀಕ್ಷಿಸಿರಲಿಲ್ಲ. ರಾಷ್ಟ್ರೀಯ ಅಧ್ಯಕ್ಷರೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿ. ಇಲ್ಲಿ ಹೇಳಿದ ಮಾತು ನಾಲ್ಕು ಗೋಡೆಗಳ ಮಧ್ಯೆ ಇರಲಿ. ನಾನು ಯಾವುದೇ ತೀರ್ಮಾನ ತೆಗೆದುಕೊಳ್ಳುವ ಸ್ಥಿತಿಯಲ್ಲೂ ಇಲ್ಲ’ ಎಂದು ಅಸಹಾಯಕತೆ ತೋಡಿಕೊಂಡಿದ್ದಾರೆ.

‘ನಾನೇ ಅಪರಾಧ ಮಾಡಿದ್ದೇನೆ. ಅವರನ್ನು (17 ಶಾಸಕರು) ನಂಬಿಸಿ, ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಳಿತು ಅಪರಾಧ ಮಾಡಿದ್ದೇನೆ. ಉಪಚುನಾವಣೆಯಲ್ಲಿ ಸೋಲೊ, ಗೆಲುವೊ ಬೇರೆ ಪ್ರಶ್ನೆ. ಆದರೆ, ಯಾರೊಬ್ಬರ ಬಾಯಲ್ಲೂ ಅವರೆಲ್ಲ (ಅನರ್ಹ ಶಾಸಕರು) ತ್ಯಾಗ ಮಾಡಿದ್ದರಿಂದಲೇ ಅಧಿಕಾರಕ್ಕೆ ಬಂದಿದ್ದೇವೆ ಎಂಬ ಮಾತು ಬರಲಿಲ್ಲ’ ಎಂದು ನೋವು ತೋಡಿಕೊಂಡಿದ್ದಾರೆ.

‘ಅವರು ಮೂರ್ಖರು, ಹುಚ್ಚರು. ನಮ್ಮನ್ನು ನಂಬಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದಿದ್ದಾರೆ. ಅವರಿಗೆ ಆ ಅಗತ್ಯವಾದರೂ ಏನಿತ್ತು? ಎರಡು– ಮೂರು ತಿಂಗಳು ಮುಂಬೈನಲ್ಲಿ ಇದ್ದರು. ಕ್ಷೇತ್ರಗಳತ್ತ ಮುಖ ಮಾಡಲಿಲ್ಲ. ಹೆಂಡತಿ, ಮಕ್ಕಳ ಮುಖವನ್ನೂ ನೋಡಲಿಲ್ಲ. ಅದೆಲ್ಲ ನಿಮಗೆ ಗೊತ್ತಿರುವುದೇ’ ಎಂದು ಯಡಿಯೂರಪ್ಪ ಗುಡುಗಿದ್ದಾರೆ.

‘ರಾಜೀನಾಮೆ ಕೊಟ್ಟು ಬಂದವರು ಮೂರ್ಖರಾ? ಇಲ್ಲಿ ನಿಂತು ಉಪದೇಶ, ಭಾಷಣ ಮಾಡುತ್ತೀರಿ. ನೀವು ಅವರ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದಿರಿ. ನಾನು ಮಾತನಾಡಿದ್ದು ಸುದ್ದಿ ಮಾಡಿಸುತ್ತೀರಿ ಎಂಬುದೂ ಗೊತ್ತಿದೆ’ ಎಂದು ಹೇಳಿದ್ದಾರೆ.

‘ಯಾರನ್ನು ತೃಪ್ತಿಪಡಿಸಲು ಹೀಗೆ ಮಾಡ್ತೀರಿ’

ಯಾರನ್ನು ತೃಪ್ತಿ ಪಡಿಸಲು ಹೀಗೆಲ್ಲ ಮಾಡುತ್ತಿದ್ದೀರಿ. ನಾನೂ ಪಕ್ಷದ ಅಧ್ಯಕ್ಷನಾಗಿದ್ದೆ. ಎಲ್ಲೂ ಅಸಹಕಾರ ತೋರಿಸಿರಲಿಲ್ಲ. ನಿಮ್ಮೆಲ್ಲರಿಂದ ನೋವು ನಿರೀಕ್ಷೆ ಮಾಡಿರಲಿಲ್ಲ ಎಂದೂ ಯಡಿಯೂರಪ್ಪ ಗದ್ಗದಿತರಾಗಿ ಹೇಳಿದ್ದಾರೆ.

ಲಕ್ಷ್ಮಣ ಸವದಿ ಕ್ಷೇತ್ರದ ಬಗ್ಗೆ ವರಿಷ್ಠರು ನಿರ್ಧರಿಸುತ್ತಾರೆ. ನಿಮ್ಮ ಬಾಯಲ್ಲಿ ರಾಜು ಕಾಗೆ ಹೆಸರು ಬಂದಿದೆ. ಕಾಗವಾಡದಲ್ಲಿ ಕಾಗೆ 30 ಸಾವಿರಕ್ಕೂ ಹೆಚ್ಚು ಓಟುಗಳಿಂದ ಸೋತಿಲ್ಲವೆ... ನೀವೆಲ್ಲ ಮಾತನಾಡಿದ್ದು ಎಷ್ಟರ ಮಟ್ಟಿಗೆ ಸರಿ ಎಂದೂ ಪ್ರಶ್ನಿಸಿದ್ದಾರೆ.

ಮಂತ್ರಿಗಳು, ಕೇಂದ್ರ ಮಂತ್ರಿಗಳ ಅಭಿಪ್ರಾಯ ಏನಿದೆ ಗೊತ್ತಿಲ್ಲ. ಅದರ ಬಗ್ಗೆ ಚರ್ಚೆ ಮಾಡುವುದಿಲ್ಲ. ಈ ಸಭೆಗೆ ಬರಬಾರದಾಗಿತ್ತು. ಬಂದು ತಪ್ಪು ಮಾಡಿದೆ ಎಂದು ಯಡಿಯೂರಪ್ಪ ತೀವ್ರ ನೊಂದು ನುಡಿದಿದ್ದಾರೆ.

ಪ್ರತಿಕ್ರಿಯಿಸಿ (+)